ಜಿಎಸ್‌ಟಿ ಮಸೂದೆ ಮಂಡನೆ

7

ಜಿಎಸ್‌ಟಿ ಮಸೂದೆ ಮಂಡನೆ

Published:
Updated:
ಜಿಎಸ್‌ಟಿ ಮಸೂದೆ ಮಂಡನೆ

ಬೆಂಗಳೂರು:  ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುತ್ತಿರುವ  ಕೇಂದ್ರ ಸರ್ಕಾರದ ಮಸೂದೆಗೆ ಒಪ್ಪಿಗೆ ನೀಡಲು ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದರು.

ಇದೇ ಜುಲೈನಿಂದ ದೇಶದಾದ್ಯಂತ ಜಿಎಸ್‌ಟಿ ಜಾರಿಗೆ  ಬರಲಿದೆ. ಅದಕ್ಕೂ ಮೊದಲು ರಾಜ್ಯಗಳು ಕೇಂದ್ರದ ಮಸೂದೆಗೆ  ಒಪ್ಪಿಗೆ ನೀಡಬೇಕಿದೆ.

‘ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಉಪಬಂಧ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಎಸ್‌ಟಿ ಬಗ್ಗೆ  ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್‌ನ ವೈ.ಎಸ್‌.ವಿ ದತ್ತ ಮತ್ತು ಬಿಜೆಪಿಯ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ  ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರ ರೂಪಿಸಿರುವ ಮಸೂದೆಯಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ವಿಧಾನಸಭೆ ಅನುಮೋದನೆ ನೀಡುವುದು ಒಂದು ಔಪಚಾರಿಕ ಪ್ರಕ್ರಿಯೆ ಅಷ್ಟೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಜಿಎಸ್‌ಟಿ ಮಸೂದೆ ಅಂತಿಮಗೊಳ್ಳುವ ಮೊದಲೇ ನಾವು ಚರ್ಚೆ ನಡೆಸಬೇಕಿತ್ತು. ಇಲ್ಲಿ ಸ್ವಾಯತ್ತತೆ ಪ್ರಶ್ನೆ ಉದ್ಭವಿಸುತ್ತದೆ. ಜಿಎಸ್‌ಟಿಯಿಂದ ರಾಜ್ಯಗಳು ಸಾಮಂತರ ಸ್ಥಾನಕ್ಕೆ ಇಳಿದರೆ, ಕೇಂದ್ರ ಸರ್ಕಾರ  ಚಕ್ರವರ್ತಿ ಆಗುತ್ತದೆ ’ ಎಂದು ದತ್ತ  ದೂರಿದರು.

‘ಜಿಎಸ್‌ಟಿ ಸಂಬಂಧ ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳಿವೆ. ಅದರ ವಿಧಿ– ವಿಧಾನಗಳು ಮತ್ತು ತೊಂದರೆಗಳ ಬಗ್ಗೆ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಇಲ್ಲಿ ಚರ್ಚೆ ಮಾಡಿದ್ದರೆ, ಜನರ ಗೊಂದಲಗಳು ನಿವಾರಣೆ ಆಗುತ್ತಿತ್ತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವುದಕ್ಕಾಗಿ ಸಂವಿಧಾನಕ್ಕೆ 122ನೇ ತಿದ್ದುಪಡಿ ತರಲಾಗಿದೆ. ಇದಕ್ಕೆ ವಿಧಾನಸಭೆ ಮತ್ತು ಪರಿಷತ್ತು ಒಪ್ಪಿಗೆ ನೀಡಬೇಕಾಗಿದೆ. ಸಂವಿಧಾನದ ಅಗತ್ಯ ಪೂರೈಸಲು ಮಸೂದೆ ಮಂಡಿಸಲಾಗಿದೆ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

‘ಲೋಕಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಚರ್ಚೆ ಆದಾಗ ದೇವೇಗೌಡರು ಮತ್ತು ಪುಟ್ಟರಾಜು ಅವರು ಮಾತನಾಡಲಿಲ್ಲವೆ, ಬಿಜೆಪಿಯ 17 ಸಂಸದರು ಹಾಜರಿರಲಿಲ್ಲವೇ’ ಎಂದು ದತ್ತ ಅವರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು.

‘ಇಲ್ಲಿ ಚರ್ಚೆ ಮಾಡಿ ಪರಿಹಾರ ಕೊಡಿ ಎಂದು ಹೇಳಿದರೆ, ತಕ್ಷಣಕ್ಕೆ ಪರಿಹಾರ ಕೊಡಲು ಆಗುವುದಿಲ್ಲ. ಬೇಕಿದ್ದರೆ ಶಾಸಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ತಜ್ಞರಿಂದ ಸಭೆ ನಡೆಸೋಣ. ಸಂದೇಹ ಪರಿಹಾರಕ್ಕೆ ಸದನದಲ್ಲಿ ಅವಕಾಶ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry