ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ: ಬೀಜದುಂಡೆ ಚೆಲ್ಲಿ ಸಸಿ ಬೆಳೆವ ಕನಸು

Last Updated 7 ಜೂನ್ 2017, 6:27 IST
ಅಕ್ಷರ ಗಾತ್ರ

ಮುಂಡರಗಿ: ಕಪ್ಪತಗುಡ್ಡದ ರಕ್ಷಣೆಗಾಗಿ ದಶಕಗಳ ಕಾಲ ಹೋರಾಡಿದ ಈ ಭಾಗದ ಜನತೆ ಈಗ ಕಪ್ಪತಗುಡ್ಡದಲ್ಲಿ ವಿವಿಧ ಬಗೆಯ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಕಪ್ಪತಗುಡ್ಡವನ್ನು ಬೃಹತ್ ಅರಣ್ಯ ಪ್ರದೇಶವನ್ನಾಗಿ ಮಾಡಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಕಪ್ಪತಹಿಲ್ಸ್ ವಲಯ ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಗದ್ಗುರು ಅನ್ನದಾನೀಶ್ವರ ಕಾಲೇಜು ಸೇರಿಕೊಂಡು ಕಳೆದ ಒಂದು ವಾರದಿಂದ ಬೀಜದುಂಡೆಗಳನ್ನು ತಯಾರಿಸುತ್ತಿವೆ.

ವಿಶ್ವ ಪರಿಸರ ದಿನವಾದ ಜೂನ್ 5ರಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಆಸಕ್ತರಿಗೆ ಬೀಜದುಂಡೆಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ‘ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳು ಪ್ರತೀ ಭಾನುವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜಿಗೆ ತೆರಳಿ ಬೀಜದುಂಡೆ ಮಾಡಬೇಕು.

ಮಕ್ಕಳು ತಯಾರಿಸಿದ ಬೀಜದುಂಡೆಗಳನ್ನು ಶಾಲೆಯ ಸಿಬ್ಬಂದಿ ತೆಗೆದುಕೊಂಡು ಹೋಗಿ ತಮ್ಮ ಶಾಲಾ ಆವರಣದಲ್ಲಿ ಹಾಕಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಈಗಾಗಲೆ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಮೌಖಿಕವಾಗಿ ಸೂಚಿಸಿದ್ದಾರೆ.

‘ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಾಲೆ, ವಿ.ಜಿ.ಲಿಂಬಿಕಾಯಿ ಶಾಲೆ ಮೊದಲಾದ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಅನ್ನದಾನೀಶ್ವರ ಕಾಲೇಜಿನಲ್ಲಿ ಈಗಾಗಲೇ ಸುಮಾರು 25 ಸಾವಿರ ಬೀಜದುಂಡೆಗಳನ್ನು ತಯಾರಿಸಲಾಗಿದೆ.

ಈ ವರ್ಷ ಒಟ್ಟು 50 ಸಾವಿರ ಬೀಜದುಂಡೆಗಳನ್ನು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮುಂದಿನ ವರ್ಷ ಒಂದು ಲಕ್ಷ ಬೀಜದುಂಡೆಗಳನ್ನು ತಯಾರಿಸಲಾಗುವುದು’ ಎಂದು ಜಗದ್ಗುರು ಅನ್ನದಾನೀಶ್ವರ ಕಾಲೇಜಿನ ಪ್ರಾಚಾರ್ಯ ಹಾಗೂ ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ.ಎಸ್‌.ಅರಸನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಬೀಜದುಂಡೆ ತಯಾರಿಕೆ ಕ್ರಮ: ಗೋಮೂತ್ರ ಮತ್ತು ಸಗಣಿಯನ್ನು ಕೆಂಪು ಮಣ್ಣಿನೊಂದಿಗೆ ಹದವಾಗಿ ಮಿಶ್ರಣಮಾಡಿ, ನಂತರ ಮಣ್ಣಿನಿಂದ ಸಣ್ಣ ಗಾತ್ರದ ಉಂಡೆಗಳನ್ನು ತಯಾರು ಮಾಡಲಾಗುತ್ತದೆ. ಹೀಗೆ ಸಿದ್ಧಗೊಂಡ ಮಣ್ಣಿನಲ್ಲಿ ವಿವಿಧ ಸಸ್ಯಗಳ ಬೀಜಗಳನ್ನು ಸೇರಿ ಉಂಡೆ ಕಟ್ಟಲಾಗಿದೆ. ಬಳಿಕ ಅವುಗಳನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ.

ಮಳೆಗಾಲ ಆರಂಭವಾಗುವ  ಸಂದರ್ಭದಲ್ಲಿ ಬೀಜದುಂಡೆಗಳನ್ನು ಭೂಮಿಯಲ್ಲಿ ಸಣ್ಣ ಪ್ರಮಾಣದ ಗುಂಡಿಗಳನ್ನು ತೋಡಿ ಹಾಕಲು ಯೋಜನೆ ರೂಪಿಸಲಾಗಿದೆ.‘ಹೀಗೆ ಮಾಡಿದರೆ, ಬೀಜದುಂಡೆ ಕಾಲಕ್ರಮದಲ್ಲಿ ಮಳೆ ನೀರಿನಿಂದ ಮೊಳಕೆಯೊಡೆದು ಸಸಿಗಳಾಗಿ ಬೆಳೆಯುತ್ತವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಮಾಡಿದ ಈ ಯೋಜನೆ ಫಲಕಾರಿಯಾಗಿದೆ’ ಎಂದು ಮೂಲಗಳು ಹೇಳಿವೆ.

* *

ಮಳೆಗಾಲದಲ್ಲಿ ಶಾಲಾ–ಕಾಲೇಜುಗಳ ಮಕ್ಕಳು ಕಪ್ಪತಗುಡ್ಡದಲ್ಲಿ ಬೀಜದುಂಡೆ ಹಾಕಿ ಬಂದರೆ ಗುಡ್ಡವೆಲ್ಲ ಅರಣ್ಯಮಯ ಆಗುವುದರಲ್ಲಿ ಸಂದೇಹವಿಲ್ಲ
ಸಿ.ಎಸ್‌.ಅರಸನಾಳ,
ಜಿಲ್ಲಾ ವನ್ಯಜೀವಿ ಪರಿಪಾಲಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT