ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಎದುರಲ್ಲೇ ನೈರ್ಮಲ್ಯ ಸಮಸ್ಯೆ

Last Updated 6 ಜೂನ್ 2017, 4:37 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮ ಪಂಚಾಯಿತಿ ಕೇಂದ್ರದ ಎದುರಲ್ಲೇ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಬೀದರ್–ಔರಾದ್ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಬೇಕಾಬಿಟ್ಟೆ ತಿಪ್ಪೆಗುಂಡಿಗಳು ಮತ್ತು ಬಯಲು ಶೌಚದಿಂದಾಗಿ ನೈರ್ಮಲ್ಯ ಸಮಸ್ಯೆ ಉಲ್ಬಣಿಸಿದೆ. ಈಗ ಮಳೆಗಾಲ ಆರಂಭವಾಗಿರುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಣಿಸಿಕೊಂಡಿದೆ.

ಸುಮಾರು ಮೂರು ಸಾವಿರ ಜನಸಂಖ್ಯೆ ಇರುವ ಕೌಠಾ (ಬಿ), ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಇದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಶಾಪುರ ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಣೆ ಮಾಡಿಕೊಂಡಿದೆ. ಆದರೆ, ಕೌಠಾದಲ್ಲಿ ಮಾತ್ರ ಈಗಲೂ ಶೇ 70ರಷ್ಟು ಜನ ಬಯಲು ಶೌಚಕ್ಕೆ ತೆರಳುತ್ತಾರೆ.

ವಿಷಾದದ ಸಂಗತಿ ಎಂದರೆ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಎದುರಲ್ಲೇ ತಿಪ್ಪೆಗುಂಡಿಗಳಿವೆ. ಗಬ್ಬು ವಾಸನೆಯಿಂದ ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

ಈ ಊರಲ್ಲಿ ಇರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಕುಡಿಯುವ ನೀರಿನದ್ದು. ಊರಿನ ಪಕ್ಕದಲ್ಲೇ ಮಾಂಜರಾ ನದಿ ಹರಿದರೂ ವರ್ಷದ 12 ತಿಂಗಳು ಶುದ್ಧ ಕುಡಿಯುವ ನೀರಿಗೆ ಪರದಾಡಬೇಕಿದೆ. ನದಿಯಿಂದ ಊರಿಗೆ ನೀರು ಬರುತ್ತಾದರೂ ಅವು ಕುಡಿಯಲು ಯೋಗ್ಯ ಅಲ್ಲ.

ಹೀಗಾಗಿ ಗ್ರಾಮಸ್ಥರು ಕೆಲವೆಡೆ ಕೊರೆದ ಕೊಳವೆ ಬಾವಿ ನೀರು ಮಾತ್ರ ಕುಡಿಯಲು ಉಪಯೋಗಿಸುತ್ತಾರೆ. ಊರಿನ ಜನಸಂಖ್ಯೆ ಹೆಚ್ಚು ಇರುವುದರಿಂದ ಈ ನೀರು ಎಲ್ಲರಿಗೂ ಸಾಕಾಗುವುದಿಲ್ಲ. ಹೀಗಾಗಿ ಕುಡಿಯುವ ನೀರಿಗೆ ಪರದಾಡುವುದು ಸಾಮಾನ್ಯವಾಗಿದೆ.

‘ಮಾಂಜರಾ ನದಿಯಿಂದ ಊರಿಗೆ ತರುವ ನೀರಿಗೆ ಶುದ್ಧೀಕರಣ ಘಟಕ ಅಳವಡಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಆದರೆ, ಈ ಕುರಿತು ಸಂಬಂಧಿತರು ಗಮನ ಹರಿಸದೆ ಇರುವುದರಿಂದ ಸಾಮಾನ್ಯ ಜನ ಪರದಾಡಬೇಕಿದೆ’ ಎಂದು ಕೌಠಾದ ಯುವರೈತ ರಮೇಶ ಬಿರಾದಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶೌಚಾಲಯ ಹಣ ಸಾಲದ ಖಾತೆಗೆ:
‘ಕೌಠಾದಲ್ಲಿ ಸ್ವಲ್ಪ ನೈರ್ಮಲ್ಯ ಸಮಸ್ಯೆ ಇರುವುದು ನಿಜ. ಈಗಾಗಲೇ ಕೆಲ ಕಡೆ ತಿಪ್ಪೆಗುಂಡಿಗಳು ತೆರವು ಮಾಡಲಾಗಿದೆ. ಶೌಚಾಲಯ ಕಟ್ಟಿಕೊಳ್ಳಲು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಶೌಚಾಲಯ ಕಟ್ಟಡದ ಸಹಾಯಧನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

ಆದರೆ, ಬ್ಯಾಂಕಿನವರು ಫಲಾನುಭವಿಗಳ ಹಣ ಸಾಲದಲ್ಲಿ ಕಡಿತ ಮಾಡಿಕೊಳ್ಳುತ್ತಿರುವ ಕಾರಣ ಈ ಊರಿನ ಜನ ಶೌಚಾಲಯ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಈ ಕುರಿತು ಸಿಇಒ ಅವರ ಗಮನಕ್ಕೂ ತರಲಾಗಿದೆ’ ಎಂದು ಪಿಡಿಒ ಗಾಯತ್ರಿದೇವಿ ಹೇಳುತ್ತಾರೆ.

* * 

ಕೌಠಾ ಗ್ರಾಮ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿದ್ದರೂ ಸ್ವಚ್ಛ ಭಾರತ ಯೋಜನೆ ಕೇವಲ ಘೋಷಣೆಯಾಗಿ ಉಳಿದಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು.
ವಿಶ್ವನಾಥ ಪಾಟೀಲ ಕೌಠಾ
ಗೌರವಾಧ್ಯಕ್ಷ, ರಾಜ್ಯ ರೈತ ಸಂಘ, ಬೀದರ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT