ಹೆದ್ದಾರಿ ಡಿನೋಟಿಫೈ ಅಗತ್ಯ: ಸಿದ್ದರಾಮಯ್ಯ

7
ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಕ್ರಮ, ಸರ್ಕಾರದ ನಿಲುವು ವಿರೋಧಿಸಿ ಬಿಜೆಪಿ ಸಭಾತ್ಯಾಗ

ಹೆದ್ದಾರಿ ಡಿನೋಟಿಫೈ ಅಗತ್ಯ: ಸಿದ್ದರಾಮಯ್ಯ

Published:
Updated:
ಹೆದ್ದಾರಿ ಡಿನೋಟಿಫೈ ಅಗತ್ಯ: ಸಿದ್ದರಾಮಯ್ಯ

ಬೆಂಗಳೂರು: ‘ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ನಗರ ಮತ್ತು ಪಟ್ಟಣಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫೈ ಅನಿವಾರ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಪಾದನೆಯಿಂದ  ಅಸಮಾಧಾನಗೊಂಡ ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಸಭಾತ್ಯಾಗ ಮಾಡಿದರು.

‘ರಾಷ್ಟ್ರೀಯ ಹೆದ್ದಾರಿಯನ್ನೇ ಡಿನೋಟಿಫೈ ಮಾಡಲು ಶಿಫಾರಸು ಮಾಡಿರುವ ರಾಜ್ಯ ಸರ್ಕಾರ ಮದ್ಯದ ಲಾಬಿಗೆ ಮಣಿದಿದೆ’ ಎಂದು ಇದಕ್ಕೂ ಮೊದಲು ಬಿಜೆಪಿ ಸದಸ್ಯರು ಆರೋಪಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಮತ್ತು ಭಾನುಪ್ರಕಾಶ ಅವರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ‘ಕಾನೂನು ಮಾಡುವುದರಿಂದ ಜನರಲ್ಲಿ ಭಯ ಬರಬಹುದು. ಆದರೆ, ಮದ್ಯ ಮಾರಾಟ ನಿಷೇಧ ಸಂಪೂರ್ಣ ಸಾಧ್ಯವಿಲ್ಲ. ಗುಜರಾತ್‌ನಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದರೂ ಅನಧಿಕೃತ ಮಾರಾಟ ಮುಂದುವರಿದಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯವೂ ತಪ್ಪುತ್ತದೆ ಎಂದರು.

ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ಕೇಂದ್ರದಿಂದ ಹಣ ಬರುವುದಿಲ್ಲ. ಸ್ಥಳೀಯ ಸಂಸ್ಥೆಗಳಿಂದಲೇ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ಇನ್ನು ಮುಂದೆ  ಪುರಸಭೆ, ಪಟ್ಟಣ ಪಂಚಾಯತಿಗಳಿಗೂ ಇದಕ್ಕಾಗಿ ಹಣ ಬಿಡುಗಡೆ ಮಾಡಲಾಗುವುದು. ಯಾವ ಸಂಸ್ಥೆಗಳಿಂದ ನಿರ್ವಹಣೆ ಮಾಡಲಾಗುವುದೋ ಅವುಗಳ ಹೆಸರಿಗೆ ರಸ್ತೆಯನ್ನು ಡಿನೋಟಿಫೈ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಸುಪ್ರೀಂ ಕೋರ್ಟ್‌ ಆದೇಶವನ್ನು ತಿರಸ್ಕರಿಸಿಲ್ಲ. ಹೆದ್ದಾರಿ ಅಕ್ಕಪಕ್ಕದ ಮದ್ಯದಂಗಡಿ ಸ್ಥಳಾಂತರಿಸಲು ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ. ಈ ತಿಂಗಳ ಅಂತ್ಯದವರೆಗೂ ಸಮಯಾವಕಾಶ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಪಂಚತಾರಾ ಹೋಟೆಲ್‌ಗೆ ಹೊಡೆತ: ಬೆಂಗಳೂರು– ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಚಾಲುಕ್ಯ  ವೃತ್ತದಿಂದ ಆರಂಭವಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಈ ರಸ್ತೆಯಲ್ಲಿನ ವಿಂಡ್ಸರ್ ಮ್ಯಾನರ್, ಲೀ ಮೆರಿಡಿಯನ್‌ನಂತಹ ಪಂಚತಾರಾ ಹೋಟೆಲ್‌ಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಮದ್ಯದಂಗಡಿ, ರೆಸ್ಟೊರಂಟ್‌ಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ಇದ್ದಾರೆ. ಅವರ ಹಿತ ಕಾಯುವುದೂ ಮುಖ್ಯ ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾನುಪ್ರಕಾಶ್ ಮತ್ತು ಪ್ರಾಣೇಶ್, ‘ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅನೇಕ ಗ್ರಾಮಗಳಲ್ಲಿ ಮಹಿಳೆಯರು ಹೋರಾಟ ಮಾಡುತ್ತಿದ್ದಾರೆ. ಕುಡಿತದಿಂದ ಕುಟುಂಬಗಳು ಬೀದಿಗೆ ಬಂದಿವೆ. ಸುಪ್ರೀಂ ಕೋರ್ಟ್‌ ಆದೇಶ ಗೌರವಿಸಿ ಹೆದ್ದಾರಿ ಪಕ್ಕದ ಮದ್ಯದಂಗಡಿಗಳನ್ನು ಸರ್ಕಾರ ಮುಚ್ಚಬೇಕು’ ಎಂದು ಒತ್ತಾಯಿಸಿದರು.

ವಿರೋಧಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಮದ್ಯದಂಗಡಿ ಮಾಲೀಕರ ಲಾಬಿಗೆ ಮಣಿದು ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಕುಡಿಯುವುದಕ್ಕೆ ಸರ್ಕಾರವೇ  ಪ್ರೋತ್ಸಾಹ ನೀಡುತ್ತಿದೆ. ಇದನ್ನು ಖಂಡಿಸಿ ಸಭಾತ್ಯಾಗ ಮಾಡುತ್ತೇವೆ’ ಎಂದು ಘೋಷಣೆ ಕೂಗುತ್ತಾ ಸದನದಿಂದ ಹೊರನಡೆದರು.

ಏನಿದು ಹೆದ್ದಾರಿ ಡಿನೋಟಿಫೈ?

ನಗರ ಹಾಗೂ ಪಟ್ಟಣಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತಮ ನಿರ್ವಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದರೆ ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿನ ಹೆದ್ದಾರಿಗಳು ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಒಳಪಡಲಿವೆ. ಇದನ್ನು ಸರ್ಕಾರಿ ಭಾಷೆಯಲ್ಲಿ ‘ಡಿನೋಟಿಫೈ’ ಎಂದು ಕರೆಯಲಾಗುತ್ತದೆ.  ಈ ರಸ್ತೆಗಳ  ನಿರ್ವಹಣೆ ಹೊಣೆ ರಾಜ್ಯದ ಹೆಗಲಿಗೆ ಬೀಳುತ್ತದೆ.

ಇದಾದರೆ ‘ಹೆದ್ದಾರಿಗಳಲ್ಲಿ 220 ಮೀಟರ್ ಸುತ್ತ ಮದ್ಯದ ಅಂಗಡಿಗಳು ಇರಬಾರದು’ ಎಂಬ ಸುಪ್ರೀಂ ಕೋರ್ಟ್‌ ಆದೇಶ ಅನ್ವಯ ಆಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry