ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ನಿರ್ಲಕ್ಷ್ಯದಿಂದ ಅಪರಾಧಿಗಳು ಪಾರು

ವಿಚಾರ ಸಂಕಿರಣದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಬೇಸರ
Last Updated 10 ಜೂನ್ 2017, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪೊಲೀಸರ ನಿರ್ಲಕ್ಷ್ಯವೇ ಕಾರಣ’ ಎಂದು  ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಹೇಳಿದರು.

ನಗರದಲ್ಲಿ ಶನಿವಾರ ನಡೆದ ‘ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವಿಕೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪೊಲೀಸರು ಪ್ರಕರಣದ ತನಿಖೆಯನ್ನು ಪರಿಪೂರ್ಣವಾಗಿ ನಡೆಸುತ್ತಿಲ್ಲ. ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳತ್ತಿಲ್ಲ. ಇಂತಹ ನಿರ್ಲಕ್ಷ್ಯದಿಂದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸಾಕ್ಷ್ಯಗಳ ಕೊರತೆಯಿಂದ ವಿಚಾರಣೆ ವಿಳಂಬವಾಗುತ್ತಿದೆ. ಇದು ಸಾಕ್ಷ್ ನಾಶಕ್ಕೆ ಅವಕಾಶ ಕಲ್ಪಿಸುತ್ತಿದೆ’ ಎಂದು ಹೇಳಿದರು.

‘ಕೆಲವು ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರುವುದು ತಡವಾಗುತ್ತದೆ. ಇದೇ ಸಮಯದಲ್ಲಿ ತನಿಖಾಧಿಕಾರಿಯೂ ನಿವೃತ್ತಿ ಹೊಂದುತ್ತಾರೆ. ಆರೋಪಿ ದೋಷಮುಕ್ತನಾಗಲು ಇದು ಕಾರಣವಾಗುತ್ತಿದೆ. ಹೀಗಾಗಿ, ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳಾಗಬೇಕು. ನಿಯಮಗಳಲ್ಲೂ ಬದಲಾವಣೆ ತರಬೇಕಿದೆ’ ಎಂದರು.

ಪೊಲೀಸ್ ಮಹಾನಿರ್ದೇಶಕ  ಆರ್.ಕೆ.ದತ್ತ, ‘2015ರವರೆಗೆ ದಾಖಲಾಗಿದ್ದ 31 ಲಕ್ಷ ಕ್ರಿಮಿನಲ್ ಪ್ರಕರಣಗಳ ಪೈಕಿ  ಕೇವಲ 4 ಲಕ್ಷ ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ. 2016ರ ಬಳಿಕ 73 ಸಾವಿರ ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಕ್ಕೆ  ಬಾಕಿ ಇದ್ದವು. ಈ ಪೈಕಿ  20 ಸಾವಿರ ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*
ಪೊಲೀಸರ ತಪ್ಪಿನಿಂದ ನ್ಯಾಯಾಲಯವೂ ಅಪರಾಧಿಗಳನ್ನು ನಿರಪರಾಧಿ ಎಂದು ಘೋಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂತಹವರು  ಮತ್ತೆ ದುಷ್ಕೃತ್ಯ ಎಸಗುತ್ತಿದ್ದಾರೆ.
-ಎಸ್.ಕೆ.ಮುಖರ್ಜಿ,
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT