ಗಿಡ ಬೆಳೆಸಿದರೆ ಹಸಿರಿನೊಂದಿಗೆ ಆನಂದವೂ ಸಿಗಲಿದೆ

7
10 ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ

ಗಿಡ ಬೆಳೆಸಿದರೆ ಹಸಿರಿನೊಂದಿಗೆ ಆನಂದವೂ ಸಿಗಲಿದೆ

Published:
Updated:
ಗಿಡ ಬೆಳೆಸಿದರೆ ಹಸಿರಿನೊಂದಿಗೆ ಆನಂದವೂ ಸಿಗಲಿದೆ

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಲ್ಯಾಣ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಗಿಡ ನೆಡುವ ಮೂಲಕ 10 ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಪರಿಸರ ಉಳಿಸಲು ಸಾರ್ವಜನಿಕರು ಕೈಜೋಡಿಸಬೇಕು. ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಗಿಡಗಳನ್ನು ಬೆಳೆಸಬೇಕು. ಅವು ಬೆಳೆದು ದೊಡ್ಡವಾದಾಗ ಹಸಿರಿನ ಜೊತೆಗೆ ಆನಂದವೂ ಸಿಗುತ್ತದೆ’ ಎಂದರು.

ಮೇಯರ್‌ ಜಿ.ಪದ್ಮಾವತಿ, ‘ಗಿಡ ನೆಡುವ ಕಾರ್ಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಜನರು ಸಹಕಾರ ನೀಡಬೇಕು. ಅಂಗಳವಿರುವ ಪ್ರತಿಯೊಬ್ಬರೂ ಎರಡು ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್, ‘ಪಾಲಿಕೆ ರೂಪಿಸಿರುವ ಗ್ರೀನ್‌ ಆ್ಯಪ್‌ ಮೂಲಕ ಸಸಿ ಪಡೆಯಲು 1.79 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಜೂನ್‌ 10ರ ನಂತರ ಸಸಿಗಳನ್ನು ವಿತರಿಸುತ್ತೇವೆ’ ಎಂದರು.

‘ಅಭಿಯಾನಕ್ಕಾಗಿ ಕೆಂಪಾಪುರ ನರ್ಸರಿಯಲ್ಲಿ 3.60 ಲಕ್ಷ, ಅಟ್ಟೂರಿನಲ್ಲಿ 2.50 ಲಕ್ಷ, ಜ್ಞಾನಭಾರತಿಯಲ್ಲಿ 1 ಲಕ್ಷ, ಹೆಸರಘಟ್ಟದಲ್ಲಿ 2 ಲಕ್ಷ ಹಾಗೂ  ಸುಮ್ಮನಹಳ್ಳಿ ನರ್ಸರಿಯಲ್ಲಿ 45 ಸಾವಿರ ಸಸಿಗಳನ್ನು ಬೆಳೆಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಗ್ರೀನ್‌ ಬೆಲ್‌ ಪ್ರೌಢಶಾಲೆ, ಲಿಟಲ್‌ ಏಂಜಲ್ಸ್‌ ಶಾಲೆ ಮತ್ತು ಫ್ಲಾರೆನ್ಸ್‌ ಶಾಲೆಯ ಮಕ್ಕಳು ಉದ್ಯಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಥಾ ನಡೆಸಿ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

*

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರದಲ್ಲಿ ಮರಗಳ ಗಣತಿ ಮಾಡುತ್ತೇವೆ.

-ಮಂಜುನಾಥ ಪ್ರಸಾದ್‌,

ಬಿಬಿಎಂಪಿ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry