ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔತಣಕೂಟದಲ್ಲಿ ಮಲ್ಯ: ಕೊಹ್ಲಿ ಪಡೆಗೆ ಮುಜುಗರ

ವಿರಾಟ್ ಕೊಹ್ಲಿ ‘ಚಾರಿಟಿ ಡಿನ್ನರ್‌’ಗೆ ಕರೆಯದೆ ಬಂದ ಅತಿಥಿ
Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸೋಮವಾರ ರಾತ್ರಿ ಮುಖಾ ಮುಖಿಯಾದರು.
ಆದರೆ, ಮಾತುಕತೆ, ಕುಶಲೋಪರಿಗಳು ನಡೆಯಲೇ ಇಲ್ಲ. ಬದಲಿಗೆ ವಿರಾಟ್ ಸೇರಿದಂತೆ ಭಾರತ ತಂಡದ ಆಟಗಾರರು ತೀವ್ರ ಇರಿಸುಮುರುಸು ಅನುಭವಿಸಿದರು.

ವಿರಾಟ್ ಕೊಹ್ಲಿ ಪ್ರತಿಷ್ಠಾನವು ಲಂಡನ್‌ನಲ್ಲಿ ಆಯೋಜಿಸಿದ್ದ ‘ಸಹಾಯಾರ್ಥ ಔತಣಕೂಟ’ಕ್ಕೆ ಮಲ್ಯ ಅವರು ಬಂದಾಗ ಈ ಘಟನೆ ನಡೆಯಿತು. ಆಟಗಾರರು ಮಲ್ಯ ಅವರಿಂದ ಅಂತರ ಕಾಯ್ದುಕೊಳ್ಳಲು ಹೆಣಗಾಡಿದರು. ಅಲ್ಲದೇ ಆಟಗಾರರೆಲ್ಲರೂ ಕೂಟದಿಂದ ಬೇಗನೆ ನಿರ್ಗಮಿಸಿದರು.

ಐಪಿಎಲ್‌ ಟೂರ್ನಿಯಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರ್ಯಾಂಚೈಸ್‌ಗೆ ಕೆಲ ವರ್ಷಗಳ ಹಿಂದೆ ಮಲ್ಯ ಮಾಲೀಕರಾಗಿದ್ದರು.
ಆದರೆ ಭಾರತದ ಬ್ಯಾಂಕ್‌ಗಳಲ್ಲಿ ₹ 9 ಸಾವಿರ ಕೋಟಿ  ಸಾಲ ಪಡೆದು ವಂಚಿಸಿ ಪರಾರಿಯಾಗಿರುವ ಆರೋಪ ಮಲ್ಯ ಅವರ ಮೇಲಿದೆ. ಅವರು ಕಳೆದ ಹಲವು ತಿಂಗಳುಗಳಿಂದ ಲಂಡನ್‌ನಲ್ಲಿ ಇದ್ದಾರೆ.

‘ವಿರಾಟ್ ಪ್ರತಿಷ್ಠಾನವು ಮಲ್ಯ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ಔತಣಕೂಟದಲ್ಲಿ ಮೇಜು ಕಾಯ್ದಿರಿಸಿದ್ದ ಗಣ್ಯರಲ್ಲಿ ಯಾರೋ ಅವರನ್ನು ಕರೆದು
ಕೊಂಡು ಬಂದಿರುವ ಸಾಧ್ಯತೆ ಇದೆ’ ಎಂದು ಕೂಟದಲ್ಲಿ ಹಾಜರಿದ್ದ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಲ್ಯ ಅವರು ಬಂದ ಮೇಲೆ ಭಾರತದ ಆಟಗಾರರು ಹೆಚ್ಚು ಹೊತ್ತು ಕೂಟದಲ್ಲಿ ಇರಲಿಲ್ಲ. ಇದ್ದಷ್ಟು ಹೊತ್ತು ಮುಜುಗರ ಅನುಭವಿಸಿದರು’ ಎಂದೂ ತಿಳಿಸಿದರು.

ಭಾನುವಾರ ಎಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯವನ್ನು ಮಲ್ಯ ಅವರು  ವೀಕ್ಷಿಸಿದ್ದರು. ಅವರು ಗಣ್ಯರ ಗ್ಯಾಲರಿಯಲ್ಲಿ ಕುಳಿತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

* ಭಾರತ–ಪಾಕ್ ಪಂದ್ಯ ವೀಕ್ಷಿಸಲು ನಾನು ಹೋಗಿದ್ದಕ್ಕೆ ಮಾಧ್ಯಮಗಳು ಒಳ್ಳೆಯ ಪ್ರಚಾರ ನೀಡಿವೆ. ಇಲ್ಲಿ ನಡೆಯುವ ಮುಂದಿನ ಎಲ್ಲ ಪಂದ್ಯಗಳನ್ನೂ ವೀಕ್ಷಿಸುತ್ತೇನೆ.

–ವಿಜಯ್ ಮಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT