ಮಹಿಳಾ ವಿ.ವಿ.ಗೆ ‘ಅಕ್ಕ’ನ ಹೆಸರು

7
50 ಸಾವಿರಕ್ಕೂ ಅಧಿಕ ಮಹಿಳೆಯರ ಸಮ್ಮುಖದಲ್ಲಿ ಇಂದು ಸಮಾರಂಭ

ಮಹಿಳಾ ವಿ.ವಿ.ಗೆ ‘ಅಕ್ಕ’ನ ಹೆಸರು

Published:
Updated:
ಮಹಿಳಾ ವಿ.ವಿ.ಗೆ ‘ಅಕ್ಕ’ನ ಹೆಸರು

ವಿಜಯಪುರ: ಇಲ್ಲಿನ ಮಹಿಳಾ ವಿಶ್ವವಿದ್ಯಾಲಯಕ್ಕೆ ‘ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣ ಮಾಡುವ ವಿಧ್ಯುಕ್ತ ಸಮಾರಂಭ ಭಾನುವಾರ (ಜೂನ್‌ 11) ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

2003–04ನೇ ಸಾಲಿನಲ್ಲಿ ಆರಂಭಗೊಂಡ ಈ ವಿಶ್ವವಿದ್ಯಾಲಯವನ್ನು, 2016ರ ಸೆಪ್ಟೆಂಬರ್‌ವರೆಗೂ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ’ ಎಂದೇ ಕರೆಯಲಾಗುತ್ತಿತ್ತು.

2016ರ ಸೆಪ್ಟೆಂಬರ್‌ 21ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಹೆಸರು ಬದಲಾವಣೆಗೆ ಅನುಮೋದನೆ ದೊರೆತು, ಬಳಿಕ ವಿಧಾನ ಮಂಡಲದ ಅಧಿವೇಶನದಲ್ಲಿ ಇದಕ್ಕೆ ಅನುಮತಿ ಪಡೆದ ಸರ್ಕಾರ, ಅಧಿಸೂಚನೆ ಹೊರಡಿಸಿತ್ತು.

ಈಗಾಗಲೇ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಇದೀಗ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮಧ್ಯ ಕರ್ನಾಟಕದ 16 ಜಿಲ್ಲೆಗಳಿಂದ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರನ್ನು ಸೇರಿಸಿ, ಮರು ನಾಮಕರಣಕ್ಕೆ ಬೃಹತ್ ಸಮಾರಂಭವನ್ನು ರಾಜ್ಯ ಸರ್ಕಾರವೇ ಆಯೋಜಿಸಿದೆ.

ಮಹಿಳಾ ವಿ.ವಿ.ಯ ಆವರಣದಲ್ಲಿ ಸಮಾರಂಭದ ಅಂತಿಮ ಹಂತದ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ಇದೇ ಸಂದರ್ಭ ‘ಸಾಧಕಿಯರ ಶಿಲ್ಪೋದ್ಯಾನ’ವೂ ಅನಾವರಣಗೊಳ್ಳಲಿದೆ. ಕಲಾ ಗ್ರಾಮವೂ ನಿರ್ಮಾಣಗೊಂಡಿದ್ದು, ಇದರಲ್ಲಿ ಹಳ್ಳಿ ಬದುಕಿನ ಚಿತ್ರಣವಿದೆ.

ದಶಕದ ಕೂಗು: ಜಿಲ್ಲೆಯ ಚರಿತ್ರೆಯೊಂದಿಗೆ ಬೆಸೆದುಕೊಂಡಿರುವ ಮಹಿಳೆಯರ ಹೆಸರು ಇಡಬೇಕು ಎಂಬ ಕೂಗು ವಿಶ್ವವಿದ್ಯಾಲಯ ಆರಂಭಗೊಂಡ ದಿನದಿಂದಲೂ ಕೇಳಿ ಬರುತ್ತಿತ್ತು.

‘2013ರ ಫೆಬ್ರುವರಿಯಲ್ಲಿ ವಿಜಯಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 2014ನೇ ಡಿಸೆಂಬರ್‌ನಲ್ಲಿ ನಡೆದ ಅಖಿಲ ಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿ ಹೆಸರಿಡಬೇಕು ಎಂಬ ನಿರ್ಣಯ ಅಂಗೀಕರಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿತ್ತು. ಇದರ ಜತೆಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲೂ ನಿರ್ಣಯ ಅಂಗೀಕರಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು’ ಎಂದು ಮಹಿಳಾ ವಿ.ವಿ.ಯ ಸಿಂಡಿಕೇಟ್‌ ಮಾಜಿ ಸದಸ್ಯ ರಫಿ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

* ಮಹಿಳಾ ವಿ.ವಿ. ನಾಮಕರಣ ಸಮಾರಂಭದಲ್ಲಿ ವಿದ್ಯಾರ್ಥಿನಿಯರ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಘೋಷಿಸುವ ಸಾಧ್ಯತೆ ಇದೆ

–ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ಅಂಕಿ– ಅಂಶ

* ₹3.10ಕೋಟಿ ವೆಚ್ಚದಲ್ಲಿ ಸಮಾರಂಭ

* 42 ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿ

* 16 ಜಿಲ್ಲೆಗಳಿಂದ 1,300 ಬಸ್‌ ವ್ಯವಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry