ಹಾಸ್ಟೆಲ್‌: 6 ಸಾವಿರ ಮಕ್ಕಳಿಗೆ ಪ್ರವೇಶ

7

ಹಾಸ್ಟೆಲ್‌: 6 ಸಾವಿರ ಮಕ್ಕಳಿಗೆ ಪ್ರವೇಶ

Published:
Updated:
ಹಾಸ್ಟೆಲ್‌: 6 ಸಾವಿರ ಮಕ್ಕಳಿಗೆ ಪ್ರವೇಶ

ಕೋಲಾರ: ‘ಜಿಲ್ಲೆಯಲ್ಲಿನ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 6,000 ಮಕ್ಕಳಿಗೆ ಪ್ರವೇಶಾವಕಾಶ ಲಭ್ಯವಿದ್ದು, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಚ್. ಜಯಣ್ಣ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯು ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕಿನ ವಿದ್ಯಾರ್ಥಿನಿಲಯಗಳಿಗೆ ಆಧುನಿಕ ಸ್ಪರ್ಶದೊಂದಿಗೆ ಸಂಪೂರ್ಣ ದಾಖಲಾತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ 52 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 4,750 ಹಾಗೂ ಮೆಟ್ರಿಕ್ ನಂತರದ 20 ಹಾಸ್ಟೆಲ್‌ಗಳಲ್ಲಿ 1,250 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಕಳೆದ ವರ್ಷ 4,000 ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದರು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ದಾಖಲಾತಿ ಆಗಬೇಕು. ಈ ದಿಸೆಯಲ್ಲಿ ಹಾಸ್ಟೆಲ್‌ಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ನೀಡಲು ಕರಪತ್ರಗಳನ್ನು ಮುದ್ರಿಸಲಾಗಿದೆ’ ಎಂದು ವಿವರಿಸಿದರು.

ಸೌಲಭ್ಯ ಕಲ್ಪಿಸಿದೆ: ‘ಸರ್ಕಾರ ಜಾತಿ, ವರ್ಗ ರಹಿತವಾಗಿ ಎಲ್ಲಾ ಸಮುದಾಯದವರಿಗೂ ಹಾಸ್ಟೆಲ್ ತೆರೆದು ಸೌಲಭ್ಯ ಕಲ್ಪಿಸಿದೆ. ಹಾಸ್ಟೆಲ್‌ಗಳಲ್ಲಿ ಶುಚಿ ರುಚಿಯಾದ ಊಟ, ಶುದ್ಧ ಕುಡಿಯುವ ನೀರು, ದಿನ ಬಳಕೆ ವಸ್ತುಗಳನ್ನು ನೀಡಲಾಗಿದೆ. ಹಾಸ್ಟೆಲ್‌ನಲ್ಲೇ ಬೋಧನಾ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿ ವಾರ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ, ಗ್ರಂಥಾಲಯ, ಜಿಮ್, ವೈದ್ಯಕೀಯ ಸೇವೆ ಕಲ್ಪಿಸಲಾಗುವುದು’ ಎಂದು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ (ಪ್ರಭಾರ) ಬಾಲಾಜಿ ತಿಳಿಸಿದರು.

‘ನಗರದ ನಚಿಕೇತ ವಿದ್ಯಾರ್ಥಿನಿಲಯದಲ್ಲಿ 250 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಆದರೆ, ಈಗ 20 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜತೆಗೆ ಇತರೆ ವರ್ಗಗಳ ವಿದ್ಯಾರ್ಥಿಗಳಿಗೂ ಶೇ 5ರಷ್ಟು ಪ್ರವೇಶ ಕಲ್ಪಿಸಲಾಗುವುದು. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಭೋವಿ ಕಾಲೊನಿಯ ಹಾಸ್ಟೆಲ್‌ನಲ್ಲಿ ಕಂಪ್ಯೂಟರ್‌ ಆಪರೇಟರ್‌ಗಳನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಆ ಹಾಸ್ಟೆಲ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದರು.

ಹಾಸ್ಟೆಲ್‌ಗಳ ಸೌಲಭ್ಯಗಳ ಕುರಿತ ಕರಪತ್ರಗಳನ್ನು ಗಣ್ಯರು ಅಭಿಯಾನದಲ್ಲಿ ಬಿಡುಗಡೆ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ರುದ್ರಪ್ಪ, ಶಿಕ್ಷಕರಾದ ಶಂಕರಪ್ಪ, ವೆಂಕಟರಾಮಯ್ಯ, ಪ್ರವೀಣ್, ಪ್ರಭಾಕರ್, ಅಶ್ವತ್ಥ ನಾರಾಯಣ, ವೆಂಕಟರಮಣಪ್ಪ, ಶಿಕ್ಷಕ ಮಂಜುನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry