ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ–ಶ್ರೀಲಂಕಾ ಹಣಾಹಣಿ ಇಂದು

ಗೆದ್ದವರಿಗೆ ಸೆಮಿಫೈನಲ್‌ನಲ್ಲಿ ಸ್ಥಾನ; ಶ್ರೀಲಂಕಾಗೆ ಮ್ಯಾಥ್ಯೂಸ್‌ ಬಲದ ಮೇಲೆ ಭರವಸೆ
Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಕಾರ್ಡಿಫ್‌: ಆರಂಭದ ಪಂದ್ಯದಲ್ಲಿ ಸೋಲು ಕಂಡರೂ ನಂತರ ಬಲಿಷ್ಠ ಎದುರಾಳಿಗಳನ್ನು ಮಣಿಸಿದ ತಂಡಗಳ ನಡುವಿನ ಹಣಾಹಣಿಗೆ ಸೋಫಿಯಾ ಗಾರ್ಡನ್ಸ್‌ ಸೋಮವಾರ ಸಾಕ್ಷಿಯಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿದ್ದು ಗೆದ್ದವರು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ. ಹೀಗಾಗಿ ‘ಬಿ’ ಗುಂಪಿನ ಈ ಪಂದ್ಯವನ್ನು ‘ಕ್ವಾರ್ಟರ್‌ ಫೈನಲ್’ ಎಂದೇ ಬಿಂಬಿಸಲಾಗಿದೆ.

ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಮಣಿ ಸಿತ್ತು. ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ 124 ರನ್‌ಗಳಿಂದ ಸೋಲುಂಡಿದ್ದ ಪಾಕಿಸ್ತಾನ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.

ರ‍್ಯಾಂಕಿಂಗ್‌ನಲ್ಲಿ ತಮಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳನ್ನು ಮಣಿಸಿದ್ದ ರಿಂದ ಉಭಯ ತಂಡಗಳ ಭರವಸೆ ಹೆಚ್ಚಿದೆ. ಈಗ ಈ ತಂಡಗಳೇ ಮುಖಾ ಮುಖಿಯಾಗಲಿವೆ. ಆದ್ದರಿಂದ ಜಯ ಯಾರು ಕಸಿದುಕೊಳ್ಳುವರು ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. 



ಮಹಮ್ಮದ್ ಅಮೀರ್ ಅವರನ್ನು ಹೊರತುಪಡಿಸಿದರೆ ಪಾಕಿಸ್ತಾನದ ಉಳಿದ ಬೌಲರ್‌ಗಳು ಭಾರತ ವಿರುದ್ಧದ ಪಂದ್ಯದಲ್ಲಿ ಪರಿಣಾಮ ಬೀರಲಿಲ್ಲ. ಆದರೆ ನಂತರದ ಪಂದ್ಯದಲ್ಲಿ ಸುಧಾರಿಸಿ ಕೊಂಡಿದ್ದರು. ಡಿವಿಲಿಯರ್ಸ್‌, ಹಾಶಿಮ್ ಆಮ್ಲಾ ಮುಂತಾದವರನ್ನು ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ದಕ್ಷಿಣ ಆಫ್ರಿಕಾವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ವೇಗಿ ಹಸನ್ ಅಲಿ (24ಕ್ಕೆ3) ಮತ್ತು ಎಡಗೈ ಸ್ಪಿನ್ನರ್‌ ಇಮದ್ ವಾಸಿಮ್‌ (20ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾಗೆ 219 ರನ್‌ ಗಳಿಸಲು ಸಾಧ್ಯವಾಗಿತ್ತು.

ಮಳೆಯ ಕಾರಣ 27 ಓವರ್‌ಗಳ ನಂತರ ಪಂದ್ಯವನ್ನು ರದ್ದುಗೊಳಿಸ ಲಾಗಿತ್ತು. ಆದರೆ ಡಕ್ವರ್ಥ್ ಲೂಯಿಸ್‌ ನಿಯಮದಡಿ ಜಯ ದಾಖಲಿಸಲು ಅಗತ್ಯವಿರುವ ರನ್ ಸರಾಸರಿಯನ್ನು ಉಳಿಸಿಕೊಳ್ಳುವ ಜಾಣ್ಮೆಯನ್ನು ಪಾಕಿ ಸ್ತಾನ ಬ್ಯಾಟ್ಸ್‌ಮನ್‌ಗಳು ಮೆರೆದಿದ್ದರು. ‘ಬಲಿಷ್ಠ ತಂಡವೊಂದರ ವಿರುದ್ಧದ ಉತ್ತಮ ಬೌಲಿಂಗ್‌ ಜಯಕ್ಕೆ ಕಾರಣ ವಾಯಿತು’ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್‌ ಪಂದ್ಯದ ನಂತರ ಹೇಳಿದ್ದರು. ಶ್ರೀಲಂಕಾ ವಿರುದ್ಧವೂ ಇದೇ ರೀತಿ ಆಡಿ ಜಯ ಗಳಿಸಲು ತಂಡ ಗಮನ ಹರಿಸಲಿದೆ.

ಮ್ಯಾಥ್ಯೂಸ್‌ ಬಲದ ಮೇಲೆ ಭರವಸೆ
ಮೊದಲ ಪಂದ್ಯದಲ್ಲಿ ನಾಯಕ್ ಆ್ಯಂಜೆಲೊ ಮ್ಯಾಥ್ಯೂಸ್‌ ಅನುಪಸ್ಥಿತಿ ಶ್ರೀಲಂಕಾವನ್ನು ಕಾಡಿತ್ತು. ಅವರು ತಂಡಕ್ಕೆ ಮರಳಿದ ನಂತರದ ಪಂದ್ಯದಲ್ಲಿ ಆಟಗಾರರಲ್ಲಿ ವಿಶ್ವಾಸ ಹೆಚ್ಚಿತ್ತು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ತಂಡ ನಾಯಕನ ಮೇಲೆ ಭರವಸೆ ಇರಿಸಿದೆ. ಬ್ಯಾಟಿಂಗ್‌ನಲ್ಲಿ ಕುಶಾಲ್‌ ಮೆಂಡಿಸ್‌, ಧನುಷ್ಕಾ ಗುಣತಿಲಕ, ಕುಶಾಲ್ ಪೆರೇರಾ ಮುಂತಾದವರ ಜೊತೆ ಅಸೆಲಾ ಗುಣರತ್ನ, ದಿನೇಶ್ ಚಾಂಡಿಮಲ್‌ ಮುಂತಾದವರು ನಾಯಕನಿಗೆ ಹೆಗಲೆಣೆಯಾಗಬೇಕಿದೆ.

ಏಕದಿನ ಕ್ರಿಕೆಟ್‌ನಲ್ಲಿ ಈ ಹಿಂದೆ ಉಭಯ ತಂಡಗಳು ಸೆಣಸಿದಾಗ ಪಾಕಿಸ್ತಾನವೇ ಹೆಚ್ಚು ಬಾರಿ ಗೆಲುವು ಸಾಧಿಸಿದೆ.  ಚಾಂಪಿಯನ್ಸ್ ಟ್ರೋಫಿಯಲ್ಲೂ ಪಾಕಿಸ್ತಾನವೇ ಹೆಚ್ಚು ಜಯ ಗಳಿಸಿದ ಸಾಧನೆ ಮಾಡಿದೆ. ಆದರೆ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಈಗಿನ ಕುತೂಹಲ.

ಆರಂಭ: ಮಧ್ಯಾಹ್ನ 3.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT