ಒಕ್ಕೂಟ ವ್ಯವಸ್ಥೆಗೆ ಅಪಾಯ:ಯೆಚೂರಿ

7
ಮೈಸೂರಿನಲ್ಲಿ ನಡೆದ ‘ಸಂವಿಧಾನ ಉಳಿಸಲು ದೇಶಪ್ರೇಮಿ ಸಮಾವೇಶ’

ಒಕ್ಕೂಟ ವ್ಯವಸ್ಥೆಗೆ ಅಪಾಯ:ಯೆಚೂರಿ

Published:
Updated:
ಒಕ್ಕೂಟ ವ್ಯವಸ್ಥೆಗೆ ಅಪಾಯ:ಯೆಚೂರಿ

ಮೈಸೂರು: ‘ದೇಶಕ್ಕೆ ಒಂದು ತೆರಿಗೆ, ಒಂದು ಕಾನೂನು ಹಾಗೂ ಒಂದು ಚುನಾವಣೆ ಎಂಬ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿದೆ’ ಎಂದು ಸಿಪಿಎಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ವಸ್ತುಪ್ರದರ್ಶನ ಮೈದಾನದಲ್ಲಿ ಪಕ್ಷದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಲು ರಾಜ್ಯ ಮಟ್ಟದ ದೇಶಪ್ರೇಮಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನುವಾರುಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯಗಳಿಗಿದೆ. ಆದರೆ, ಕೇಂದ್ರ ಸರ್ಕಾರ ಏಕಾಏಕಿ ಜಾನುವಾರು ಮಾರಾಟ ನಿಷೇಧ ಆದೇಶ ಹೊರಡಿಸಿ ಈ ಸ್ವಾತಂತ್ರ್ಯ ಹರಣ ಮಾಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವ ಮೂಲಕ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರಗಳು ಹೊಂದಿದ್ದ ಹಕ್ಕನ್ನು ಕಸಿದುಕೊಂಡಿದೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಕೇಂದ್ರದ ಮುಂದೆ ಭಿಕ್ಷಾ ಪಾತ್ರೆ ಹಿಡಿದು ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಆರ್‌ಎಸ್‌ಎಸ್‌ನ ರಾಜಕೀಯ ಅಸ್ತ್ರವಾಗಿರುವ ಬಿಜೆಪಿ, ಸಂವಿಧಾನದ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ ಅಪಾಯದಲ್ಲಿವೆ. ಯಾವ ಬಟ್ಟೆ ತೊಡಬೇಕು, ಏನು ತಿನ್ನಬೇಕು, ಯಾರೊಂದಿಗೆ ಸ್ನೇಹ ಬೆಳೆಸಬೇಕು, ಯಾರನ್ನು ಮದುವೆಯಾಗಬೇಕು ಎಂಬುದನ್ನು ಕೆಲ ಶಕ್ತಿಗಳು ನಿರ್ಧರಿಸುತ್ತಿವೆ. ಗೋರಕ್ಷಣೆ, ಅನೈತಿಕ ಪೊಲೀಸ್ ಹೆಸರಿನಲ್ಲಿ ದಲಿತರು, ಶೋಷಿತರು ಮತ್ತು ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ನಿರಂತರ ದಾಳಿ ನಡೆಸುತ್ತಿದೆ. ನಾಗರಿಕತೆಗಳ ಸಂಗಮದಂತಿರುವ ಭಾರತದ ಉಳಿವಿಗೆ ದೇಶಪ್ರೇಮಿಗಳು ಒಗ್ಗೂಡಬೇಕು’ ಎಂದು ಕರೆ ನೀಡಿದರು.

‘ರೈತರ ಸಾಲ ಮನ್ನಾ ಮಾಡುವ ಹಾಗೂ ಕೃಷಿ ಉತ್ಪನ್ನಗಳಿಗೆ ಗರಿಷ್ಠ ಬೆಲೆ ನೀಡುವುದಾಗಿ  ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಭರವಸೆ ನೀಡಿದ್ದರು.

ಆದರೆ, ಈವರೆಗೆ ರೈತರ ಸಾಲ ಮನ್ನಾ ಮಾಡುವ ಪ್ರಯತ್ನವನ್ನು ಮಾಡಿಲ್ಲ. ಮೋದಿಯ ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಪ್ರತಿ ವರ್ಷ 12 ಸಾವಿರ ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸರ್ಕಾರವೇ ಈ ಮಾಹಿತಿ ಬಹಿರಂಗಪಡಿಸಿದೆ. ಕೃಷಿ ಬಿಕ್ಕಟ್ಟನ್ನು ಶಮನ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

****

ಹಿಂದೂ–ಹಿಂದಿ–ಹಿಂದೂಸ್ತಾನ್‌ ಘೋಷಣೆಯ ಮೂಲಕ ಗಣರಾಜ್ಯ ವ್ಯವಸ್ಥೆಯನ್ನು ಹಿಂದೂರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿವೆ.

ಸೀತಾರಾಂ ಯೆಚೂರಿ, ಸಿಪಿಎಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry