₹2.5 ಕೋಟಿ ಮೊತ್ತದ ರದ್ದಾದ ನೋಟು ಜಪ್ತಿ: ಚರ್ಚ್‌ಸ್ಟ್ರೀಟ್‌ನಲ್ಲಿ ಐವರ ಸೆರೆ

7

₹2.5 ಕೋಟಿ ಮೊತ್ತದ ರದ್ದಾದ ನೋಟು ಜಪ್ತಿ: ಚರ್ಚ್‌ಸ್ಟ್ರೀಟ್‌ನಲ್ಲಿ ಐವರ ಸೆರೆ

Published:
Updated:
₹2.5 ಕೋಟಿ ಮೊತ್ತದ ರದ್ದಾದ ನೋಟು ಜಪ್ತಿ: ಚರ್ಚ್‌ಸ್ಟ್ರೀಟ್‌ನಲ್ಲಿ ಐವರ ಸೆರೆ

ಬೆಂಗಳೂರು: ರದ್ದಾದ ನೋಟುಗಳ ಬದಲಾವಣೆ  ದಂಧೆಯಲ್ಲಿ ತೊಡಗಿದ್ದ 5 ಮಂದಿಯನ್ನು ಬಂಧಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು, ₹ 2.5 ಕೋಟಿ ಮೊತ್ತದ ರದ್ದಾದ ನೋಟುಗಳು ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.

ಚೆನ್ನೈನ ಕಿಶೋರ್, ಸತ್ಯ, ಡೈಮಂಡ್ ರಾಜ್, ಶರವಣ ಪ್ರಿಯನ್ ಹಾಗೂ ಬೆಂಗಳೂರಿನ ರಾಜಗೋಪಾಲ್ ಎಂಬುವರನ್ನು ಬಂಧಿಸಲಾಗಿದೆ. ಸೋಮವಾರ ಮಧ್ಯಾಹ್ನ 3.30ರ  ಸುಮಾರಿಗೆ ಆರೋಪಿಗಳು ಐ–20 ಕಾರಿನಲ್ಲಿ ಚರ್ಚ್‌ಸ್ಟ್ರೀಟ್‌ಗೆ ಬಂದಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು.

‘ನಿವೃತ್ತ ಸಿವಿಲ್ ಎಂಜಿನಿಯರ್ ಮುರಳಿ ಎಂಬುವರು ಕಮಿಷನ್ ಆಧಾರದ ಮೇಲೆ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಹೇಳಿದ್ದರು. ಹೀಗಾಗಿ, ನಮ್ಮ ಬಳಿ ಇದ್ದ ₹ 1,000 ಮುಖಬೆಲೆಯ ರದ್ದಾದ ನೋಟುಗಳನ್ನು ತೆಗೆದುಕೊಂಡು ನಗರಕ್ಕೆ ಬಂದಿದ್ದೆವು’ ಎಂದು ಬಂಧಿತರು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ಇದೀಗ ಮುರಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇವೆ. ಮಂಗಳವಾರ ಬೆಳಿಗ್ಗೆ ಠಾಣೆಗೆ ಹಾಜರಾಗುವುದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಐವರು ಅಪರಿಚಿತರು ಚರ್ಚ್‌ಸ್ಟ್ರೀಟ್‌ನ ಹೋಟೆಲ್‌ವೊಂದರಲ್ಲಿ ಕುಳಿತು ನೋಟು ಬದಲಾವಣೆ ಬಗ್ಗೆ  ಮಾತನಾಡುತ್ತಿದ್ದಾರೆ. ಹೋಟೆಲ್‌ ಹೊರಗಡೆ ತಮಿಳುನಾಡು ನೋಂದಣಿ ಸಂಖ್ಯೆಯ (ಟಿಎನ್ 12 ಎಚ್‌ 6149) ಕಾರು ನಿಂತಿದೆ’ ಎಂದು ಪೊಲೀಸ್ ಬಾತ್ಮೀದಾರರು ಸುಳಿವು ನೀಡಿದರು. ತಕ್ಷಣ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿ ಅವರನ್ನು ಬಂಧಿಸಿದೆವು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry