‘ನಟಿಸುತ್ತಲೇ ಕಲಿಯುವಾಸೆ’

7

‘ನಟಿಸುತ್ತಲೇ ಕಲಿಯುವಾಸೆ’

Published:
Updated:
‘ನಟಿಸುತ್ತಲೇ ಕಲಿಯುವಾಸೆ’

ಕುರುಚಲು ಗಡ್ಡ, ಕಣ್ಣಲ್ಲಿ ತುಂಟತನ, ನಗುಮುಖದ ಈ ಯುವಕ ಮಾಡೆಲಿಂಗ್‌ ಕ್ಷೇತ್ರದಿಂದ ಕಿರುತೆರೆಗೆ ಪ್ರವೇಶಿಸಿದವರು.  ಚಿಕ್ಕಂದಿನಿಂದಲೇ ನಟನಾ ಲೋಕದ ಬಗ್ಗೆ ಕುತೂಹಲ ಹೊಂದಿದ್ದ  ಇವರಿಗೆ ಮೂರು ವರ್ಷದ ಹಿಂದೆ ಮುಂದೊಂದು ದಿನ ತಾನೂ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ.

ಈ ಪರಿಚಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ನಾಯಕ ನಟ ಮಡಿಕೇರಿಯ ಭರತ್‌ ಬೋಪಣ್ಣ  ಅವರದು.   ಇವರಿಗೆ ಬಣ್ಣದ ಲೋಕದತ್ತ ಭಾರಿ ಸೆಳೆತ ಇತ್ತು.  ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಅಪ್್ಲಿಕೇಷನ್‌ನಲ್ಲಿ ಡಿಗ್ರಿ ಮುಗಿಸಿದ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರಿನ ಹಾದಿ ತುಳಿದರು. ಇಲ್ಲಿ ಜಾಬ್‌ ಓರಿಯೆಂಟೆಡ್‌ ಕೋರ್ಸ್‌ಗೆ ಸೇರಿಕೊಂಡರು. ಆಗಲೇ ಇವರ ಕನಸಿಗೆ ರೆಕ್ಕೆ ಬಂದಿದ್ದು.

ಸ್ನೇಹಿತರ ಬಳಿ ನಟನೆಯ ಆಸೆಯನ್ನು ತೋಡಿಕೊಂಡರು. ಇವರ ಕನಸಿಗೆ ಗೆಳೆಯರು ಬೆಂಬಲವಾದರು. 2009ರಲ್ಲಿ ಫ್ಯಾಷನ್‌ ಜಗತ್ತಿಗೆ ಭರತ್‌ ಕಾಲಿಟ್ಟರು. ಮೊದಲ ಬಾರಿ ‘ಮಿ ಮೀಟ್‌ ಆ್ಯಂಡ್‌ ಈಟ್‌’ ಚಿಕನ್‌ ಕುರಿತಾದ ಮುದ್ರಣ ಜಾಹೀರಾತಿನಲ್ಲಿ ನಟಿ ಸಿಂಧು ಲೋಕನಾಥ್‌ ಅವರ ಜತೆ ಕಾಣಿಸಿಕೊಂಡರು. ನಂತರ ಅಮೆಜಾನ್‌, ಐಡೆಂಟಿಟಿ, ಲೀ, ಸ್ಟಿಂಗ್‌ ಹಾಗೂ ಅನೇಕ ಬಟ್ಟೆ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ  ಕಾಣಿಸಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಕಾಣಿಸಿಕೊಂಡರೂ ತೆರೆ ಮೇಲೆ ಕಾಣಿಸಿಕೊಳ್ಳುವ ಇವರ ಆಸೆ ನೆರವೇರಿರಲಿಲ್ಲ.  ಐಟಿ ಕಂಪೆನಿಯೊಂದರಲ್ಲಿ ಸೈಬರ್‌ ಸೆಕ್ಯುರಿಟಿ ಅನಾಲಿಸ್ಟ್‌ ಆಗಿ ಉದ್ಯೋಗಕ್ಕೆ ಸೇರಿಕೊಂಡರು. ಅಲ್ಲಿಯೂ ಇವರ ಹಲವು ಸ್ನೇಹಿತರು, ಸಹೋದ್ಯೋಗಿಗಳೂ  ಧಾರಾವಾಹಿ, ಸಿನಿಮಾದಲ್ಲಿ ನಟಿಸುವಂತೆ ಒತ್ತಾಯ ಮಾಡಿದರು. ಇದು ಇವರ ಕಲೆಯನ್ನು ಮುನ್ನೆಲೆಗೆ ತರಲು ಪ್ರೇರಣೆಯಾಯಿತು.

ಸಹೋದ್ಯೋಗಿಯೊಬ್ಬರು ‘ಗಿರಿಜಾ ಕಲ್ಯಾಣ’ ಸೀರಿಯಲ್‌ ಆಡಿಷನ್‌ ಬಗ್ಗೆ ಮಾಹಿತಿ ನೀಡಿದಾಗ ಭರತ್‌ ತಮ್ಮ ಫೋಟೊ ಹಾಗೂ ವಿವರಗಳನ್ನು ಚಾನೆಲ್‌ ವಿಳಾಸಕ್ಕೆ ಕಳುಹಿಸಿದರು. ಧಾರಾವಾಹಿಗೆ ಆಯ್ಕೆಯೂ ಆದರು. ಆದರೆ ಈ ಸಮಯದಲ್ಲೇ ಅವರು ಅಪ್ಪನನ್ನು ಕಳೆದುಕೊಂಡರು.  ‘ಆ ಸಂದರ್ಭದಲ್ಲಿ ಕೆಲಸ ಬಿಟ್ಟು ಧಾರಾವಾಹಿಗೆ ತೆರಳಿದರೆ, ಮುಂದೆ ಅವಕಾಶ ಕಡಿಮೆಯಾದರೆ? ಎಂಬ  ಗೊಂದಲ ಕಾಡಿತು.‌

ಆದರೂ ಗಟ್ಟಿ ಮನಸ್ಸು ಮಾಡಿ ಧಾರಾವಾಹಿಗೆ ಹೋದೆ’ ಎನ್ನುತ್ತಾರೆ ಅವರು. ಈಗ ತನ್ನ ನಿರ್ಧಾರದ ಬಗ್ಗೆ ಭರತ್‌ಗೆ ಖುಷಿಯಿದೆ. ‘ಈಗ ನಾನು ಹೋದ ಕಡೆಗಳಲ್ಲಿ ಜನರು ಗುರುತಿಸಿ, ಮಾತನಾಡಿಸುತ್ತಾರೆ. ಕಾರ್ಯಕ್ರಮಗಳಿಗೆ ಹೋದಾಗ ಜನ ಪ್ರೀತಿಯಿಂದ ಮಾತನಾಡಿಸಿದಾಗ ನನ್ನ ನಿರ್ಧಾರ ಸರಿ ಎಂದು ಅನ್ನಿಸುತ್ತದೆ’ ಎಂದು ಹೆಮ್ಮೆ ಪಡುತ್ತಾರೆ.

ಅವಕಾಶ ಸಿಕ್ಕರೆ ಚಂದನವನದಲ್ಲಿ ಮಿಂಚುವ ಹಂಬಲ ಇವರದು. ಭರತ್‌ ಡಯೆಟ್‌ ಪ್ರಿಯ. ನಟರಿಗೆ ಡಯೆಟ್‌ ಹಾಗೂ ಫಿಟ್‌ನೆಸ್‌ ಮುಖ್ಯ ಎಂದು ಹೇಳುವ ಅವರು, ದಿನಾ ವೇಟ್‌ ಲಿಫ್ಟಿಂಗ್‌ ಮಾಡುತ್ತಾರೆ. ಶೂಟಿಂಗ್‌ ಇದ್ದಾಗ ರಾತ್ರಿ ಎಷ್ಟೇ ತಡವಾದರೂ ಒಂದು ಗಂಟೆ ಕಾಲ ದೇಹ ಹುರಿಗೊಳಿಸಲು ಮೀಸಲಿಡುತ್ತಾರೆ. 

ದೇಹ ಸೌಂದರ್ಯದೊಂದಿಗೆ ಆರೋಗ್ಯದ ಬಗ್ಗೆಯೂ ಕಾಳಜಿ ಇದೆ ಇವರಿಗೆ. ಹಾಗಾಗಿ ಹೆಚ್ಚು ಪಥ್ಯ ಮಾಡದೆ ಸಮತೋಲಿತ ಆಹಾರ ಸೇವಿಸುತ್ತಾರೆ.  ನಾನ್‌ವೆಜ್‌ ಅಂದ್ರೆ ಇವರಿಗೆ ಬಲು ಇಷ್ಟ. ಎರಡು ದಿನಕ್ಕೊಮ್ಮೆಯಾದರು ಚಿಕನ್‌ ಇರಲೇಬೇಕು. ಸದ್ಯ  ಬ್ರಹ್ಮಗಂಟು ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಭರತ್‌ಗೆ ನಟನಾ ಲೋಕದಲ್ಲಿ ಇನ್ನಷ್ಟು ಪಳಗಬೇಕೆಂಬ ಇಂಗಿತವಿದೆ.  

****

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಸುಂದರ ಹುಡುಗಿಯನ್ನು ಮದುವೆಯಾಗುವ ಕನಸು ಹೊತ್ತಿರುವ ಯುವಕನ ಪಾತ್ರದಲ್ಲಿ ಭರತ್‌ ನಟಿಸುತ್ತಿದ್ದಾರೆ. ‘ಈ ಪಾತ್ರಕ್ಕೂ, ನನಗೂ   ಸಾಮ್ಯತೆ ಇಲ್ಲ. ನಾನೂ ಲಕ್ಕಿಯಷ್ಟು ತುಂಟ ಅಲ್ಲ. ಹಾಗಂತ ತೀರಾ ಗಂಭೀರ ವ್ಯಕ್ತಿ ಕೂಡ ಅಲ್ಲ’ ಎಂದು ನಗುತ್ತಾರೆ.                                                              

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry