ಸಹ ಸ್ಥಾಪಕರ ಪಾಲು ಮಾರಾಟ ಇಲ್ಲ: ಇನ್ಫಿ

7

ಸಹ ಸ್ಥಾಪಕರ ಪಾಲು ಮಾರಾಟ ಇಲ್ಲ: ಇನ್ಫಿ

Published:
Updated:
ಸಹ ಸ್ಥಾಪಕರ ಪಾಲು ಮಾರಾಟ ಇಲ್ಲ: ಇನ್ಫಿ

ಬೆಂಗಳೂರು: ಸಂಸ್ಥೆಯ ಸಹ ಸ್ಥಾಪಕರು ತಮ್ಮ ಪಾಲು ಬಂಡವಾಳವನ್ನೆಲ್ಲವನ್ನು ಮಾರಾಟ ಮಾಡಲು ಉದ್ದೇಶಿಸಿದ್ದಾರೆ ಎನ್ನುವ ಪತ್ರಿಕಾ ವರದಿಗಳನ್ನು ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಫೊಸಿಸ್‌ ಅಲ್ಲಗಳೆದಿದೆ.

ಎನ್. ಆರ್‌. ನಾರಾಯಣಮೂರ್ತಿ ಅವರೂ ಸೇರಿದಂತೆ ಸಂಸ್ಥೆಯ ಪ್ರವರ್ತಕರು ತಮ್ಮೆಲ್ಲ ಪಾಲನ್ನು ಮಾರಾಟ ಮಾಡಲು ಹೊರಟಿದ್ದಾರೆ ಎನ್ನುವ ವರದಿಗಳಲ್ಲಿ ಯಾವುದೇ ಹುರುಳಿಲ್ಲ. ಸಹ ಸ್ಥಾಪಕರೂ ಅಂತಹ ವರದಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಮೂರ್ತಿ ಅವರ ಜತೆ ನಂದನ್‌ ನಿಲೇಕಣಿ, ಕ್ರಿಸ್‌ ಗೋಪಾಲಕೃಷ್ಣನ್‌, ಎಸ್‌. ಡಿ. ಶಿಬುಲಾಲ್‌ ಮತ್ತು ಕೆ. ದಿನೇಶ್‌ ಅವರು ತಮ್ಮ ಒಟ್ಟು  ₹ 28,000 ಕೋಟಿಗಳಷ್ಟು ಮೊತ್ತದ ಪಾಲು ಬಂಡವಾಳವನ್ನು ಮಾರಾಟ ಮಾಡಲು ಉದ್ದೇಶಿಸಿದ್ದಾರೆ ಎಂದು ವರದಿಯಾಗಿತ್ತು.

ಪ್ರವರ್ತಕರ ಪಾಲು ಬಂಡವಾಳ ಮಾರಾಟದ ಬೆಳವಣಿಗೆಗಳ ಬಗ್ಗೆ ಸಂಸ್ಥೆಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಊಹಾಪೋಹದ ವರದಿಗಳನ್ನು ಪ್ರಕಟಿಸಬೇಡಿ ಎಂದು ನಾವು ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ಈ ಬಗೆಯ ಸುಳ್ಳು ಸುದ್ದಿಗಳು ಸಂಸ್ಥೆಯ ಮತ್ತು ಅದರ ಎಲ್ಲ ಪಾಲುದಾರರ ಹಿತಾಸಕ್ತಿಗೆ ಹಾನಿ ಉಂಟು ಮಾಡುತ್ತವೆ ಎಂದೂ ಇನ್ಫೊಸಿಸ್‌ ಅಭಿಪ್ರಾಯಪಟ್ಟಿದೆ.

ಪ್ರವರ್ತಕರು ಹೊರ ನಡೆದ ಮೂರು ವರ್ಷಗಳ ನಂತರದ ಅವಧಿಯಲ್ಲಿ ನಿರ್ದೇಶಕ ಮಂಡಳಿಯು, ಸಂಸ್ಥೆಯನ್ನು ಮುನ್ನಡೆಸುತ್ತಿರುವ ವೈಖರಿ ಕಂಡು ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕೆ ಅವರೆಲ್ಲ ತಮ್ಮ ಪಾಲಿನ ಷೇರುಗಳನ್ನೆಲ್ಲ ಮಾಡಲು ಉದ್ದೇಶಿಸಿದ್ದಾರೆ ಎಂದು ಇಂಗ್ಲಿಷ್‌ ಪತ್ರಿಕೆಯೊಂದು ವರದಿ ಮಾಡಿತ್ತು.

ಬಹಿರಂಗ ಸಂಘರ್ಷ: ಕಾರ್ಪೊರೇಟ್‌ ಆಡಳಿತ ಮತ್ತು ಉನ್ನತ ಅಧಿಕಾರಿಗಳ ವೇತನ ಹೆಚ್ಚಳವೂ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸಹ ಸ್ಥಾಪಕರು ಸಂಸ್ಥೆಯ ನಿರ್ದೇಶಕ ಮಂಡಳಿ ಜತೆ ಬಹಿರಂಗವಾಗಿ ಸಂಘರ್ಷಕ್ಕೆ ಇಳಿದಿದ್ದರು. ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಅವರಿಗೆ ₹ 72 ಕೋಟಿಗಳಷ್ಟು ಮೊತ್ತದ ವೇತನ ಮತ್ತು ಭತ್ಯೆ ನೀಡುವುದನ್ನೂ ಪ್ರಶ್ನಿಸಿದ್ದರು.

ಷೇರು ಬೆಲೆ ಕುಸಿತ

ಪ್ರವರ್ತಕರ ಪಾಲು ಬಂಡವಾಳ ಮಾರಾಟಕ್ಕೆ ಸಂಬಂಧಿಸಿದ ವರದಿ ಕಾರಣಕ್ಕೆ ಮುಂಬೈ ಷೇರುಪೇಟೆಯಲ್ಲಿ ಶುಕ್ರವಾರ ಸಂಸ್ಥೆಯ ಷೇರು ಬೆಲೆ ಶೇ 3ರಷ್ಟು ಇಳಿಕೆ ದಾಖಲಿಸಿ ಆನಂತರ ಚೇತರಿಸಿಕೊಂಡಿತ್ತು.

ಒಂದು ಹಂತದಲ್ಲಿ ಪ್ರತಿ ಷೇರಿನ ಬೆಲೆ ₹ 923.05ಗೆ (ಶೇ 3.47ರಷ್ಟು ) ಇಳಿದಿತ್ತು. ದಿನದ ಕೊನೆಯಲ್ಲಿ ಶೇ 0.80 ರಷ್ಟು ಕುಸಿತದೊಂದಿಗೆ ₹ 948.65 ವಹಿವಾಟು ಕೊನೆಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry