ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಾಲ’ ದುರ್ಬಲಕ್ಕೆ ಐಎಎಸ್ ಅಧಿಕಾರಿಗಳು ಕಾರಣ: ಮಥಾಯಿ

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಕಾಲ ಯೋಜನೆ ದುರ್ಬಲಗೊಂಡಿದೆ’ ಎಂದು ಆರೋಪಿಸಿ  ಕೆಎಎಸ್‌ ಅಧಿಕಾರಿ, ಸಕಾಲ ಯೋಜನೆ ಆಡಳಿತಾಧಿಕಾರಿ  ಕೆ. ಮಥಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿದ್ದಾರೆ.

‘ಶಾಲಿನಿ ರಜನೀಶ್ ಅವರು ಯೋಜನೆ ನಿರ್ದೇಶಕರಾಗಿದ್ದಾಗ ಸಕಾಲ ಜನರಿಗೆ ಹತ್ತಿರವಾಗಿತ್ತು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಅನಂತರ ಬಂದ ಐಎಎಸ್‌ ಅಧಿಕಾರಿಗಳಾದ ಎಂ.ವಿ. ಜಯಂತಿ, ಎಂ. ಲಕ್ಷ್ಮೀನಾರಾಯಣ, ಟಿ.ಕೆ. ಅನಿಲ್‌ಕುಮಾರ್, ಎಲ್‌.ಕೆ. ಅತೀಕ್, ರಮಣರೆಡ್ಡಿ  ಆಸಕ್ತಿ ವಹಿಸಲಿಲ್ಲ’ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

‘ಹೊಸ ಪ್ರಯೋಗಗಳ ಬಗ್ಗೆ ಆಲೋಚಿಸಲಿಲ್ಲ. ಮಾಸಿಕ ಪ್ರಗತಿ ವರದಿ ಸಿದ್ಧಪಡಿಸುವುದನ್ನು ಕಾಲ ಕ್ರಮೇಣ ನಿಲ್ಲಿಸಲಾಗಿದೆ’ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಕಲ್ಪನಾ ನಿರ್ದೇಶಕರಾದ ಬಳಿಕವಂತೂ ಯೋಜನೆ ಪ್ರಗತಿ ಪಾತಾಳಕ್ಕೆ ಕುಸಿದಿದೆ. ಆಡಳಿತಾಧಿಕಾರಿಯ ವಾಹನ ಸೌಲಭ್ಯ ಕಸಿದುಕೊಂಡಿದ್ದಾರೆ. ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌, ಐ.ಟಿ (ಮಾಹಿತಿ ತಂತ್ರಜ್ಞಾನ) ಕನ್ಸಲ್ಟೆಂಟ್‌, ಇಬ್ಬರು ಕಂಪ್ಯೂಟರ್‌ ಆಪರೇಟರ್‌, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕೆಲಸದಿಂದ ವಿಮುಕ್ತಿಗೊಳಿಸಿದ್ದಾರೆ’ ಎಂದು ವಿವರಿಸಿದ್ದಾರೆ.

‘ಅಲ್ಲದೇ, ಅವರು ಕಚೇರಿಯ ಸಾದಿಲ್ವಾರು ಖರ್ಚಿಗೆ ಮೀಸಲಿಡುವ ಹಣದಲ್ಲಿ (ಇಂಪ್ರೆಸ್ಟ್‌ ಅಮೌಂಟ್‌) ₹ 75,890 ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮತ್ತೆ ₹ 20,000 ನೀಡಲು ನಿರಾಕರಿಸಿದ ಅಧಿಕಾರಿಗೆ ಅವರ ಖಾಸಗಿ ಆಪ್ತ ಸಹಾಯಕರಿಂದ ಬೆದರಿಕೆ ಹಾಕಿಸಿದ್ದಾರೆ’ ಎಂದು ಮಥಾಯಿ ಆರೋಪಿಸಿದ್ದಾರೆ.

‘ಸಕಾಲ ಯೋಜನೆ ಪ್ರಚಾರಕ್ಕೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕಿದ್ದ ₹ 2 ಕೋಟಿ ವಾಪಸ್‌ ಹೋಗಲು ಅವರೇ ಕಾರಣರಾಗಿದ್ದಾರೆ. ಆದರೆ, ನನ್ನ ಮೇಲೆ ಆರೋಪ ಹೊರಿಸಲು ದಾಖಲೆಗಳನ್ನು ಸೃಷ್ಟಿಸಲು ಯತ್ನಿಸಿದ್ದಾರೆ’ ಎಂದೂ ದೂರಿದ್ದಾರೆ.

ಸಕಾಲ ಯೋಜನೆ ಸಾರ್ವಜನಿಕರಿಂದ ದೂರವಾಗುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಹೆಚ್ಚುತ್ತಿದ್ದಾರೆ. 2016ರಲ್ಲಿ ಸುಮಾರು 35 ಸಾವಿರ ಅರ್ಜಿಗಳು ಬಾಕಿ ಇದ್ದರೂ, ಒಬ್ಬರಿಗೂ ಪರಿಹಾರ ದೊರಕಿಲ್ಲ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT