ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಕ್ಕೆ ಜಗ್ಗಿ, ಕೆಳಕ್ಕೆ ತಳ್ಳುವ ಟ್ರಂಪ್‌

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಈ ಜಗತ್ತಿಗೆ ಅಮೆರಿಕವೇ ನಾಯಕ ಎಂಬ ನಂಬಿಕೆ ನನ್ನ ಜೀವನದಲ್ಲಿ ಇದುವರೆಗೆ ಪ್ರಶ್ನಾತೀತವಾಗಿತ್ತು. ಅಂತರರಾಷ್ಟ್ರೀಯ ಸಂಬಂಧಗಳು, ಸಹಕಾರ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಅಮೆರಿಕದ ಸಾಮರ್ಥ್ಯ ಮತ್ತು ಘನತೆ ಒಂದು ರೀತಿಯ ನೆಲೆಗಟ್ಟು ಒದಗಿಸಿತ್ತು. ಅಮೆರಿಕ ಇಡೀ ಜಗತ್ತಿಗೆ ದಾರಿದೀಪವೂ, ಸಮತೋಲನದ ಅಂಶವೂ ಆಗಿತ್ತು. ಎಲ್ಲ ಸಂದರ್ಭಗಳಲ್ಲಿಯೂ ಅಮೆರಿಕ ಅತ್ಯಂತ ಉದಾತ್ತವಾಗಿ ಮತ್ತು ಪರಿಪೂರ್ಣವಾಗಿ ವರ್ತಿಸಿದೆ ಎಂದಲ್ಲ.  ಈ ದೇಶದ ಕೆಲವು ನಿರ್ಧಾರಗಳು ಕೆಲವೊಮ್ಮೆ ಅನರ್ಥಗಳಿಗೂ ಕಾರಣವಾಗಿವೆ. ಆದರೆ ಅಮೆರಿಕ ಮತ್ತು ಉಳಿದ ಜಗತ್ತು ಪರಸ್ಪರರಿಗೆ ಪೂರಕವಾಗಿ ಇದ್ದಂತೆ ಸದಾ ನನಗೆ ಕಂಡಿತ್ತು.

ಆದರೆ ಆ ದಿನಗಳು ಕೊನೆಯಾಗುವ ಸಂದರ್ಭ ಈಗ ಸನ್ನಿಹಿತವಾಗಿದೆ. ಜಾಗತಿಕ ವೇದಿಕೆಯಿಂದ ಅಮೆರಿಕ ನಿರ್ಗಮಿಸುತ್ತಿದೆ. ಅಮೆರಿಕದ ನಾಯಕತ್ವ ಸ್ಥಾನಕ್ಕೆ ತೆರೆ ಎಳೆಯಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಜ್ಜಾಗಿದ್ದಾರೆ.

ಟ್ರಂಪ್‌ ಅವರು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಟ್ರಾನ್ಸ್‌ ಪೆಸಿಫಿಕ್‌ ಪಾಲುದಾರಿಕೆ  ಒಪ್ಪಂದವನ್ನು (ಆಸ್ಟ್ರೇಲಿಯಾ, ಬ್ರೂನಿ, ಕೆನಡ, ಚಿಲಿ, ಜಪಾನ್‌, ಮಲೇಷ್ಯಾ, ಮೆಕ್ಸಿಕೊ, ನ್ಯೂಜಿಲೆಂಡ್‌, ಪೆರು, ಸಿಂಗಪುರ, ವಿಯೆಟ್ನಾಂ ಮತ್ತು ಅಮೆರಿಕದ ನಡುವಣ ಬಹುಪಕ್ಷೀಯ ವ್ಯಾಪಾರ ಒಪ್ಪಂದ) ರದ್ದುಪಡಿಸಿದ್ದಾರೆ. ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಅದನ್ನು ಹೀಗೆ ವರದಿ ಮಾಡಿದೆ: ‘12 ದೇಶಗಳ ನಡುವಣ ಮಹತ್ವಾಕಾಂಕ್ಷೆಯ ಟ್ರಾನ್ಸ್‌ ಪೆಸಿಫಿಕ್‌ ಒಪ್ಪಂದವನ್ನು ರದ್ದು ಮಾಡುವ ಮೂಲಕ ಅಧ್ಯಕ್ಷ ಟ್ರಂಪ್‌ ಅವರು ಅಮೆರಿಕದ ಪರಂಪರಾಗತ, ದ್ವಿಪಕ್ಷೀಯ ವ್ಯಾಪಾರ ನೀತಿಯನ್ನು  ಬುಡಮೇಲು ಮಾಡಿದ್ದಾರೆ. ಬಹಳ ಹಿಂದಿನಿಂದಲೂ ಟ್ರಂಪ್‌ ಅವರ ಪೂರ್ವಾಧಿಕಾರಿಗಳು ರೂಪಿಸಿಕೊಂಡು ಬಂದ ನೀತಿಯನ್ನು ಕೈಬಿಟ್ಟಿದ್ದಾರೆ. ದಶಕಗಳಿಂದಲೂ ಜಾಗತಿಕ ಅರ್ಥ ವ್ಯವಸ್ಥೆಯನ್ನು ರೂಪಿಸಿದ ಬಹುಪಕ್ಷೀಯ ವ್ಯಾಪಾರ ಒಪ್ಪಂದದ ಯುಗವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ’.

ಜಗತ್ತಿನ ಪ್ರಭಾವಿ ವ್ಯಕ್ತಿಗಳು, ನಿರಂಕುಶಾಧಿಕಾರಿಗಳು ಮತ್ತು ಸರ್ವಾಧಿಕಾರಿ ಆಡಳಿತಗಳ ಬಗ್ಗೆ ಟ್ರಂಪ್ ಅವರಿಗೆ ಅನಾರೋಗ್ಯಕರವಾದ ಮತ್ತು ವಿವರಿಸಲಾಗದ ಮೆಚ್ಚುಗೆ ಹಿಂದೆಯೂ ಇತ್ತು, ಈಗಲೂ ಇದೆ. ಇದರಲ್ಲಿ ಬಹಳ ಮುಖ್ಯವಾದದ್ದು ರಷ್ಯಾ ಮತ್ತು ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಅದರ ಜತೆಗೆ ಅವರು ಅಮೆರಿಕದ ಪರಂಪರಾಗತ ಮಿತ್ರ ರಾಷ್ಟ್ರಗಳು ಮತ್ತು ಆ ದೇಶದ ನಾಯಕರನ್ನು ನಿಂದಿಸುವ ಮತ್ತು ದಂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಅಮೆರಿಕದ ನೆರೆಯ ದೇಶಗಳನ್ನು ಟ್ರಂಪ್ ಅವರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಮೆಕ್ಸಿಕೊದಿಂದ ಬರುವ ವಲಸಿಗರನ್ನು ತಡೆಯುವುದಕ್ಕಾಗಿ ಗಡಿಯಲ್ಲಿ ಗೋಡೆ ಕಟ್ಟುವುದಾಗಿ ಮತ್ತು ಅದಕ್ಕೆ ವೆಚ್ಚವಾಗುವ ಹಣವನ್ನು ಮೆಕ್ಸಿಕೊದಿಂದಲೇ ಪಡೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಕೆನಡದ ಜತೆಗಿನ ಇಂಧನ, ನಾಟಾ ಮತ್ತು ಹೈನು ಉತ್ಪನ್ನಗಳ ವ್ಯಾಪಾರದ ಬಗ್ಗೆಯೂ ಅವರು ಅಪಸ್ವರ ಎತ್ತಿದ್ದಾರೆ. ಹೈನು ಉತ್ಪನ್ನ ವ್ಯಾಪಾರಕ್ಕೆ ಸಂಬಂಧಿಸಿದ ನೀತಿಯನ್ನು ಅವರು ಅಪಮಾನ ಎಂದು ಬಣ್ಣಿಸಿದ್ದಾರೆ. ಯುರೋಪ್‌ನ ಮಿತ್ರ ದೇಶಗಳ ಬಗ್ಗೆಯೂ ಟ್ರಂಪ್ ಅವರ ನಿಲುವು ಹೀಗೆಯೇ ಇದೆ. ಅಮೆರಿಕದ ಕುಸಿತದ ಹೊಸ ಯುಗವೊಂದನ್ನು ಟ್ರಂಪ್ ಅವರು ಏಕಾಂಗಿಯಾಗಿಯೇ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ.

ಕಳೆದ ತಿಂಗಳು ಅವರು ಯುರೋಪ್ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿಯೂ ಅವರು ಎಷ್ಟು ಸಾಧ್ಯವೋ ಅಷ್ಟು ಒರಟಾಗಿ ಮತ್ತು ಜಗಳಗಂಟನಾಗಿ ವರ್ತಿಸಿದ್ದಾರೆ. ಮಧ್ಯಪ್ರಾಚ್ಯದ ನಾಯಕರ ಬಗ್ಗೆ ಉದಾತ್ತವಾಗಿ ಮತ್ತು ಸೌಜನ್ಯದಿಂದ ನಡೆದುಕೊಂಡಿರುವ ಅವರು, ಸೇನಾ ವೆಚ್ಚಕ್ಕೆ ಸಂಬಂಧಿಸಿ ನ್ಯಾಟೊ ಮಿತ್ರ ರಾಷ್ಟ್ರಗಳನ್ನು ಮನಸೋ ಇಚ್ಛೆ ತೆಗಳಿದ್ದಾರೆ.

ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದಾಗಿ ಘೋಷಿಸುವ ಮೂಲಕ ಕಳೆದ ವಾರ ಅವರು ಇಡೀ ಜಗತ್ತಿಗೆ ಮತ್ತು ಭೂಗ್ರಹಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಯೇಲ್‌ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಅಮೆರಿಕದ ಪ್ರತಿ ರಾಜ್ಯದ ಜನರು ಕೂಡ ತಮ್ಮ ದೇಶ ಒಪ್ಪಂದದಲ್ಲಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಟ್ರಂಪ್‌ ಅವರು ಗೆಲುವು ಪಡೆದಿದ್ದ ರಾಜ್ಯಗಳ ಜನರ ಅಭಿಪ್ರಾಯವೂ ಇದೇ ಆಗಿತ್ತು. ಹಾಗಿದ್ದರೂ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಟ್ರಂಪ್‌ ಪ್ರಕಟಿಸಿದ್ದಾರೆ.

ಈ ಒಪ್ಪಂದಕ್ಕೆ ಜನ ಬೆಂಬಲ ಇರಲಿ ಇಲ್ಲದಿರಲಿ, ಅದರಲ್ಲಿ ಮುಂದುವರಿಯುವುದು ಸರಿಯಾದ ನಿರ್ಧಾರ. ಭೂಮಿಯಲ್ಲಿರುವ ಬಹುತೇಕ ದೇಶಗಳು ಅಂದರೆ 190ಕ್ಕೂ ಹೆಚ್ಚು ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.  ನಮಗೆ ಇರುವುದು ಒಂದೇ ಭೂಮಿ. ಅದು ಸಂಕಷ್ಟದಲ್ಲಿದೆ. ಭೂಮಿಯನ್ನು ಉಳಿಸಿಕೊಳ್ಳಲು ಇಡೀ ಜಗತ್ತು ಒಂದಾಗಿ ಹೋರಾಡಬೇಕಿದೆ. ಆದರೆ, ಜಗತ್ತಿನ ಏಕೈಕ ಸೂಪರ್‌ ಪವರ್‌ ದೇಶವು ಅದರಿಂದ ಸುಮ್ಮನೆ ಹೊರನಡೆದರೆ ಅದರ ಅರ್ಥ ಏನು?

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಟ್ರಂಪ್‌ ಅವರು ‘ಅಮೆರಿಕವೇ ಮೊದಲು’ ಎಂಬ ನೀತಿಯನ್ನು ಘೋಷಿಸಿದ್ದರು. ಅದರ ಭಾಗವಾಗಿ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅವರು ಹೇಳಿದ್ದಾರೆ. ಆದರೆ ಒಪ್ಪಂದದಿಂದ ಹಿಂದೆ ಬರುವುದರ ಅರ್ಥ ‘ಅಮೆರಿಕ ಮೊದಲು’ ಎಂಬುದು ಅಲ್ಲ, ಬದಲಿಗೆ ಅಮೆರಿಕವನ್ನು ಪ್ರತಿಗಾಮಿತನದ ಹಾದಿಗೆ ತಂದು ಹಾಕುವುದಾಗಿದೆ. ಜತೆಗೆ, ಇಡೀ ಜಗತ್ತಿನಲ್ಲಿ ಅಮೆರಿಕ ಏಕಾಂಗಿಯಾಗಿಬಿಡುತ್ತದೆ. ಇದರಿಂದಾಗಿ ಅಮೆರಿಕದ ಭವಿಷ್ಯ ಮಾತ್ರವಲ್ಲ, ಇಡೀ ಜಗತ್ತಿನ ಭವಿಷ್ಯವೇ ಅಪಾಯಕ್ಕೆ ಒಳಗಾಗುತ್ತದೆ. ಇದು ಅಪಾಯಕಾರಿ, ಮೂರ್ಖ ಮತ್ತು ಸಮೀಪ ದೃಷ್ಟಿಯ ನಿರ್ಧಾರ.

ತಪ್ಪು ಮಾಹಿತಿಗಳನ್ನು ಇಟ್ಟುಕೊಂಡು ಟ್ರಂಪ್‌ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಪ್ಪಂದದಲ್ಲಿಯೇ ಇಲ್ಲದ ಅಂಶಗಳನ್ನು ಉಲ್ಲೇಖಿಸಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಅವರ ವಾದದಲ್ಲಿ ಇರುವ ಹೊಸ ಅಂಶ ಏನು ಎಂಬುದೇ ತಿಳಿಯುತ್ತಿಲ್ಲ. ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಟ್ರಂಪ್‌ ಅವರು ಘೋಷಿಸಿದ ಭಾಷಣದಲ್ಲಿನ ಈ ಸಾಲುಗಳು ಬಹುಶಃ ಅತ್ಯಂತ ಸ್ಮರಣೀಯ ಅನಿಸಿಕೊಳ್ಳಬಹುದು: ‘ನಾನು ಪಿಟ್ಸ್‌ಬರ್ಗ್‌ನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆಯೇ ಹೊರತು ಪ್ಯಾರಿಸ್‌ನ ಪ್ರತಿನಿಧಿಯಾಗಿ ಅಲ್ಲ. ಅಮೆರಿಕದ ಹಿತಾಸಕ್ತಿಯನ್ನು ಕಾಪಾಡದ ಯಾವುದೇ ಒಪ್ಪಂದದ ಬಗ್ಗೆ ಮರು ಸಂಧಾನ ನಡೆಸುತ್ತೇನೆ ಅಥವಾ ಅದನ್ನು ರದ್ದುಪಡಿಸುತ್ತೇನೆ ಎಂದು ನಾನು ಜನರಿಗೆ ಭರವಸೆ ನೀಡಿದ್ದೇನೆ’.

ಪಾಲಿಟಿ ಫ್ಯಾಕ್ಟ್‌ ಎಂಬ ರಾಜಕೀಯ ಸಂಶೋಧನೆ ನಡೆಸುವ ಅಂತರ್ಜಾಲ ತಾಣ ಗುರುತಿಸಿದಂತೆ ಇಲ್ಲಿ ಇರುವ ಸಮಸ್ಯೆ ಇದು: ಪಿಟ್ಸ್‌ಬರ್ಗ್‌ ನಗರವನ್ನು ಒಳಗೊಂಡ ಆಲಿಗೆನಿ ಕೌಂಟಿಯಲ್ಲಿ ಶೇ 60ರಷ್ಟು ಮತಗಳು ಹಿಲರಿ ಕ್ಲಿಂಟನ್‌ ಅವರಿಗೆ ದೊರೆತಿದ್ದವು. ಪಿಟ್ಸ್‌ಬರ್ಗ್‌ ನಗರದ ಹೊರಗಿನ ಹಲವು ಭಾಗಗಳಲ್ಲಿ ಹಿಲರಿ ಅವರಿಗೆ ದೊರೆತ ಮತದ ಪ್ರಮಾಣ ಇನ್ನೂ ಹೆಚ್ಚು (ಆಲಿಗೆನಿ ಕೌಂಟಿಯಲ್ಲಿ ನಗರಗಳಲ್ಲದೆ ನಗರದ ಹೊರವಲಯದ ಹಲವು ಪ್ರದೇಶಗಳು ಇವೆ).

ಟ್ರಂಪ್‌ ಅವರ ಭಾಷಣದ ನಂತರ ಪಿಟ್ಸ್‌ಬರ್ಗ್‌ನ ಮೇಯರ್‌ ಬಿಲ್‌ ಪೆಡುಟೊ ಅವರು ಸಿಎನ್‌ಎನ್‌ ಸುದ್ದಿ ವಾಹಿನಿಗೆ ಹೀಗೆ ಹೇಳಿದ್ದಾರೆ: ‘ಪಿಟ್ಸ್‌ಬರ್ಗ್‌ ನಗರದ ಶೇ 80ರಷ್ಟು ಜನರು ಹಿಲರಿ ಅವರಿಗೆ ಮತ ಹಾಕಿದ್ದಾರೆ’. ‘ಟ್ರಂಪ್‌ ಅವರಿಗೆ ನೀವು ಏನಾದರೂ ಸಂದೇಶ ನೀಡಲು ಬಯಸುವಿರಾ’ ಎಂಬ ಸುದ್ದಿ ವಾಹಿನಿಯ ಪ್ರಶ್ನೆಗೆ ಬಿಲ್‌ ಅವರು ಹೀಗೆ ಉತ್ತರಿಸಿದ್ದಾರೆ: ‘ನೀವು (ಟ್ರಂಪ್‌) ಕೈಗೊಂಡಿರುವ ನಿರ್ಧಾರ ಅಮೆರಿಕದ ಅರ್ಥ ವ್ಯವಸ್ಥೆಗೆ ಕೆಡುಕು ಉಂಟು ಮಾಡುವುದು ಮಾತ್ರವಲ್ಲದೆ, ಜಗತ್ತಿನಲ್ಲಿ ಅಮೆರಿಕದ ಸ್ಥಾನವನ್ನು ದುರ್ಬಲವಾಗಿಸುತ್ತದೆ’.

ದೇಶದಾದ್ಯಂತ ಇರುವ ಮೇಯರ್‌ಗಳು, ರಾಜ್ಯಗಳ ಗವರ್ನರ್‌ಗಳು ಮತ್ತು ಉದ್ಯಮ ನಾಯಕರು ಟ್ರಂಪ್‌ ಅವರಿಗೆ ತಕ್ಷಣವೇ ತಿರುಗೇಟು ನೀಡಿದ್ದಾರೆ. ಒಪ್ಪಂದದ ಅಂಶಗಳನ್ನು ಅನುಷ್ಠಾನಕ್ಕೆ ತರಲು ತಾವು ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಟ್ರಂಫ್‌ ಅವರು ನೀಡಿದ ಪ್ರತಿಕ್ರಿಯೆ ಇನ್ನೂ ಚೆನ್ನಾಗಿದೆ. ಅವರ ಮೊದಲ ಪ್ರತಿಕ್ರಿಯೆ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸುವುದಾಗಲಿ, ಲಂಡನ್‌ನ ಜನರಿಗೆ ಸಾಂತ್ವನ ಹೇಳುವುದಾಗಲಿ ಆಗಿರಲಿಲ್ಲ. ನೆರವಿನ ಕೊಡುಗೆಯನ್ನೂ ಅವರು ನೀಡಲಿಲ್ಲ. ಅದಕ್ಕೆ ಸ್ವಲ್ಪ ಮಟ್ಟಿನ ಸಹಾನುಭೂತಿ ಮತ್ತು ಸಾಮಾನ್ಯ ಸಭ್ಯತೆಯಾದರೂ ಬೇಕು.

‘ಪ್ರವಾಸ ನಿಷೇಧ’ ಹೇರಿಕೆಯ ತಮ್ಮದೇ ವಿಫಲ ನೀತಿಯನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಉದ್ದೇಶಕ್ಕೆ ಲಂಡನ್‌ ದಾಳಿಯನ್ನು ಅವರು ಬಳಸಿಕೊಂಡರು.

ದಾಳಿ ನಡೆದ ಸ್ವಲ್ಪ ಹೊತ್ತಿನಲ್ಲಿ, ದಾಳಿಯಿಂದ ಲಂಡನ್‌ನ ಜನರು ಸಂಭಾಳಿಸಿಕೊಳ್ಳುವುದಕ್ಕೆ ಮೊದಲೇ ಟ್ರಂಪ್‌ ಅವರು ಹೀಗೆ ಟ್ವೀಟ್‌ ಮಾಡಿದರು: ‘ನಾವು ಹೆಚ್ಚು ಚತುರರು, ಜಾಗರೂಕರು ಮತ್ತು ಗಟ್ಟಿಗರಾಗಬೇಕಿದೆ. ನ್ಯಾಯಾಲಯಗಳು ನಮ್ಮ ಹಕ್ಕುಗಳನ್ನು ನಮಗೆ ಮರಳಿ ನೀಡಬೇಕಿದೆ. ಹೆಚ್ಚುವರಿ  ಸುರಕ್ಷತೆಗಾಗಿ ಪ್ರವಾಸ ನಿಷೇಧವನ್ನು ನಾವು ಜಾರಿ ಮಾಡಬೇಕಿದೆ’.

(ಟ್ರಂಪ್‌ ಅವರು ತಮ್ಮ ನೀತಿಯನ್ನು ಪ್ರವಾಸ ‘ನಿಷೇಧ’ ಎಂದೇ ಕರೆದಿದ್ದಾರೆ. ಜನವರಿಯಲ್ಲಿ ಟ್ರಂಪ್‌ ಅವರು ಪ್ರವಾಸ ನಿಷೇಧ ನೀತಿ ಪ್ರಕಟಿಸಿದಾಗ ಮಾಧ್ಯಮಗಳು ಅದನ್ನು ಹಾಗೆಯೇ ವರದಿ ಮಾಡಿದ್ದವು. ಆದರೆ ನಂತರ, ಶ್ವೇತ ಭವನದ ಮಾದ್ಯಮ ಕಾರ್ಯದರ್ಶಿ ಶಾನ್‌ ಸ್ಪೈಸರ್‌ ಅವರು ‘ನಿಷೇಧ’ ಎಂದು ವರದಿ ಮಾಡಿದ್ದಕ್ಕೆ ಮಾಧ್ಯಮಗಳನ್ನು ಟೀಕಿಸಿದ್ದರು. ‘ಇದು ಮುಸ್ಲಿಮರ ಮೇಲೆ ಹೇರಿರುವ ನಿಷೇಧ ಅಲ್ಲ, ಇದು ಪ್ರವಾಸ ನಿಷೇಧವೂ ಅಲ್ಲ. ಇದು ಅಮೆರಿಕವನ್ನು ಸುರಕ್ಷಿತವಾಗಿ ಇರಿಸುವುದಕ್ಕಾಗಿ ಹೆಚ್ಚುವರಿ ಪರಿಶೀಲನಾ ವ್ಯವಸ್ಥೆ’ ಎಂದು ಅವರು ಹೇಳಿದ್ದರು. ಟ್ರಂಪ್‌ ಅವರು ಪದ ಬಳಕೆಯ ಮೂಲಕ ನ್ಯಾಯಾಲಯದಲ್ಲಿ ತಮ್ಮ ಪ್ರಕರಣವನ್ನು ದುರ್ಬಲಗೊಳಿಸುತ್ತಿದ್ದಾರೆ).

ಟ್ರಂಪ್‌ ಅವರು ಅಮೆರಿಕವನ್ನು ಹಿಂದಕ್ಕೆ ಜಗ್ಗುತ್ತಿದ್ದಾರೆ ಮತ್ತು ಕೆಳಕ್ಕೆ ತಳ್ಳುತ್ತಿದ್ದಾರೆ. ಅಮೆರಿಕ ಅವಿಶ್ವಸನೀಯ ರೀತಿಯಲ್ಲಿ ಸಂಕುಚಿತಗೊಳ್ಳುತ್ತಿರುವುದಕ್ಕೆ ಅಮೆರಿಕನ್ನರು ಸಾಕ್ಷಿಯಾಗುತ್ತಿದ್ದಾರೆ. ಇದು ಬಹಳ ದುಃಖಕರ ಸನ್ನಿವೇಶ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT