15 ದಿನಗಳಲ್ಲಿ ಸಂಪೂರ್ಣ ಖಾಲಿ ಸಾಧ್ಯತೆ

7

15 ದಿನಗಳಲ್ಲಿ ಸಂಪೂರ್ಣ ಖಾಲಿ ಸಾಧ್ಯತೆ

Published:
Updated:
15 ದಿನಗಳಲ್ಲಿ ಸಂಪೂರ್ಣ ಖಾಲಿ ಸಾಧ್ಯತೆ

ಚನ್ನಗಿರಿ: ಏಷ್ಯಾ ಖಂಡದಲ್ಲಿಯೇ ಮಾನವ ನಿರ್ಮಿತ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಸೂಳೆಕೆರೆಯಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನು 15 ದಿನಗಳಲ್ಲಿ ಖಾಲಿಯಾಗುವ ಆತಂಕ ಎದುರಾಗಿದೆ. ಸೂಳೆಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ 27 ಅಡಿ. ಪ್ರಸ್ತುತ ಕೇವಲ ಮೂರು ಅಡಿಗಳಷ್ಟು ನೀರಿನ ಸಂಗ್ರಹವಿದೆ.

ಸುಮಾರು 800 ವರ್ಷಗಳಷ್ಟು ಇತಿಹಾಸ ಹೊಂದಿರುವ ಕೆರೆ 2004ರಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಈಗ ಮತ್ತೆ ಅದೇ ಸನ್ನಿವೇಶ ಎದುರಾಗಿದೆ. ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ಹಾಗೂ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗುವ ಆತಂಕವಿದೆ.

ಪ್ರಸ್ತುತ ಈ ಕೆರೆಯಿಂದ ಜಗಳೂರು ತಾಲ್ಲೂಕಿಗೆ,  ಚಿತ್ರದುರ್ಗ, ತಾಲ್ಲೂಕಿನ ಸಿರಿಗೆರೆ, ಮಲ್ಲಾಡಿಹಳ್ಳಿ, ಭೀಮಸಮುದ್ರ,  ಹೊಳಲ್ಕೆರೆ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಚನ್ನಗಿರಿ ಪಟ್ಟಣ ಸೇರಿದಂತೆ ಸುಮಾರು 50 ಗ್ರಾಮಗಳಿಗೆ, ಕೆರೆಯ ಹಿನ್ನೀರಿನ ದಂಡೆಯಲ್ಲಿರುವ 50 ಗ್ರಾಮಗಳಿಗೂ ಈ ಕೆರೆಯ ನೀರೇ ಆಧಾರವಾಗಿದೆ. ಜತೆಗೆ ನಾಲ್ಕು ತಿಂಗಳಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಈ ಕೆರೆಯ ನೀರನ್ನು ನಿರಂತರವಾಗಿ ಟ್ಯಾಂಕರ್ ಮೂಲಕ ಪೂರೈಸಿಕೊಳ್ಳುತ್ತಿದ್ದರು.

ಈಗ ಮೊಣಕಾಲುದ್ದ ನಿಂತಿರುವ ನೀರಿನಲ್ಲಿ ಕೆರೆ ತುಂಬಾ ಮೀನುಗಾರರು ಮೀನುಗಳನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ.ಇದುವರೆಗೆ ಮುಂಗಾರು ಪೂರ್ವ ಮಳೆ ತಾಲ್ಲೂಕಿನಲ್ಲಿ ಬೀಳದೇ ಇರುವುದರಿಂದ ಕೆರೆಗೆ ನೀರು ಹರಿದು ಬಂದಿಲ್ಲ.

ಜತೆಗೆ ಈ ಕೆರೆಗೆ ಭದ್ರಾ ಕಾಲುವೆಯ ನೀರನ್ನು ಬಿಡಲಾಗುತ್ತಿತ್ತು. ಆದರೆ, ಭದ್ರಾ ಅಣೆಕಟ್ಟಿನಲ್ಲಿ ನೀರು ಇಲ್ಲದ ಕಾರಣ ಒಂದು ತಿಂಗಳಿಂದ ಈ ಕೆರೆಗೆ ಅಲ್ಲಿಂದ ನೀರು ಹರಿದಿಲ್ಲ. ಈ ಎಲ್ಲ ಕಾರಣಗಳಿಂದ ಕೆರೆಯ ನೀರನ್ನು ಆಶ್ರಯಿಸಿ ಜೀವನ ನಡೆಸುತ್ತಿರುವವರು ಚಿಂತೆಗೀಡಾಗಿದ್ದಾರೆ.

ಸೂಳೆಕೆರೆಯಲ್ಲಿ ನೀರು  (ಅಂಕಿ–ಅಂಶ )

27 ಅಡಿ ಗರಿಷ್ಠ ಸಾಮರ್ಥ್ಯ

3 ಅಡಿ ಈಗಿರುವ ನೀರು

2004 ರಲ್ಲಿ ಕೆರೆ ಪೂರ್ಣ ಖಾಲಿಯಾಗಿತ್ತು

800 ವರ್ಷ ಕೆರೆಗಿರುವ ಇತಿಹಾಸ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry