ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಶಿಕ್ಷಣ ಕೊಡಿಸಿ: ಪಾಟೀಲ

Last Updated 9 ಜೂನ್ 2017, 5:23 IST
ಅಕ್ಷರ ಗಾತ್ರ

ಬೀದರ್‌: ‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರುವ ಜನಾಂದೋಲನದ ಯಶಸ್ವಿಗೆ ಪ್ರತಿಯೊ­ಬ್ಬರು ಶ್ರಮಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಸ್. ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ‘ಬಾಲ್ಯ ವಿವಾಹ ತಡೆ’ ಹಾಗೂ ‘ಶಾಲೆ ಕಡೆ ನನ್ನ ನಡೆ’ ಕುರಿತ ಜಾಗೃತಿ ಜನಾಂದೋಲನ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿ­ರುವ ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. 6ರಿಂದ 14 ವರ್ಷದ ವರೆಗಿನ ಮಕ್ಕಳು ಉಚಿತ ಹಾಗೂ ಸಮಾನ ಗುಣಮಟ್ಟದ ಶಿಕ್ಷಣಪಡೆಯು­ವುದು ಮೂಲಭೂತ ಹಕ್ಕಾಗಿದೆ’ ಎಂದು ತಿಳಿಸಿದರು.

‘ಪಾಲಕರಲ್ಲಿ ಜಾಗೃತಿ ಮೂಡಿಸುವು­ದ­ಕ್ಕಾಗಿಯೇ ಸಾಕ್ಷರತಾ ರಥ ಜಿಲ್ಲೆಯಾ­ದ್ಯಂತ ಸಂಚರಿಸಲಿದೆ.  ಮೊದಲ ದಿನ ಬೀದರ್‌ ತಾಲ್ಲೂಕಿನ ಚಾಂಬೋಳ, ಚಿಲ್ಲರ್ಗಿ ಹಾಗೂ ಚಿಮಕೋಡ ಗ್ರಾಮಗಳಲ್ಲಿ ಸಂಚರಿಸಿದೆ. ಜೂನ್‌ 9ರಂದು ಔರಾದ್‌, 12ರಂದು ಭಾಲ್ಕಿ, 13ರಂದು ಬಸವಕಲ್ಯಾಣ, 14ರಂದು ಹುಮನಾಬಾದ್‌ ತಾಲ್ಲೂಕಿನಲ್ಲಿ ಜಾಗೃತಿ  ಮೂಡಿಸಲಿದೆ’ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳಾ ಮಾತನಾಡಿ, ‘ಬಾಲ್ಯ ವಿವಾಹ ಅಪರಾಧವಾಗಿದೆ.  ಬಾಲ್ಯ ವಿವಾಹ ಕಂಡು ಬಂದರೆ ತಕ್ಷಣ ಮಕ್ಕಳ ಸಹಾಯ­ವಾಣಿಗೆ ಕರೆ ಮಾಡಿ ಮಾಹಿತಿ ನೀಡ­ಬೇಕು. ಮಕ್ಕಳ ಹಕ್ಕು ರಕ್ಷಣಾ ಸಮಿತಿ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಲಿದೆ. ಮಕ್ಕಳಿಗೆ ರಕ್ಷಣೆ ಒದಗಿಸಲಿದೆ’ ಎಂದರು. 

‘ಬಾಲಕಿಯರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿಯನ್ನಾಗಿ ಮಾಡಬೇಕು. ಬಾಲ್ಯದಲ್ಲಿ ಮದುವೆ ಮಾಡಿ ಅವರ ಭವಿಷ್ಯ ಅಂಧಕಾರದಲ್ಲಿ ಮುಳುಗುವಂತೆ ಮಾಡಬಾರದು’ ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ನಿರ್ಮಲಾದೇವಿ ಎಸ್‌., ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರ ದುಬೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ಪಾಟೀಲ, ಉಪಾಧ್ಯಕ್ಷ ಸಂಜೀವಕುಮಾರ ರೇಕುಳಗಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಲ್ಲೂರೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯೆ ವೇದಮಣಿ, ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕ ಸಿ. ಎಲ್.ವರ್ಗೀಸ್, ಕವಿತಾ ಹುಷಾರೆ ಇದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

* * 

ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗೆಗೆ ವ್ಯಾಪಕ ಪ್ರಚಾರದ ಅಗತ್ಯವಿದೆ. ಬಾಲ್ಯವಿವಾಹಕ್ಕೂ ಮುನ್ನ ಪಾಲಕರಿಗೆ ಕಾಯ್ದೆಯ ತಿಳಿವಳಿಕೆ ನೀಡಬೇಕು.
ಅಪರ್ಣಾ ಕೊಳ್ಳಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT