‘ಗಡಿ ಕೆಲಸ’ ಆಜಿಲ್ಲೆ ಮಾರಾಯಾ!

7

‘ಗಡಿ ಕೆಲಸ’ ಆಜಿಲ್ಲೆ ಮಾರಾಯಾ!

Published:
Updated:
‘ಗಡಿ ಕೆಲಸ’ ಆಜಿಲ್ಲೆ ಮಾರಾಯಾ!

ಮಲೆನಾಡಿನ ಆಚರಣೆಗಳು ಬಯಲುಸೀಮೆ ಹಾಗೂ ಕರಾವಳಿ ಪ್ರದೇಶಗಳಿಗಿಂತ ಭಿನ್ನ. ಮೂರೂ ಕಾಲಗಳಿಗೆ (ಬೇಸಿಗೆ, ಮಳೆಗಾಲ, ಚಳಿಗಾಲ) ಇಲ್ಲಿನ ಜನ ಹೊಂದಿಕೊಳ್ಳುವ ಸ್ಥಿತಿ, ಕಾಲಗಳಿಗೆ ತಕ್ಕಂತೆ ಮಾಡಿ ಸವಿಯುವ ತಿಂಡಿ-ತಿನಿಸುಗಳ ವೈವಿಧ್ಯ, ಕಾಲಕಾಲಕ್ಕೆ ಬರುವ ಹಬ್ಬಗಳ ಆಚರಣೆ, ಅದನ್ನು ಸಂಭ್ರಮಿಸುವ ಶಿಷ್ಟಾಚಾರ... ಹೀಗೆ ಪ್ರತಿಯೊಂದರಲ್ಲಿ ಆ ಭಿನ್ನತೆಯನ್ನು ಕಾಣಬಹುದು. ಅದರಲ್ಲೂ ‘ಮುಂಗಾರು ಮಳೆ’ ಮೊದಲೇ ಶುರುವಾದರೆ ಮಲೆನಾಡಿನ ಹಳ್ಳಿಗಳ ಜನರ ಬಾಯಿಯಿಂದ ಹೊರಹೊಮ್ಮುವ ಮಾತುಗಳು ಬಲು ವಿಶಿಷ್ಟ.

‘ಅಲ್ದೇ ಎಂಕತ್ತಿಗೆ, ಈ ವರ್ಷ ಮಳೆಗಾಲ ಒಂದ್ವಾರ ಮೊದ್ಲೇ ಶುರುವಾಗ್ತಡ, ಯಮ್ಮನೆಲಂತುವಾ ಎಂಥಾ ಕೆಲ್ಸನೂ ಆಜಿಲ್ಯೆ, ಇಷ್ಟ್‌ ದಿನ ಅಲ್ಲಿ ಇಲ್ಲಿ ಮದ್ವೆ, ಉಪನಯನ, ಗೃಹಪ್ರವೇಶ ಹೇಳಿ ತಿರ್ಗಾತು. ಮಗಳಕ್ಕ, ಮೊಮ್ಮಕ್ಕ ಬಂದ್ದಿದ್ವಲೇ... ಯಾವ ಕೆಲಸವೂ ಮಾಡ್ಕ್ಯಂಬಲೆ ಆಜೇಯಿಲ್ಯೆ...’ ಹೀಗೆ ಹೆಂಗಳೆಯರು ತಮ್ಮ ಮನದಾಳ ತೆರೆದಿಡುತ್ತಾರೆ. ಗಂಡಸರ ಮಾತುಗಳು ಇನ್ನೂ ಭಿನ್ನ. ‘ಥೋ ಮಾರಾಯಾ, ಇಷ್ಟ್ ಬೇಗ ಮಳೆ ಶುರುವಾಗ್ತು ಹೇಳಿ ಕಲ್ಪನೆ ಸಹಾ ಬಂಜಿಲ್ಯ. ಹೋದ ವರ್ಷ ಈ ಟೈಮ್‍ನಲ್ಲಿ ಎಲ್ಲಾ ಕೆಲಸಾನು ಮುಗಿದು ಹೋಗಿತ್ತು. ಈ ವರ್ಷ ನೀರಿನ ಸಮಸ್ಯೆಯಾಗಿ ಆ ಕೆಲ್ಸಕ್ಕೆ ಕೈಹಚ್ಚಿಕಂಡ್ನಲ್ಲಾ... ಬಾವಿ ಕಂತಾ ಮಾಡಿ ರಿಂಗ್ ಹಾಕ್ಯಂಡಿ! ಕೆರೆ ದೊಡ್ಡ ಮಾಡಿ ಕಲ್ ಕಟ್ಟಿಸ್ತಾಯಿದ್ನಲ್ಲಾ, ಹಾಗಾಗಿ ಯಂದು ಇನ್ನುವಾ ‘ಗಡಿ ಕೆಲಸ’ನೂ ಆಜಿಲ್ಲೆ ಮಾರಾಯಾ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇದು ಕೇವಲ ಒಂದು ಮನೆಯ ಕಥೆಯಲ್ಲ. ಮಲೆನಾಡಿನ ಪ್ರತಿ ಮನೆಯೊಳಗಿನ ಮಾತುಕತೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕಿನಲ್ಲಿ ಸಾಂಪ್ರದಾಯಿಕವಾದ ಅನೇಕ ಕೆಲಸಗಳನ್ನು ಉಳಿಸಿಕೊಂಡು, ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವುದು ವಿಶೇಷ. ಮಳೆಗಾಲ ಶುರುವಾಗುವ ಮೊದಲೇ ಹಳ್ಳಿಗಳಲ್ಲಿ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ.

ಪ್ರತೀ ವರ್ಷವೂ ಮುಂಗಾರು ಮಳೆ ಶುರುವಾಗುವ ಸುಮಾರು ಒಂದು ತಿಂಗಳ ಮೊದಲೇ ಗಡಿ ಕೆಲಸದ ಕಾರ್ಯ ಆರಂಭ. ಮಲೆನಾಡಿನಲ್ಲಿ ಕೃಷಿಯನ್ನೇ ಅವಲಂಬಿಸಿದ ಜನರಲ್ಲಿ ಗಂಡಸರು ಹಾಗೂ ಹೆಂಗಸರು ಪ್ರತ್ಯೇಕವಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿರುತ್ತಾರೆ. ಅಂದರೆ- ಹೆಂಗಳೆಯರು ಮಳೆಗಾಲದಲ್ಲಿ ಮನೆಯೊಳಗೆ ಅವಶ್ಯವಾಗಿ ಬೇಕಾಗುವ ವಸ್ತುಗಳನ್ನು ಸಂಗ್ರಹಿಸಿ, ಸುಭದ್ರವಾಗಿ ಇಟ್ಟುಕೊಳ್ಳಲು ಉತ್ಸಾಹ ತೋರುತ್ತಾರೆ. ಹಾಗೆಯೇ ಗಂಡಸರು ಮನೆಯ ಹೊರಭಾಗದಲ್ಲಿ, ತೋಟದಲ್ಲಿ ಆಗಬೇಕಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.

(ಮಳೆಗಾಲಕ್ಕೆ ಅಣಿಯಾಯ್ತು ಮೊಗೆಕಾಯಿ)

ಪೂರ್ವ ಸಿದ್ಧತೆಯ ಕೆಲಸಗಳೇನು?

ಮಲೆನಾಡಿನಲ್ಲಿ ಗ್ರಾಮೀಣ ಪ್ರದೇಶದ ಹೆಂಗಳೆಯರು ಶಿಸ್ತಿನ ಸಿಪಾಯಿಗಳು. ಏಕೆಂದರೆ- ‘ಕಡಿಗೆ ಮಳೆ ಶುರುವಾಗೋಗ್ತು ಮಾರಾಯ್ರಾ... ಇಂತಿಂಥ ಕೆಲಸ ನೆನಪು ಮಾಡಿ, ಅದೆಲ್ಲಾ ಈಗ್ಲೇ ಮಾಡಿಕೊಂಬೂದೇ ಒಳ್ಳೇದು...’ ಎಂದು ನೆನಪಿಸುವವರೇ ಅವರು. ಅನೇಕ ಕೆಲಸಗಳನ್ನು ಗಂಡಸರಿಂದ ಮಾಡಿಸಿದರೆ, ಮತ್ತೆ ಕೆಲವೊಂದು ಕೆಲಸವನ್ನು ತಾವೇ ಅಚ್ಚುಕಟ್ಟಾಗಿ ನಿರ್ವಹಿಸಿಕೊಳ್ಳುತ್ತಾರೆ ಈ ಪ್ರದೇಶದ ಹೆಂಗಳೆಯರು.

ಮಳೆಗಾಲದ ದಿನಗಳಲ್ಲಿ ಬೇಕಾಗುತ್ತದೆ ಎಂದು ಬೇಸಿಗೆಯಲ್ಲಿಯೇ ಹಲಸಿನ ಹಪ್ಪಳ, ಹಲಸಿನ ಸಂಡಿಗೆಯನ್ನು ಸಾಕಷ್ಟು ಮಾಡಿಕೊಳ್ಳುತ್ತಾರೆ. ಆ ದಿನದಲ್ಲಿ ಪದಾರ್ಥ ಮಾಡಲು ಬೇಕು ಎನ್ನುವ ಕಾರಣಕ್ಕೆ ಕೋಸ್ ಕಾಯಿಯನ್ನು ಬೇಯಿಸಿ ಸಂಸ್ಕರಿಸಿ ಇಟ್ಟುಕೊಳ್ಳುವುದು, ಮೊಗೆಕಾಯಿಯನ್ನು ಒಂದೆಡೆಗೆ ಒಪ್ಪವಾಗಿ ಜೋಡಿಸಿಡುವ ಕಾರ್ಯದಲ್ಲಿ ಮಗ್ನರಾಗುವುದು... ಹೀಗೆ ಬಿಡುವಿಲ್ಲದಷ್ಟು ಕೆಲಸ. ಅಲ್ಲದೆ, ಮಳೆಗಾಲದಲ್ಲಿ ಸಾರಿಸಲೆಂದು ಅಡಿಕೆ ಹಾಳೆಯನ್ನು ಕೊರೆದು ಅದನ್ನು ಬಿಸಿಲಿಗೆ ಒಣಗಿಸಿ ಜೋಡಿಸಿಡುವುದು; ಗುಡಿಸಲು ತೆಂಗಿನ ಮಡ್ಲಿನ ಕಡ್ಡಿಯನ್ನು ತೆಗೆದು ಗರಿಯನ್ನು ಸವರಿ ‘ಹಿಡಿ’ಯನ್ನು ಮಾಡಿಕೊಳ್ಳುವುದು, ಬೇಳೆ- ಕಾಳುಗಳನ್ನು ಸ್ವಚ್ಛ ಮಾಡಿ ಒಣಗಿಸಿ ಪಾತ್ರೆಯಲ್ಲಿ ತುಂಬಿಟ್ಟುಕೊಳ್ಳುವುದು... ಹೀಗೆ ಅನೇಕಾನೇಕ ಕೆಲಸಗಳನ್ನು ನಾರಿಯರು ಉತ್ಸಾಹ, ಛಲ, ಆಸಕ್ತಿಯಿಂದ ಮಾಡುವುದರಲ್ಲಿ ತಲ್ಲೀನರು.

ಹಾಗಂತ ಗಂಡಸರು ಕೈಕಟ್ಟಿ ಕುಳಿತುಕೊಂಡಿರುವುದಿಲ್ಲ. ಅವರು ಹೆಂಗಳೆಯರ ಅನೇಕ ಕೆಲಸಗಳಿಗೆ ಕೈಜೋಡಿಸಿರುತ್ತಾರೆ. ಹಾಗೂ ಮನೆಯ ಹೊರಭಾಗದ ಅನೇಕ ಕೆಲಸಗಳನ್ನು ಮಳೆ ಶುರುವಾಗುವ ಮೊದಲೇ ಮುಗಿಸಲು ಶತಪ್ರಯತ್ನ ಮಾಡುತ್ತಾರೆ, ಅಂದರೆ- ಅಡಿಕೆ ತೋಟಕ್ಕೆ ಮುಚ್ಚಿಗೆ, ಅಡಿಕೆ ಒಣಗಿಸುವ ಕಣಕ್ಕೆ ದರಕು, ಅಡಿಕೆ ಸಿಪ್ಪೆಯನ್ನು ಹರಡುವುದು, ದನ- ಕರುಗಳಿಗೆ ಬೇಕಾಗುವ ಒಣಮೇವನ್ನು ನೀರಿನಲ್ಲಿ ನೆನೆಯದಂತೆ ಮಾಡಿಕೊಳ್ಳುವುದು, ಸೌದೆಯನ್ನು ಸರಿದುಕೊಳ್ಳುವುದು, ಬೆಂಕಿ ಹೊತ್ತಿಸಲೆಂದು ಅಡಿಕೆ ಹಾಳೆಯನ್ನು ಸೋಗೆಯಿಂದ ಬೇರ್ಪಡಿಸಿ ಅದನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು, ಅಡಿಕೆ ಅಟ್ಟದ ಪರಿಕರಗಳನ್ನು ತೆಗೆದು ಸುಭದ್ರವಾಗಿ ಇಡುವುದು, ಮನೆಯ ಚಾವಣಿಯಿಂದ ಹರಿಯುವ ನೀರಿಗೆ ‘ಹರಣಿ’ಯನ್ನು ಅಳವಡಿಸುವುದು, ಹೆಡಿಗೆಗೆ ನೀರಿನ ಹನಿ ಬೀಳದಂತೆ ಸೋಗೆಯಿಂದ ಜಡಿ ತಟ್ಟಿ ಕಟ್ಟಿಕೊಳ್ಳುವುದು, ಅಂಗಳದ ದಾರಿ ಜಾರದ ಹಾಗೆ ತೆಂಗಿನ ಗರಿಗಳನ್ನು ಇರಿಸುವುದು... ಹೀಗೆ ಗಡಿಕಾಲದ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಕೊಡೆ ಖರೀದಿ, ಮಳೆಯಲ್ಲಿಯೇ ತೋಟಕ್ಕೆ ಹೋಗಿ ಹುಲ್ಲು ಕುಯ್ಯಲು ಅನುಕೂಲವಾಗುವ ಪ್ಲಾಸ್ಟಿಕ್‌ ಕೊಪ್ಪೆಗಳ ಖರೀದಿಯೂ ಗಡಿಕಾಲದ ಅವಶ್ಯಕತೆಗಳಲ್ಲಿಯೇ ಬರುತ್ತದೆ.

(ಸಿದ್ಧವಾಗುತ್ತಿದೆ ಸೋಗೆಯ ಜಡಿ ತಟ್ಟಿ)

ಮೊದಲಾದರೆ ಇಡೀ ಮಳೆಗಾಲಕ್ಕೆ ಸಾಕಾಗುವಷ್ಟು ಸೋಪು, ಅಕ್ಕಿ, ಮಸಾಲೆ ಪದಾರ್ಥಗಳನ್ನು ಮೊದಲೇ ತಂದು ಶೇಖರಿಸಿಟ್ಟುಕೊಳ್ಳುತ್ತಿದ್ದರು. ಈಗಲೂ ಅನೇಕ ಹಳ್ಳಿಗಳಲ್ಲಿ ಈ ಅಭ್ಯಾಸ ಇದ್ದೇ ಇದೆ. ಯಾಕೆಂದರೆ ಒಮ್ಮೆ ಜೋರು ಮಳೆ ಶುರುವಾಗಿ ಹಳ್ಳ ಕೊಳ್ಳಗಳು ರೊಚ್ಚಿಗೆದ್ದು ಹರಿಯಲು ಆರಂಭಿಸಿದರೆ ಮಲೆನಾಡಿನ ಎಷ್ಟೋ ಹಳ್ಳಿಗಳಿಗೆ ಹೊರಜಗತ್ತಿನ ಸಂಪರ್ಕವೇ ಇರುವುದಿಲ್ಲ. ಪೇಟೆಗೆ ಹೋಗುವ ಮಾತು ಬಿಡಿ, ಮನೆಯಿಂದ ಹೊರಬೀಳುವುದಕ್ಕೂ ಅವಕಾಶ ಇರುವುದಿಲ್ಲ. ಆಗ ಧೋ ಎಂದು ಮಳೆ ಸುರಿಸುವ ಕಡುಗಪ್ಪು ಆಕಾಶ ಮತ್ತು ಮೈಯೆಲ್ಲ ಹಸಿರಾಗಿಸಿ ಚಿಗಿತುಕೂತ ಹೊಸಹರೆಯದ ಧರೆಯನ್ನು ನೋಡುವುದಷ್ಟೇ ಕೆಲಸ.

ಇಂದು ಎಷ್ಟೋ ಹಳ್ಳಿಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿತವಾಗಿದೆ. ಮಳೆಗಾಲದ ‘ದ್ವೀಪಾ’ಂತರದ ಸಂಕಷ್ಟಗಳೂ ಕಮ್ಮಿಯಾಗಿವೆ.

ಆದರೆ ಇಂದಿಗೂ ಮಲೆನಾಡಿನಲ್ಲಿ ‘ಗಡಿ ಕೆಲಸ’ದ ಸಂಭ್ರಮ ಮರೆಯಾಗಿಲ್ಲ. ಅದು ಮಳೆಗಾಲದ ಮುನ್ನುಡಿಯಾಗಿ, ಮಲೆನಾಡಿನ ಜೀವನವಿಧಾನದ ಕೈಗನ್ನಡಿಯಾಗಿ ಉಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry