ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್ ಕೇಂದ್ರಗಳು ಬೇಕೆ? ಏಕೆ?

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ರ‍್ಯಾಂಕ್‌ನೊಂದಿಗೆ ಅವರು ಯಾವ ಕೋಚಿಂಗ್ ಸೆಂಟರ್‌ನಲ್ಲಿ ಕೋಚಿಂಗ್ ಪಡೆದಿದ್ದರು ಎಂಬುದೂ  ಮಹತ್ವ ಪಡೆಯುತ್ತಿದೆ.  ಸುಮಾರು ಮೂರು ದಶಕಗಳಿಗೂ ಹಿಂದೆ ಕರ್ನಾಟಕದಲ್ಲಿ  ಈಗಿನಂತೆ ಕೋಚಿಂಗ್ ಕೇಂದ್ರಗಳೇ ಇರಲಿಲ್ಲ. ಮನೆಪಾಠಗಳು ಸಣ್ಣ ಊರು–ಪಟ್ಟಣಗಳಲ್ಲಿ ಇರಲೇ ಇಲ್ಲ. ಹತ್ತನೇ ತರಗತಿಗೆ ಕೆಲವು ಗೈಡುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಅವುಗಳನ್ನೂ ಸಹ ಎಲ್ಲರೂ ಕೊಳ್ಳುತ್ತಿರಲಿಲ್ಲ. ಒಬ್ಬ ವಿದ್ಯಾರ್ಥಿ ಕೊಂಡರೆ ಅದು ಕೆಲವಾರು ವಿದ್ಯಾರ್ಥಿಗಳ ಕೈಯಲ್ಲಿ ಓಡಾಡುತ್ತಿತ್ತು. ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದುದು ಶಾಲೆಗಳ ಪಾಠಗಳನ್ನು ಆಲಿಸಿ, ಅಭ್ಯಸಿಸುವುದರ ಮೂಲಕ ಮಾತ್ರ. ಪಠ್ಯ ಪುಸ್ತಕಗಳೇ ಅವರಿಗೆ ಮೂಲ ಆಕರಗಳು. 

ಮುಂದಿನ ದಶಕದಲ್ಲಿ ಮನೆಪಾಠಗಳ ಜೋರು ಹೆಚ್ಚಾಯಿತು. ಅದರಲ್ಲೂ ಮುಖ್ಯವಾಗಿ ಗಣಿತದ ಶಿಕ್ಷಕರ ಮನೆ ಮುಂದೆ ಸಂಜೆ ಆಯಿತೆಂದರೆ ವಿದ್ಯಾರ್ಥಿಗಳ ಸೈಕಲ್ಲುಗಳು ಸಾಲುಸಾಲಾಗಿ ನಿಂತಿರುತ್ತಿದ್ದವು. ರಜಾದಿನಗಳಲ್ಲಿ, ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿ 2–3 ಶಿಫ್ಟ್‌ಗಳಲ್ಲಿ ಪಾಠ ಮಾಡುವ ಶಿಕ್ಷಕರೂ ಇದ್ದರು. ಆದರೆ ಅವರ ಸಂಖ್ಯೆ ಸಣ್ಣ, ದೊಡ್ಡ ನಗರಗಳಲ್ಲಿ ಬೆರಳೆಣಿಕೆಯಷ್ಟಿತ್ತು. ಬರುಬರುತ್ತ ವಿಜ್ಞಾನದ ವಿಷಯಗಳಿಗೆ ಮನೆಪಾಠಗಳು ತೆರೆದುಕೊಂಡವು.

ಇದೇ ಹೊತ್ತಿಗೆ ದೊಡ್ಡ ನಗರಗಳಲ್ಲಿ ಕೋಚಿಂಗ್ ಕೇಂದ್ರಗಳು ಅಲ್ಲೊಂದು ಇಲ್ಲೊಂದು ಹುಟ್ಟಿಕೊಂಡವು. ಮೊದಮೊದಲು ಪಾಲಕರು, ವಿದ್ಯಾರ್ಥಿಗಳು ಅವುಗಳನ್ನು ಅನುಮಾನದಿಂದಲೇ  ನೋಡಿದರು. ಆದರೆ ವಿಜ್ಞಾನಕ್ಷೇತ್ರದ ಪೈಪೋಟಿ ಹೆಚ್ಚಿದಂತೆ, ಎಂಜಿನಿಯರಿಂಗ್ ಕಾಲೇಜುಗಳ ಆರ್ಭಟದಿಂದಾಗಿ ಮನೆಪಾಠಗಳು ಹಾಗೂ ಕೋಚಿಂಗ್ ಕೇಂದ್ರಗಳು ಎಲ್ಲೆಡೆ ತಲೆ ಎತ್ತಲಾರಂಭಿಸಿದವು. ವಿದೇಶದಲ್ಲಿ ತೆರೆದುಕೊಂಡ ಅವಕಾಶಗಳು, ಐಟಿ ಕ್ಷೇತ್ರದಲ್ಲಿ ಇದುವರೆಗೂ ಕಂಡುಕೇಳರಿಯದ ಸಂಬಳದ ಪ್ಯಾಕೇಜುಗಳು ಈ ಕೋಚಿಂಗ್ ಸೆಂಟರ್ ಎಂಬ ಬೆಳೆಯನ್ನು ಹುಲುಸಾಗಿ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದವು. ನಂತರದ ದಶಕದಲ್ಲಿ ಮನೆಪಾಠವೂ ಮಂಕಾಗಿ ಕೋಚಿಂಗ್ ಕೇಂದ್ರಗಳದ್ದೇ ಕಾರುಬಾರು ಎಲ್ಲೆಡೆ ನಡೆಯಿತು. ದೊಡ್ಡ ಪಟ್ಟಣಗಳಲ್ಲಿ ಅವು ಜನಪ್ರಿಯವಾಗಿ ರ‍್ಯಾಂಕ್‌ನ ಮೋಹ ಪಾಲಕರನ್ನು ಹಾಗೂ ವಿದ್ಯಾರ್ಥಿಗಳನ್ನು ಇನ್ನಿಲ್ಲದಂತೆ ಅವುಗಳೆಡೆಗೆ ಸೆಳೆದದ್ದು ಮಾತ್ರವಲ್ಲ, ಅವು ಅನಿವಾರ್ಯವಾದವು. ಅವುಗಳಿಲ್ಲದಿದ್ದರೆ ಒಳ್ಳೆಯ ಅಂಕಗಳನ್ನು ಪಡೆಯುವುದಾಗಲೀ, ರ‍್ಯಾಂಕ್ ಬರುವುದಾಗಲೀ, ಸಿಇಟಿಯ ಮೂಲಕ ಒಳ್ಳೆಯ ವಿದ್ಯಾಲಯಗಳಲ್ಲಿ ತಮಗೆ ಬೇಕಾದ ಕೋರ್ಸಗಳನ್ನು ಪಡೆಯುವುದಾಗಲೀ ಸಾಧ್ಯವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಈ ಕೇಂದ್ರಗಳು ಬೆಳೆದವು. ಈ ಹೊತ್ತಿಗಾಗಲೇ ಸಣ್ಣ ನಗರಗಳಲ್ಲೂ ಅವು ಕೇಂದ್ರಗಳನ್ನು ತೆರೆದವು. ಸರಣಿಕೇಂದ್ರಗಳ ಮೂಲಕ ಕೋಚಿಂಗ್ ಎಂಬುದು ದೊಡ್ಡ ಉದ್ಯಮವಾಗಿ ಬೆಳೆಯಿತು. ಪ್ರತಿವರ್ಷ ಮಾರ್ಚ್‌ ತಿಂಗಳು ಬಂತೆಂದರೆ ಇಡೀ ರಾಜ್ಯವೇ ಯುದ್ಧರಂಗವಾಗಿ ಮಾರ್ಪಡುವಂತೆ ಈ ಕೋಚಿಂಗ್ ಕೇಂದ್ರಗಳು ವರ್ತಿಸುತ್ತವೆ. ವಿದ್ಯಾರ್ಥಿಗಳು, ಪಾಲಕರಲ್ಲಿ ಭಯ, ಆತಂಕಗಳು ಮನೆಮಾಡುವಂತೆ ಮಾಡುತ್ತವೆ.

ಹಾಗಾದರೆ ಈ ಕೋಚಿಂಗ್ ಕೇಂದ್ರಗಳಿಲ್ಲದೆಯೆ ಒಳ್ಳೆಯ ಅಂಕಗಳನ್ನು ಗಳಿಸಲು ಸಾಧ್ಯವೇ ಇಲ್ಲವೆ? ಖಂಡಿತ ಸಾಧ್ಯ. ಸತತ ಓದು, ನಿರಂತರ ಅಭ್ಯಾಸದಿಂದ ಇದು ಕಷ್ಟವೇನಲ್ಲ ಎಂಬುದನ್ನು ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಕಂಡುಕೊಳ್ಳುತ್ತಿದ್ದಾರೆ.

ಇದಕ್ಕೂ ಮೊದಲು ನಾವು ಯೋಚಿಸಬೇಕಾದದ್ದು ಕೋಚಿಂಗ್‌ ಸೆಂಟರ್‌ಗಳ ಅನಿವಾರ್ಯತೆ ಸೃಷ್ಟಿಯಾದದ್ದು ಹೇಗೆ? ನಮ್ಮ ಶಿಕ್ಷಣವ್ಯವಸ್ಥೆಯ ಒಂದು ಭಾಗವೇ ಆಗಿಹೋಗಿರುವ ಈ ಕೇಂದ್ರಗಳ ಹುಟ್ಟಿಗೆ ಕಾರಣವಾದ ಅಂಶಗಳು ಯಾವುವು – ಎನ್ನುವುದನ್ನೂ ಕಂಡುಕೊಳ್ಳಬೇಕಿದೆ. ಶಾಲಾ–ಕಾಲೇಜುಗಳ ಇಂದಿನ ವೈಖರಿಗೂ ಈ ಕೋಚಿಂಗ್‌ ಸೆಂಟರ್‌ಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ನೇರ ಸಂಬಂಧವಿರುವುದು ಸ್ಪಷ್ಟ. ಇದರ ಜೊತೆಗೆ ಪಾಲಕರ–ಪೋಷಕ–ವಿದ್ಯಾರ್ಥಿಗಳ ಮಾನಸಿಕತೆಯೂ ಇದಕ್ಕೆ ಗಣನೀಯ ಕೊಡುಗೆಯನ್ನು ನೀಡಿವೆ. ಪರೀಕ್ಷೆಗಳು, ಅಂಕಗಳು, ಪ್ರತಿಷ್ಠೆ – ಇವೇ ಶಿಕ್ಷಣದ ಮೂಲ ಉದ್ದೇಶ ಎಂಬ ಧೋರಣೆ ಸಮಾಜದಲ್ಲಿ ಬಲಿಯುತ್ತಿರುವುದಕ್ಕೂ ಈ ಕೇಂದ್ರಗಳ ಆವಶ್ಯಕತೆಗೂ ನಂಟಿರುವುದನ್ನೂ ತಳ್ಳಿಹಾಕುವಂತಿಲ್ಲ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ‘ಕೋಚಿಂಗ್‌ ಸೆಂಟರ್‌’ಗಳ ಬೇಕೆ? ಬೇಡವೆ? ಬೇಡವಾದರೆ ಏಕೆ ಬೇಡ? ಬೇಕಿದ್ದರೆ ಏಕೆ ಬೇಕು? – ಎಂದು ಗಂಭೀರವಾಗಿ ಆಲೋಚಿಸಬೇಕಿದೆ.

ಮೂರು ದಶಕಗಳ ಹಿಂದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಆತ್ಮವಿಶ್ವಾಸದಿಂದ ಎದುರು ನೋಡುತ್ತಿದ್ದರೋ ಆ ದಿನಗಳು ಮತ್ತೆ ಬಂದಾವು ಎಂದು ಆಶಿಸೋಣ. ಮಕ್ಕಳ ಸಾಮರ್ಥ್ಯವನ್ನು ಅವರ ಓದು, ಅಭ್ಯಾಸಗಳೇ ನಿರ್ಧರಿಸುವಂತಾಗಲಿ ಎಂದು ಹಂಬಲಿಸೋಣ. ಪಾಲಕರಿಗೆ ಕೋಚಿಂಗ್ ಕೇಂದ್ರಗಳಿಗಿಂತ ತಮ್ಮ ಮಕ್ಕಳ ಪ್ರಯತ್ನದ ಬಗ್ಗೆ ಹೆಚ್ಚು ವಿಶ್ವಾಸ ಮೂಡಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT