ಹಾಡಿನ ‘ಕಿಡಿ’ ಹಾರಿತು!

7

ಹಾಡಿನ ‘ಕಿಡಿ’ ಹಾರಿತು!

Published:
Updated:
ಹಾಡಿನ ‘ಕಿಡಿ’ ಹಾರಿತು!

‘ಆರು ತಿಂಗಳ ಕಾಲ ಹೊರಗೆಲ್ಲೂ ಹೋಗದೆ ಮನೆಯಲ್ಲಿಯೇ ಕೂತು 250 ಸಿನಿಮಾ ನೋಡಿದೆ. 60 ಕಥೆಗಳನ್ನು ಕೇಳಿದೆ. ಅಪ್ಪ ನನಗೆಲ್ಲೋ ಹುಚ್ಚು ಹಿಡಿದುಬಿಟ್ಟಿದೆ ಅಂತ ಹೆದರಿಕೊಂಡುಬಿಟ್ಟಿದ್ದರು’

ಹೀಗೆ ಹೇಳಿಕೊಳ್ಳುವಾಗ ಭುವನ್‌ ಚಂದ್ರ ಮಾತಿನಲ್ಲಿ ಕಳೆದ ದಿನಗಳ ನೋವಿನ ಜತೆಗೆ ಎಷ್ಟಾದರೂ ಕಷ್ಟಪಟ್ಟು ಚಂದನವನದಲ್ಲಿ ನೆಲೆಯೂರಲೇ ಬೇಕು ಎಂಬ ಛಲವೂ ಎದ್ದು ಕಾಣುತ್ತಿತ್ತು.

ತಾವು ನೋಡಿದ ಇನ್ನೂರೈವತ್ತು ಸಿನಿಮಾಗಳಲ್ಲಿ ಅವರಿಗೆ ಮೆಚ್ಚುಗೆಯಾಗಿದ್ದು ಮಲಯಾಳಂನ ‘ಕಲಿ’. ದುಲ್ಕರ್‌ ಸಲ್ಮಾನ್‌ ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಚಿತ್ರವನ್ನು ‘ಕಿಡಿ’ಯಾಗಿಸಿ ಕನ್ನಡಕ್ಕೆ ತರುತ್ತಿದ್ದಾರೆ ನಿರ್ದೇಶಕ ರಘು ಎಸ್‌. ‘ಕಿಡಿ’ ತಮ್ಮ ವೃತ್ತಿಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬ ಆಸೆ ಮತ್ತು ವಿಶ್ವಾಸ ಎರಡೂ ಭುವನ್‌ ಅವರಿಗಿದೆ.

‘ಇದು ಸಿಡುಕು ಸ್ವಭಾವದ ಹುಡುಗನೊಬ್ಬನ ಕಥೆ. ನಾವೆಲ್ಲ ಸಣ್ಣ ಸಣ್ಣ ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುತ್ತಿರುತ್ತೇವೆ. ಕೆಲವೊಮ್ಮೆ ಅಂಥ ಸಣ್ಣ ವಿಷಯಗಳೇ ದೊಡ್ಡದಾಗಿ ಬೆಳೆದು ಅನಾಹುತಗಳು ಸೃಷ್ಟಿಯಾಗುತ್ತವೆ. ಈ ಸಿನಿಮಾದಲ್ಲಿಯೂ ಅಂಥದ್ದೇ ಕಥೆ ಹೇಳಹೊರಟಿದ್ದೇವೆ’ ಎಂದು ನಿರ್ದೇಶಕ ರಘು ವಿವರಿಸಿದರು.

ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಮಲಯಾಳಂನಿಂದ  ಈ ಚಿತ್ರದ ರಿಮೇಕ್‌ ಹಕ್ಕುಗಳನ್ನು ಖರೀದಿಸಲು ಸಹಾಯ ಮಾಡಿದ ಎಮಿಲ್‌ ಅವರೇ ‘ಕಿಡಿ’ಯ ನಾಲ್ಕು ಹಾಡುಗಳಿಗೆ ಸಂಗೀತ ಹೊಸೆದಿದ್ದಾರೆ.

ಡ್ಯಾನಿ ಕುಟ್ಟಪ್ಪ ಮತ್ತು ಉಗ್ರಂ ಮಂಜು ಈ ಚಿತ್ರದಲ್ಲಿ ಖಳನಟರಾಗಿ ‘ಕಿಡಿ’ಯ ಉರಿ ಹೆಚ್ಚಿಸಲಿದ್ದಾರೆ.

ನಾಗರಾಜ್‌ ಟಿ. ಈ ಚಿತ್ರದ ನಿರ್ಮಾಪಕರು. ಅವರ ಜತೆಗೆ ಮಲ್ಲಿಕಾರ್ಜುನ ಮತ್ತು ಧನಂಜಯ್‌ ಕೂಡ ಹಣ ಹೂಡಿದ್ದಾರೆ.

‘ನಾವು ನಮ್ಮ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಭಾವನೆಗಳೇ ನಮ್ಮನ್ನು ನಿಯಂತ್ರಿಸತೊಡಗುತ್ತವೆ. ಇದೇ ಚಿತ್ರದ ಒನ್‌ಲೈನ್‌ ಸ್ಟೋರಿ’ ಎಂದರು ಡ್ಯಾನಿ ಕುಟ್ಟಪ್ಪ. ಉಗ್ರಂ ಮಂಜು ಅವರು ಮೂಲ ಸಿನಿಮಾಗಿಂತ ತುಂಬ ಚೆನ್ನಾಗಿ ಬಂದಿದೆ ಈ ಸಿನಿಮಾ ಎಂದು ಖುಷಿ ವ್ಯಕ್ತಪಡಿಸಿದರು.

ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ ಈ ಚಿತ್ರದ ನಾಯಕಿ. ಅವರಿಗೆ ಈ ಚಿತ್ರದ ಚಿತ್ರೀಕರಣ ಒಂದು ಒಳ್ಳೆಯ ಪಿಕ್‌ನಿಕ್‌ ಅನುಭವ ನೀಡಿದೆಯಂತೆ.

‘‘ಮಲಯಾಳಂನ ‘ಕಲಿ’ ಸಿನಿಮಾ ನೋಡಿ ಇಷ್ಟಪಟ್ಟಿದ್ದೆ. ಆದರೆ ಅದೇ ಚಿತ್ರದ ಕನ್ನಡ ಅವತರಣಿಕೆಯಲ್ಲಿ ನಾನೇ ನಾಯಕಿಯಾಗಿ ನಟಿಸುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಎಂದು ಪುಳಕದಿಂದಲೇ ಹೇಳಿಕೊಂಡರು. ಆನಂದ್‌ ಆಡಿಯೊ ಈ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry