ತಂದೆಯಿಂದಲೇ ತಾಯಿಯಾದ ಬಾಲೆ!

7

ತಂದೆಯಿಂದಲೇ ತಾಯಿಯಾದ ಬಾಲೆ!

Published:
Updated:
ತಂದೆಯಿಂದಲೇ ತಾಯಿಯಾದ ಬಾಲೆ!

ಹುಣಸೂರು: ತಾಲ್ಲೂಕಿನ  ಹಾಡಿಯೊಂದರಲ್ಲಿ ತಂದೆಯಿಂದಲೇ ಅತ್ಯಾಚಾರಕ್ಕೀಡಾದ 14 ವರ್ಷದ ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆರೋಪಿಯನ್ನು ಗ್ರಾಮಾಂತರ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಾಲಕಿ ಹಾಗೂ ನವಜಾತ ಶಿಶುವಿಗೆ ಮೈಸೂರಿನ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಹೆರಿಗೆ ಮಾಡಿಸಿ ಮಾಹಿತಿ ಬಚ್ಚಿಟ್ಟ ಆರೋಪದ ಮೇರೆಗೆ

ಚೆಲುವಾಂಬ ಆಸ್ಪತ್ರೆಯ ವೈದ್ಯರ ವಿರುದ್ಧವೂ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

‘ಮದ್ಯವ್ಯಸನಿಯಾದ 41 ವರ್ಷದ ಆರೋಪಿಯನ್ನು ಹಲವು ವರ್ಷಗಳ ಹಿಂದೆ ಆತನ ಪತ್ನಿ ತೊರೆದಿದ್ದಳು. ಈ ದಂಪತಿಯ ಪುತ್ರಿಯು ಅಜ್ಜಿ ಹಾಗೂ ತಂದೆಯೊಂದಿಗೆ ಹಾಡಿಯಲ್ಲಿ ಬೆಳೆದಿದ್ದಾಳೆ. ಮದ್ಯಸೇವಿಸಿ ಮನೆಗೆ ಬರುತ್ತಿದ್ದ ಆರೋಪಿ ಒಂದೂವರೆ ವರ್ಷದಿಂದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ತುಂಬು ಗರ್ಭಿಣಿಯನ್ನು ಮೇ 8ರಂದು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ಆಸ್ಪತ್ರೆಗೆ ಸುಳ್ಳು ಮಾಹಿತಿ ನೀಡಿದ್ದಾನೆ. ಹೆರಿಗೆಯ ಬಳಿಕ ಮಗಳು ಮತ್ತು ನವಜಾತ ಶಿಶುವನ್ನು ಮನೆಗೆ ಕರೆದೊಯ್ದಿದ್ದಾನೆ. ಪುತ್ರಿಗೆ ಹೆರಿಗೆಯಾದ ವಿಷಯ ತಿಳಿದು ಬಾಲಕಿಯ ತಾಯಿ ಮನೆಗೆ ಧಾವಿಸಿದ್ದಾರೆ. ತಂದೆಯಿಂದಲೇ ಅತ್ಯಾಚಾರಕ್ಕೆ ಈಡಾಗಿದ್ದ ವಿಚಾರ ಗೊತ್ತಾಗಿ ಠಾಣೆಗೆ ಮಾಹಿತಿ ನೀಡಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಹಾಗೂ ಅತ್ಯಾಚಾರ ಆರೋಪದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಹೊಟ್ಟೆ ದಪ್ಪವಾಗಿದ್ದ ಬಗ್ಗೆ ಅಜ್ಜಿಯನ್ನು ಬಾಲಕಿ ಪ್ರಶ್ನಿಸಿದ್ದಾಳೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆಗೆ ಇದು ಗೊತ್ತಾಗಿಲ್ಲ. ಊಟ ಹೆಚ್ಚಾಗಿ ಮಾಡುತ್ತಿರುವುದರಿಂದ ದಪ್ಪವಾಗುತ್ತಿದ್ದೀಯಾ ಎಂದು ಮೊಮ್ಮಗಳಿಗೆ ಹೇಳಿದ್ದಾಳೆ. ಅಲ್ಲದೇ, ಇಂತಹದೊಂದು ಕಲ್ಪನೆ ಕೂಡ ಅವರಿಗೆ ಇರಲಿಲ್ಲ ಎಂಬುದು ವಿಚಾರಣೆಯ ವೇಳೆ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry