‘ಗ್ರಾಮೀಣ ಸೊಗಡು ಉಳಿಸಿ, ಬೆಳೆಸಿ’

7

‘ಗ್ರಾಮೀಣ ಸೊಗಡು ಉಳಿಸಿ, ಬೆಳೆಸಿ’

Published:
Updated:
‘ಗ್ರಾಮೀಣ ಸೊಗಡು ಉಳಿಸಿ, ಬೆಳೆಸಿ’

ರಾಯಚೂರು: ‘ಗ್ರಾಮೀಣ ಸೊಗಡಿನ ಕಲೆ ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು’ ಎಂದು ಆಧ್ಯಾತ್ಮಿಕ ಚಿಂತಕ ಆನಂದ ಗುರೂಜಿ ಹೇಳಿದರು. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮುನ್ನೂರು ಕಾಪು ಬಲಿಜ ಸಮಾಜ, ನಗರಸಭೆ, ಎಪಿಎಂಸಿ, ಹಟ್ಟಿ ಚಿನ್ನದಗಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ‘ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ’ ಎರಡನೇ ದಿನದ  ಕಾರ್ಯಕ್ರಮಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಅನ್ನ ನೀಡುವ ರೈತರು ಎಂದಿಗೂ ಬೇಡುವ ಕೈಗಳಾಗಬಾರದು. ಇಂಥ ಪರಿಸ್ಥಿತಿ ನಾಡಿಗೆ ಬರಬಾರದು. ರಾಯಚೂರಿನಲ್ಲಿ ಮುನ್ನೂರು ಕಾಪು ಸಮಾಜವು 17 ವರ್ಷಗಳಿಂದ ಮುಂಗಾರು ಹಬ್ಬವನ್ನು ನಿರಂತರವಾಗಿ ಆಚರಿಸುತ್ತಾ ಬರುತ್ತಿರುವುದು ಸಂತೋಷದಾಯಕ’ ಎಂದರು.

‘ರೈತರು ಒಗ್ಗೂಡಿದರೆ ಏನೆಲ್ಲಾ ಸಾಧನೆಗಳಾಗುತ್ತವೆ. ಸರ್ಕಾರದಿಂದ ಯಾವುದೇ ಸಹಾಯ ಅಪೇಕ್ಷಿಸದೆ ಸಾಂಸ್ಕೃತಿಕ ಹಬ್ಬವನ್ನು ವೈಭವಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ’ ಎಂದು ಹೇಳಿದರು.

ಮಾಜಿ ಶಾಸಕ ಎ. ಪಾಪರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜೆ. ಶರಣಪ್ಪಗೌಡ, ಮುಖಂಡರಾದ ಆರ್. ತಿಮ್ಮಯ್ಯ, ಕೆ. ಶಾಂತಪ್ಪ, ಕಡಗೋಲ ಅಂಜಿನೇಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಬಂಗಿ ನರಸರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ರಘುಪತಿ ಭಟ್ಟ ಇದ್ದರು.

ಜನಮನ ರಂಜಿಸಿದ ನೃತ್ಯಗಳು: ರಾಯಚೂರು ಹಬ್ಬದ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಸಾಂಸ್ಕೃತಿಕ ನೃತ್ಯ ಸ್ಪರ್ಧೆಗಳು ಜನಮನ ಸೆಳೆದವು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ವಿವಿಧ ರಾಜ್ಯಗಳ ಕಲಾವಿದರು ಪ್ರದರ್ಶಿಸಿದ ಸಾಂಸ್ಕೃತಿಕ ನೃತ್ಯಗಳಿಗೆ ಜನರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿದರು.

ಮಹಾರಾಷ್ಟ್ರದ ಲಾವಣಿ, ಕರ್ನಾಟಕದ ವಿವಿಧ ನೃತ್ಯಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕಲಾವಿದರ ತಂಡಗಳು ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಮೆರುಗು ತುಂಬಿದರು. ತುಂತುರು ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನರು ಕಾರ್ಯಕ್ರಮ ವೀಕ್ಷಿಸಿದರು.

ಎರಡು ಟನ್‌ ಭಾರ ಎಳೆಯುವ ಸ್ಪರ್ಧೆ: ಶುಕ್ರವಾರ ಬೆಳಿಗ್ಗೆ ಎತ್ತುಗಳಿಂದ ಎರಡು ಟನ್‌ ಕಲ್ಲುಗಳ ಭಾರ ಎಳೆಯುವ ಸ್ಪರ್ಧೆ ನಡೆಯಿತು. ವಿವಿಧ ರಾಜ್ಯಗಳಿಂದ 12 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಸ್ಪರ್ಧೆಯನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದರು. 15 ನಿಮಿಷದಲ್ಲಿ ಭಾರ ಎಳೆಯುವ ಅಂತರ ಆಧರಿಸಿ ಬಹುಮಾನ ನೀಡಲಾಯಿತು.

3,173 ಅಡಿ ದೂರ ಭಾರ ಎಳೆದ ರಾಯಚೂರಿನ ಪಲ್ಕಂದೊಡ್ಡಿಯ ಖಾಜಾ ಹುಸೇನ್‌ ಅವರ ಅವರ ಜೋಡಿ ಎತ್ತುಗಳಿಗೆ ₹60 ಸಾವಿರ ನಗದು ಪ್ರಥಮ ಬಹುಮಾನ.

2,780 ಅಡಿ ದೂರ ಭಾರ ಎಳೆದ ಆಂಧ್ರಪ್ರದೇಶ ಕರ್ನೂಲಿನ ಸುಬ್ರಮಣ್ಯ ಶಿವರೆಡ್ಡಿ ಅವರ ಜೋಡಿ ಎತ್ತುಗಳಿಗೆ ₹45 ಸಾವಿರ ದ್ವಿತೀಯ ಬಹುಮಾನ.

2,411 ಅಡಿ ದೂರ ಭಾರ ಎಳೆದ ಆಂಧ್ರಪ್ರದೇಶದ ಅನಂತಪುರ ಯರಗುಂಟ್ಲಾದ ಉಮಾ ಮಹೇಶ್ವರರೆಡ್ಡಿ ಅವರ  ಜೋಡಿ ಎತ್ತುಗಳಿಗೆ ₹35 ಸಾವಿರ ನಗದು ತೃತೀಯ ಬಹುಮಾನ.

2,227 ಅಡಿ ದೂರ ಭಾರ ಎಳೆದ ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಯ ಚಂದ್ರಕಲಾ ಗ್ರಾಮದ ಶ್ರವಣಕುಮಾರ ಅವರ ಜೋಡಿ ಎತ್ತುಗಳಿಗೆ ₹25 ಸಾವಿರ ನಗದು 4ನೇ ಬಹುಮಾನ.

2,182 ಅಡಿ ದೂರ ಭಾರ ಎಳೆದ ರಾಯಚೂರಿನ ಗಂಗಾನಗರದ ಪರಿಟಾಲ್‌ ರವಿರೆಡ್ಡಿ ಅವರ ಜೋಡಿ ಎತ್ತುಗಳಿಗೆ ₹20 ಸಾವಿರ ಐದನೇ ಬಹುಮಾನ. 

2,174 ಅಡಿ ದೂರ ಭಾರ ಎಳೆದ ಕಾರ್ನೂಲಿನ ಪೆರಿಪೆಲ್ಲಿ ಗ್ರಾಮದ ರಾಮಚಂದ್ರ ಅವರ ಜೋಡಿ ಎತ್ತುಗಳಿಗೆ ₹10 ಸಾವಿರ ಆರನೇ ಬಹುಮಾನ.

ಗಮನ ಸೆಳೆದ ಮೆರವಣಿಗೆ

ಆನೆಯ ಮೇಲೆ ಕುಳಿತಿದ್ದ ಆನಂದ ಗುರೂಜಿ ಅವರ ಸಮ್ಮುಖದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ನಡೆಯಿತು. ಗ್ರಾಮೀಣ ಸೊಗಡಿನ ಕಲಾರೂಪಕಗಳಾದ ವೀರಗಾಸೆ, ಕತ್ತಿವರಸೆ, ಡೊಳ್ಳುಕುಣಿತ, ಗಾಲಿಹಲಗೆ, ಕರಡಿ ಮಜಲು, ನಾದಸ್ವಾರ ವಾದನ, ನಂದಿ ಧ್ವಜ, ಕಹಳೆ ವಾದನ, ಕೀಲುಕುದುರೆ ಕುಣಿತ, ಪಟ ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ವೀರಭದ್ರ ಕುಣಿತ, ಕಂಸಾಳೆ ಕಲಾವಿದರು ಮೆರವಣಿಗೆಯುದ್ದಕ್ಕೂ ಕಲೆ ಪ್ರದರ್ಶಿಸಿದರು. ಶೃಂಗರಿಸಿದ ಎತ್ತಿನ ಜೋಡಿಯೊಂದಿಗೆ ರೈತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

* * 

ರಾಜ ಮಹಾರಾಜರ ಕಾಲದಲ್ಲಿ ವೈಭವದ ಮೆರವಣಿಗೆಗಳು ನಡೆಯುತ್ತಿದ್ದವು. ರಾಯಚೂರಿನಲ್ಲಿ ಸಾಂಸ್ಕೃತಿಕ ಸಿರಿತನ ಚೆನ್ನಾಗಿದೆ. ನಾಡಿನಲ್ಲಿ ಮಳೆ–ಬೆಳೆ ಬರುವಂತೆ ಸಂಕಲ್ಪ ಮಾಡೋಣ

ಆನಂದ ಗುರೂಜಿ

ಆಧ್ಯಾತ್ಮಿಕ ಚಿಂತಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry