ಎಟಿಪಿ ಟೆನಿಸ್: ಯೂಕಿ ಭಾಂಬ್ರಿಗೆ ನಿರಾಸೆ

7

ಎಟಿಪಿ ಟೆನಿಸ್: ಯೂಕಿ ಭಾಂಬ್ರಿಗೆ ನಿರಾಸೆ

Published:
Updated:
ಎಟಿಪಿ ಟೆನಿಸ್: ಯೂಕಿ ಭಾಂಬ್ರಿಗೆ ನಿರಾಸೆ

ನವದೆಹಲಿ: ಭಾರತದ ಯೂಕಿ ಭಾಂಬ್ರಿ ಅವರು ಬ್ರಿಟನ್‌ನಲ್ಲಿ ನಡೆಯುತ್ತಿರುವ ಸರ್ಬಿಟನ್‌ ಚಾಲೆಂಜರ್‌ ಎಟಿಪಿ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಯೂಕಿ 6–7, 6–2, 5–7ರಲ್ಲಿ ಜರ್ಮನಿಯ ಡಸ್ಟಿನ್‌ ಬ್ರೌನ್‌ ವಿರುದ್ಧ ಪರಾಭವಗೊಂಡರು.

ಭಾರತದ ಆಟಗಾರ ಮೊದಲ ಸೆಟ್‌ನಲ್ಲಿ ಅಮೋಘ ಆಟದ ಮೂಲಕ ಗಮನ ಸೆಳೆದರು. ಎದುರಾಳಿಗೆ ತೀವ್ರ ಪೈಪೋಟಿ ಒಡ್ಡಿದ ಯೂಕಿ 6–6ರಲ್ಲಿ ಸಮಬಲ ಸಾಧಿಸಿದರು. ಆದರೆ ‘ಟೈ ಬ್ರೇಕರ್’ನಲ್ಲಿ ಎದುರಾಳಿಯ ಸವಾಲು ಮೀರಿ ನಿಲ್ಲಲು ಭಾರತದ ಆಟಗಾರನಿಗೆ ಆಗಲಿಲ್ಲ. ಹೀಗಾಗಿ ನಿರಾಸೆ ಎದುರಾಯಿತು.

ಇದರಿಂದ ವಿಶ್ವಾಸ ಕಳೆದುಕೊಳ್ಳದ ಅವರು ಎರಡನೇ ಸೆಟ್‌ನಲ್ಲಿ ಮಿಂಚು ಹರಿಸಿದರು. ಶರವೇಗದ ಸರ್ವ್‌ಗಳನ್ನು ಸಿಡಿಸಿದ ಭಾರತದ ಆಟಗಾರ ಚೆಂಡನ್ನು ಹಿಂತಿರುಗಿಸುವಲ್ಲೂ ಚುರುಕುತನ ತೋರಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 76ನೇ ಸ್ಥಾನ ಹೊಂದಿರುವ ಡಸ್ಟಿನ್‌ ಮೇಲೆ ಒತ್ತಡ ಹೇರಿದರು.  ಈ ಮೂಲಕ ಸುಲಭವಾಗಿ ಸೆಟ್‌ ಜಯಿಸಿ 1–1ರಲ್ಲಿ ಸಮಬಲ ಮಾಡಿಕೊಂಡರು.

ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಸೆಟ್‌ ಕುತೂಹಲದ ಗಣಿ ಅನಿಸಿತ್ತು. ಈ ಸೆಟ್‌ನಲ್ಲಿ ಜರ್ಮನಿಯ ಡಸ್ಟಿನ್‌ ಮಿಂಚಿದರು. 10ನೇ ಗೇಮ್‌ ವರೆಗೂ ಬ್ರೌನ್‌ಗೆ ತೀವ್ರ ಪೈಪೋಟಿ ಒಡ್ಡಿದ ಯೂಕಿ ಬಳಿಕ ಎದುರಾಳಿಯ ಆಕ್ರಮಣ ಕಾರಿ ಆಟದ ಮುಂದೆ ಮಂಕಾದರು.

ಡಬಲ್ಸ್‌ನಲ್ಲಿ ಗೆದ್ದ ಜೀವನ್‌–ಬ್ರೌನ್‌: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಜೀವನ್‌ ನೆಡುಂಚೆಳಿಯನ್‌ ಜೊತೆ ಆಡಿದ ಬ್ರೌನ್‌ ಅವರು ಮೊದಲ ಸುತ್ತಿನಲ್ಲಿ ಗೆದ್ದರು. ಜೀವನ್‌ ಮತ್ತು ಬ್ರೌನ್‌ 7–6, 6–7, 11–9ರಲ್ಲಿ ಬ್ರಿಟನ್‌ನ ಕೆನ್‌ ಮತ್ತು ನಿಯೆಲ್‌ ಸ್ಕುಪ್‌ಸ್ಕಿ ಅವರನ್ನು ಸೋಲಿಸಿ ದರು.

ಪೇಸ್‌ ಜೋಡಿಗೆ ಸೋಲು: ಜೆಕ್‌ ಓಪನ್‌  ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಸ್ಪೇನ್‌ನ ಡೇವಿಡ್‌ ಮರೆರೊ ಅವರು ನಿರಾಸೆ ಕಂಡರು.

ಸೆಮಿಫೈನಲ್ ಹೋರಾಟದಲ್ಲಿ ಪೇಸ್‌ ಮತ್ತು ಡೇವಿಡ್‌ 3–6, 4–6ರ ನೇರ ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ರೋಮನ್‌ ಜೆಬಾವೆ ಮತ್ತು ಹಾನ್ಸ್‌ ಪೊಡ್ಲಿಪಿನಿಕ್‌ ಕ್ಯಾಸ್ಟಿಲ್ಲೊ ವಿರುದ್ಧ ಮಣಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry