ಶೈಕ್ಷಣಿಕ ಸೌಲಭ್ಯ ವಂಚಿತ ಉರ್ದು ಶಾಲೆ

7

ಶೈಕ್ಷಣಿಕ ಸೌಲಭ್ಯ ವಂಚಿತ ಉರ್ದು ಶಾಲೆ

Published:
Updated:
ಶೈಕ್ಷಣಿಕ ಸೌಲಭ್ಯ ವಂಚಿತ ಉರ್ದು ಶಾಲೆ

ಯಾದಗಿರಿ: ಶಾಲಾ ಮಕ್ಕಳಿಗೆ ಸೂಕ್ತ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬುದಕ್ಕೆ ಜಿಲ್ಲೆಯ ಕಡೇಚೂರ ಗ್ರಾಮದ ಉರ್ದು ಪ್ರೌಢಶಾಲೆ ಉತ್ತಮ ನಿದರ್ಶನವಾಗಿದೆ.

ಉನ್ನತೀಕರಿಸಿದ ಉರ್ದು ಪ್ರಾಥಮಿಕ ಶಾಲೆಯನ್ನು ಹೊಂದಿರುವ ಕಡೇಚೂರ ಗ್ರಾಮಕ್ಕೆ 2010-11ನೇ ಸಾಲಿನಲ್ಲಿ ಆರ್‌ಎಂಎಸ್‌ಎ ಅಡಿಯಲ್ಲಿ ನೂತನ ಉರ್ದು ಪ್ರೌಢಶಾಲೆ ಮಂಜೂರಾಗಿತ್ತು. ನಂತರ ಪ್ರೌಢಶಾಲೆಗಾಗಿ ಗ್ರಾಮದಲ್ಲಿನ ಸರ್ಕಾರಿ ಜಮೀನು ಸರ್ವೆ ನಂಬರ್ 785ರಲ್ಲಿ 2 ಎಕರೆ 10ಗುಂಟೆ ಜಮೀನನ್ನು ನಿಗದಿಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

‘ಕಡೇಚೂರು ಉರ್ದು ಪ್ರೌಢಶಾಲೆಯ ನೂತನ ಕಟ್ಟಡವು ನೆಲ ಮಹಡಿಯಲ್ಲಿ ನಾಲ್ಕು ಕೋಣೆ, ಮೊದಲ ಮಹಡಿ ನಾಲ್ಕು ಕೋಣೆ ಮತ್ತು ಎರಡನೇ ಮಹಡಿ ರಡು ಕೋಣೆಗಳು ಸೇರಿ ಒಟ್ಟು 10 ಕೋಣೆಗಳನ್ನು ಒಳಗೊಂಡಿದೆ. ₹70 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ವಿದ್ಯಾರ್ಥಿಗಳ ಪರದಾಟ: ‘ಸ್ವಂತ ಕಟ್ಟಡ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. 9ನೇ ತರಗತಿಯಲ್ಲಿ 21 ಹಾಗೂ 10ನೇ ತರಗತಿಯಲ್ಲಿ16 ಸೇರಿ ಒಟ್ಟು 37 ವಿದ್ಯಾರ್ಥಿಗಳ ಹಾಜರಾತಿ ಇದೆ. 8ನೇ ತರಗತಿಗೆ ಕನಿಷ್ಠ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ’ ಎಂದು ಶಿಕ್ಷಕರು ಹೇಳುತ್ತಾರೆ.

‘ನಾಲ್ಕೈದು ವರ್ಷಗಳಿಂದ ಉರ್ದು ಪ್ರಾಥಮಿಕ ಶಾಲೆಯ ಒಂದು ಕೋಣೆ, ಗುರುಭವನದ ಎರಡು ಕೋಣೆ ಹಾಗೂ ಕ್ಷೇತ್ರ ಸಂಪನ್ಮೂಲ ಕಚೇರಿಯ ಒಂದು ಕೋಣೆಗಳಲ್ಲಿ ಸದ್ಯ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಾಗಿದೆ. ನೆಲದ ಮೇಲೆ ಕುಳಿತು ಅಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಇತ್ತೀಚೆಗೆ ಬೆಲ್ ಸಂಸ್ಥೆ ಆಸನದ ವ್ಯವಸ್ಥೆ ಕಲ್ಪಿಸಿದೆ.

ಬೋಧನೆಗೆ ಸಹಾಯಕವಾಗುವ ಪಾಠೋಪಕರಣಗಳು ಲಭ್ಯವಿದ್ದರೂ, ಕೊಠಡಿ ಸಮಸ್ಯೆಯಿಂದ ಅವುಗಳ ಸದುಪಯೋಗ ವಿದ್ಯಾರ್ಥಿಗಳಿಗೆ ದಕ್ಕಿಲ್ಲ. ಉರ್ದು ಪ್ರಾಥಮಿಕ ಮತ್ತು ಪ್ರೌಢ ಹಾಗೂ ಕನ್ನಡ ಮಾಧ್ಯಮದ ಪ್ರೌಢಶಾಲೆಗಳು ಒಂದೇ ಕಡೆ ಇರುವುದರಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಗೂ ತೊಂದರೆಯಾಗಿದೆ’ ಎಂದು ಉರ್ದು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಿಬೂಬ್ ಅಲಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry