ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತಗಳ್ಳಿಯಲ್ಲಿ ಸಂಗೀತ ವಿ.ವಿ ಕಟ್ಟಡ

Last Updated 7 ಜೂನ್ 2017, 6:06 IST
ಅಕ್ಷರ ಗಾತ್ರ

ಮೈಸೂರು: ಸಾತಗಳ್ಳಿ ಹೊರವರ್ತುಲ ರಸ್ತೆ ಬಳಿ ಇರುವ 8 ಎಕರೆ ಜಾಗದಲ್ಲೇ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕಟ್ಟಡ ತಲೆ ಎತ್ತಲಿದೆ.

‘ಮುಡಾ’ ನೀಡಿರುವ ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ನೀಲನಕ್ಷೆ ಸೇವೆ ಕೋರಿ ಸಂಗೀತ ವಿ.ವಿ ಟೆಂಡರ್‌ ಆಹ್ವಾನಿಸಿದೆ.

‘ಸಾತಗಳ್ಳಿಯ ಬಸ್‌ ಡಿಪೊ ಬಳಿ ವಿ.ವಿ ಕಟ್ಟಡ ನಿರ್ಮಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೆ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಜೊತೆಯೂ ಸಮಾಲೋಚನೆ ನಡೆಸಿದ್ದೇನೆ. ಕಟ್ಟಡ ನಿರ್ಮಾಣಕ್ಕೆ ವಿ.ವಿ ಬಳಿ ₹ 12 ಕೋಟಿ ಇದ್ದು, ಉನ್ನತ ಶಿಕ್ಷಣ ಸಚಿವಾಲಯದಿಂದ ₹ 15 ಕೋಟಿ ಅನುದಾನದ ಭರವಸೆ ಸಿಕ್ಕಿದೆ’ ಎಂದು ಸಂಗೀತ ವಿ.ವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆಡಳಿತ ಕಚೇರಿ, ಸಿಬ್ಬಂದಿ ಕೊಠಡಿ, ತರಗತಿ ಕೊಠಡಿ, ವಸತಿ ನಿಲಯ, ಸಭಾಂಗಣ, ಆಡಿಟೋರಿಯಂ, ಅತಿಥಿ ಗೃಹ ಕಟ್ಟಡ ನಿರ್ಮಿಸುವ ಯೋಜನೆಯನ್ನು ವಿ.ವಿ ಆಡಳಿತ ಹೊಂದಿದೆ.

ಸಂಗೀತ ವಿ.ವಿ ಮೊದಲು ವಿಜಯನಗರ ವಾಟರ್ ಟ್ಯಾಂಕ್‌ ಬಳಿಯ ಎಂಡಿಎ ಕಟ್ಟಡದಲ್ಲಿ ಆರಂಭವಾಯಿತು. ಸದ್ಯ ಲಕ್ಷ್ಮಿಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಜಾಗ ತೆರವು ಮಾಡುವಂತೆ ಈಚೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪತ್ರ ಬರೆದಿತ್ತು.

‘ಪತ್ರ ಬಂದಾಗ ಆತಂಕ ಉಂಟಾಗಿತ್ತು. ಇಲಾಖೆಯ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಎರಡು ವರ್ಷಗಳ ಅವಧಿಗೆ ಮುಂದುವರಿಕೆಗೆ ಅನುಮತಿ ಲಭಿಸಿದೆ’ ಎಂದು ಮಾಹಿತಿ ನೀಡಿದರು.

ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್‌
ಮೈಸೂರು: ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿಯಲ್ಲಿ ಸಂಗೀತ, ವಿಜ್ಞಾನ–ತಂತ್ರಜ್ಞಾನ, ನಿರ್ವಹಣೆ ಕುರಿತ ಹೊಸ ವಿಷಯ  ಅಳವಡಿಸಲು ಸಂಗೀತ ವಿ.ವಿ ನಿರ್ಧರಿಸಿದೆ.

‘ಸಂಗೀತದ ಜೊತೆಗೆ 100 ಅಂಕಗಳಿಗೆ ಈ ವಿಷಯ ಬೋಧಿಸಲಾಗುವುದು. ಪದವಿ ಮುಗಿಸಿ ಹೊರ ಹೋಗುವ ವಿದ್ಯಾರ್ಥಿಗಳಿಗೆ   ಉದ್ಯೋಗಾವಕಾಶ ಕಡಿಮೆ. ಹೊಸ ವಿಷಯ ಅಳವಡಿಕೆ ಮಾಡಿರುವುದರಿಂದ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ’ ಎಂದು ವಿ.ವಿ ಕುಲಪತಿ ಡಾ.ಸರ್ವಮಂಗಳಾ ತಿಳಿಸಿದರು.

ಅಲ್ಲದೆ, ಪದವಿ ಕೋರ್ಸ್‌ಗಳಲ್ಲಿ ಮೂರು ಐಚ್ಛಿಕ ವಿಷಯಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಒಂದು ವಿಷಯ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT