ಎಸ್‌ಟಿಪಿ ಅಳವಡಿಕೆಗೆ 3 ತಿಂಗಳ ಕಾಲಾವಕಾಶ

7
ವಸತಿ ಸಮುಚ್ಚಯಗಳಿಗೆ ನೋಟಿಸ್‌

ಎಸ್‌ಟಿಪಿ ಅಳವಡಿಕೆಗೆ 3 ತಿಂಗಳ ಕಾಲಾವಕಾಶ

Published:
Updated:
ಎಸ್‌ಟಿಪಿ ಅಳವಡಿಕೆಗೆ 3 ತಿಂಗಳ ಕಾಲಾವಕಾಶ

ಬೆಂಗಳೂರು: ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದಲ್ಲಿನ ವಸತಿ ಸಮುಚ್ಚಯಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಟಿ, ಎಂಬೆಸ್ಸಿ ವಸತಿ ಸಮುಚ್ಚಯ, ಆಸ್ಪತ್ರೆ ಹಾಗೂ ವಿವಿಧ 52 ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಸಂಸ್ಕರಿಸಿದ ನೀರಿನ 28 ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷ ಲಕ್ಷ್ಮಣ್, ‘ವಸತಿ ಸಮುಚ್ಚಯಗಳಲ್ಲಿ ಅಳವಡಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು  (ಎಸ್‌ಟಿಪಿ) ಪರಿಶೀಲಿಸುತ್ತಿದ್ದೇವೆ. ಪೂರ್ಣ ಪ್ರಮಾಣದ ಎಸ್‌ಟಿಪಿ ಅಳವಡಿಸಿಕೊಳ್ಳದ ವಸತಿ ಸಮುಚ್ಚಯಗಳಿಗೆ ಎಚ್ಚರಿಕೆಯ ನೋಟಿಸ್‌ ನೀಡಿದ್ದೇವೆ’ ಎಂದು ಹೇಳಿದರು.

‘ಈಗಾಗಲೇ ಹತ್ತು ತಂಡಗಳ ಮೂಲಕ ಕೆರೆ ಸುತ್ತಲಿನ ಎಲ್ಲಾ ಕಟ್ಟಡಗಳ ಪರಿಶೀಲನೆ ನಡೆಸುತ್ತಿದ್ದೇವೆ. ಎಸ್‌ಟಿಪಿ ಅಳವಡಿಕೆಗೆ ಮೂರು ತಿಂಗಳು ಕಾಲಾವಕಾಶ ನೀಡುತ್ತೇವೆ. ಆ ನಂತರವೂ ಎಸ್‌ಟಿಪಿ ಅಳವಡಿಸಿಕೊಳ್ಳದಿದ್ದರೆ, ವಿದ್ಯುತ್‌ ಹಾಗೂ ನೀರು ಪೂರೈಕೆ ಸ್ಥಗಿತಗೊಳಿಸುತ್ತೇವೆ. ಜತೆಗೆ, ವಸತಿ ಸಮುಚ್ಚಯದ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.

‘ಕೆರೆ ಸ್ವಚ್ಛತೆ ಕೆಲಸ ವೇಗವಾಗಿ ನಡೆಯುತ್ತಿದೆ. ಮೂರು ಆಧುನಿಕ ಯಂತ್ರಗಳ ಮೂಲಕ ಕೆರೆಯಲ್ಲಿರುವ ಕಳೆಯನ್ನು ಹೊರಗೆ ತೆಗೆಯಲಾಗುತ್ತಿದೆ. ಸುತ್ತಲೂ ಬೇಲಿ ಅಳವಡಿಸಿ ಕಸ ಹಾಕದಂತೆ ಕ್ರಮಕೈಗೊಳ್ಳಲಾಗಿದೆ’ ಎಂದು ಅವರು  ತಿಳಿಸಿದರು.

‘ಸಂಸ್ಕರಿಸಿದ ನೀರನ್ನು ಸಹ ಕೆರೆಗೆ ಹರಿಸದಂತೆ ಕೃಷಿ ಅಥವಾ ಉದ್ಯಾನಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೇವೆ. ಇನ್ನೂ ಮೂರು ದಿನಗಳ ಕಾಲ ಪರಿಶೀಲನೆ ನಡೆಯಲಿದೆ’ ಎಂದು ಅವರು ನುಡಿದರು.

ಪ್ರತಿಭಟನೆಗೆ ಹೆದರಿ ಅಧಿಕಾರಿಗಳು ವಾಪಸ್‌: ಕೆಎಸ್‌ಪಿಸಿಬಿ ಆದೇಶದ ಮೇರೆಗೆ ವಿವೇಕ್‌ನಗರದಲ್ಲಿನ ಬಟ್ಟೆಗಳಿಗೆ ಬಣ್ಣ ಹಾಕುವ ಘಟಕಗಳ ನೀರು ಮತ್ತು ಒಳಚರಂಡಿ ಸಂಪರ್ಕ ಕಡಿತಗೊಳಿಸಲು ಹೋಗಿದ್ದ ಅಧಿಕಾರಿಗಳು ಘಟಕಗಳ ಮಾಲೀಕರ ಪ್ರತಿಭಟನೆಗೆ ಹೆದರಿ ಹಾಗೆಯೇ ವಾಪಾಸಾಗಿದ್ದಾರೆ.

ಇಲ್ಲಿ ಸುಮಾರು 100 ಬಣ್ಣದ ಘಟಕಗಳಿದ್ದು, ಕೆಎಸ್‌ಪಿಸಿಬಿ ಆದೇಶದ ನಂತರ ಕಾರ್ಯ ಸ್ಥಗಿತಗೊಳಿವೆ. ಈಗಾಗಲೇ ಈ ಘಟಕಗಳಿಗೆ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.

ಬಟ್ಟೆಗಳಿಗೆ ಬಣ್ಣ ಹಾಕುವ ಘಟಕವೊಂದರ ಮಾಲೀಕ ಶ್ರೀನಿವಾಸ್‌, ‘ಇಲ್ಲಿ ಅನೇಕರು ಮನೆಗಳಲ್ಲಿಯೇ ಘಟಕಗಳನ್ನು ನಡೆಸುತ್ತಿದ್ದರು. ಈಗಾಗಲೇ ಇಲ್ಲಿ ವಿದ್ಯುತ್‌ ಕಡಿತಗೊಳಿಸಿದ್ದಾರೆ. ಈಗ ನೀರು ಮತ್ತು ಒಳಚರಂಡಿ ಸಂಪರ್ಕ ಕಡಿತ ಮಾಡಿದರೆ ನಾವು ಹೇಗೆ ವಾಸಿಸಬೇಕು. ಇದರಿಂದ ನಮಗೆ ಸಾಕಷ್ಟು ತೊಂದರೆ ಆಗುತ್ತದೆ. ಹಾಗಾಗಿ ಪ್ರತಿಭಟನೆ ನಡೆಸಿದೆವು’ ಎಂದು  ಹೇಳಿದರು.

‘ಶೇ 30ರಷ್ಟು ಶುಲ್ಕ ಕಡಿತ’

ಬೆಂಗಳೂರು: ‘ನಗರದಲ್ಲಿ 2016ರ ಫೆಬ್ರುವರಿಗಿಂತ ಮೊದಲು ನಿರ್ಮಾಣವಾದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸಿದರೆ ಬೆಂಗಳೂರು ಜಲಮಂಡಳಿ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡುತ್ತೇವೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಹಳೆಯ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 50ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿದ್ದರೆ ಮತ್ತು 10,000 ಚ.ಮೀಟರ್‌ಗಿಂತ ಮೇಲ್ಪಟ್ಟ ವಿಸ್ತ್ರೀರ್ಣದ ವಿದ್ಯಾಸಂಸ್ಥೆಗಳಿಗೆ ತ್ಯಾಜ್ಯ ನೀರು  ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಲೆ ಜೆಡಿಎಸ್‌ನ ಆರ್. ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ನಿಷೇಧಿತ ಪ್ರದೇಶ ಎಂದು ಘೋಷಿಸಿ’

‘ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದೇವೆ’ ಎಂದು ಕೆಎಸ್‌ಪಿಸಿಬಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

‘ಈ ಜಲಮೂಲ ಯಾವುದೇ ಕಾರಣಕ್ಕೂ ಮತ್ತೆ ಮಲಿನಗೊಳ್ಳಬಾರದು ಹಾಗೂ ಕೆರೆ ಒತ್ತುವರಿ ಆಗಬಾರದು ಎಂಬ ಉದ್ದೇಶದಿಂದ ಆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಅತಿಕ್ರಮಣ ಮಾಡುವವರನ್ನು ಕೂಡಲೇ ಬಂಧಿಸಬೇಕು ಎಂದು ಪ್ರಸ್ತಾವದಲ್ಲಿ ಕೋರಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry