ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಉರುವಲಿಗೆ ಕಾಯ್ದಿಟ್ಟ ಅರಣ್ಯ ಆಹುತಿ!

ಯಾದಗಿರಿ ಜಿಲ್ಲೆಯ ಚಿಂತನಹಳ್ಳಿ ಕಾಡಿನಲ್ಲಿ ದುಷ್ಕೃತ್ಯ
Last Updated 12 ಜೂನ್ 2017, 19:58 IST
ಅಕ್ಷರ ಗಾತ್ರ

ಯಾದಗಿರಿ: ಮರ ಕಡಿದರೆ ಅಧಿಕಾರಿಗಳು ಬಂಧಿಸುತ್ತಾರೆ; ಆದರೆ, ಬೆಂಕಿ ಇಟ್ಟು ನಂತರ, ಒಣಗಿದ ಮರಗಳನ್ನು ಕಡಿದರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಹೊಸ ಉಪಾಯ ಕಂಡುಕೊಂಡಿರುವ ಗ್ರಾಮಸ್ಥರು ಚಿಂತನಹಳ್ಳಿ ಕಾಯ್ದಿಟ್ಟ ಅರಣ್ಯಕ್ಕೆ ವರ್ಷಪೂರ್ತಿ ಬೆಂಕಿ ಹಚ್ಚುತ್ತಿರುವುದು ಬೆಳಕಿಗೆ ಬಂದಿದೆ.

ಸುಮಾರು 656 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ಅರಣ್ಯ ಪ್ರದೇಶದಲ್ಲಿನ ಅಮೂಲ್ಯ ಗಿಡಮರಗಳು ಬೆಂಕಿಗೆ ಆಹುತಿಯಾಗುತ್ತಿವೆ.

‘ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಇಂದಿರಾ ನಗರ, ಸುಭಾಷ್ ನಗರ ಲಂಬಾಣಿ ತಾಂಡಾಗಳಲ್ಲಿ ಉರುವಲು ಸಮಸ್ಯೆ ಹೆಚ್ಚಾಗಿದೆ. ಇಲ್ಲಿನ ಗ್ರಾಮಸ್ಥರು ಸೌದೆ ಸಂಗ್ರಹಿಸಲು, ಅರಣ್ಯದ ತುಂಬಾ ಅಲ್ಲಲ್ಲಿ ಬೆಂಕಿ ಹಚ್ಚುತ್ತಾರೆ. ನಸುಕಿನಲ್ಲಿ ಹೊಗೆಯಾಡುತ್ತಿರುವುದನ್ನು ಕಂಡ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುತ್ತಾರೆ. ಒಂದೆರಡು ದಿನಗಳ ನಂತರ ಗ್ರಾಮಸ್ಥರು ಬೆಂಕಿಬಿದ್ದ ಸ್ಥಳಕ್ಕೆ ಹೋಗಿ ಉರುವಲು ಆಯ್ದುಕೊಳ್ಳುತ್ತಾರೆ. ಬೆಂಕಿಗೆ ಸುಟ್ಟ, ಝಳಕ್ಕೆ ಬಾಡಿದ ಗಿಡಮರಗಳನ್ನು ಆಯ್ದುಕೊಳ್ಳುವುದರಿಂದ ಅಧಿಕಾರಿಗಳೂ ಸುಮ್ಮನಿದ್ದು ಬಿಡುತ್ತಾರೆ. ಆದರೆ, ಗ್ರಾಮಸ್ಥರ ಈ ಕುತಂತ್ರ ತಿಳಿದಿದ್ದರೂ ಅಧಿಕಾರಿಗಳು ತಡೆಯಲು ಮುಂದಾಗಿಲ್ಲ’ ಎಂದು ಇಲ್ಲಿನ ಸಮರ್ಥ ಭಾರತ್ ಟ್ರಸ್ಟ್‌ನ ಸದಸ್ಯರು ಆರೋಪಿಸುತ್ತಾರೆ.

‘ತಾಂಡಾ ಪ್ರವೇಶಿಸುತ್ತಿದ್ದಂತೆ ಒಬ್ಬೊಬ್ಬರ ಮನೆ ಮುಂದೆಯೂ  ಹತ್ತಾರು ಟ್ರ್ಯಾಕ್ಟರ್ ಲೋಡಿನಷ್ಟು ಉರುವಲಿನ ರಾಶಿ ಕಂಡುಬರುತ್ತದೆ. ನಿರಂತರ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಇದುವರೆಗೂ ಎರಡು ಪ್ರಕರಣಗಳನ್ನಷ್ಟೇ ದಾಖಲಿಸಿದೆ’ ಎನ್ನುತ್ತಾರೆ ಅವರು.



ಜಿಲ್ಲೆಯಲ್ಲಿ ಶಹಾಪುರ, ಸುರಪುರ, ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 10,628.49 ಹೆಕ್ಟೇರ್‌ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಅರಣ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಶೇ 4ರಷ್ಟು ಅರಣ್ಯ ಪ್ರದೇಶ ಇದೆ. ಕನಿಷ್ಠ ಶೇ 15ರಷ್ಟಾದರೂ ಇರಬೇಕು.

ಹತ್ತಿಕುಣಿ ಸಮೀಪದಲ್ಲಿ ಕುರುಚಲು ಅರಣ್ಯಬಿಟ್ಟರೆ ತೆಲಂಗಾಣದ ಗಡಿಭಾಗದಲ್ಲಿರುವ ಚಿಂತನಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶ ಮಾತ್ರ ಉಳಿದಿದೆ. ನೈಸರ್ಗಿಕವಾಗಿ ಬಿಟ್ಟೆಲ್‌ ಗಿಡ ಯಥೇಚ್ಛವಾಗಿ ಇಲ್ಲಿ ಬೆಳೆದಿವೆ. ಇದರ ಜತೆಗೆ ರಕ್ತಚಂದನ, ಶ್ರೀಗಂಧ, ಹೊಂಗೆ, ಸೀತಾಫಲ, ತೇಗ... ಇಂತಹ ಹಲವು  ಮರಗಿಡಗಳಿವೆ.

‘ಚಿಂತನಹಳ್ಳಿ ಅರಣ್ಯದಲ್ಲಿ ನವಿಲು, ಮೊಲ, ಕಾಡುಹಂದಿ, ಜಿಂಕೆ, ಕರಡಿ ಇತ್ಯಾದಿ ಪ್ರಾಣಿಗಳು ಇದ್ದವು. ಅರಣ್ಯದಲ್ಲಿನ ವೀಕ್ಷಣಾ ಗೋಪುರ ಹತ್ತಿ ನೋಡಿದರೆ ಕಣಿವೆಯಲ್ಲಿ ಜೇನು ತಿನ್ನುತ್ತಿರುವ ಕರಡಿಗಳು ಕಾಣುತ್ತಿದ್ದವು. ಆದರೆ, ಅರಣ್ಯಕ್ಕೆ ನಿತ್ಯ ಬೆಂಕಿ ಬೀಳುವುದರಿಂದ ಕರಡಿಗಳು ಅರಣ್ಯ ತೊರೆದಿವೆ. ನಿರಂತರ ಬೇಟೆಯಿಂದಾಗಿ ಅರಣ್ಯದಲ್ಲಿ ಯಾವ ಪ್ರಾಣಿಗಳೂ ಉಳಿದಿಲ್ಲ’ ಎಂದು ಚಿಂತನಹಳ್ಳಿ ಯುವಕರಾದ ದುರ್ಗಪ್ಪ ಕುರಕುಂದಿ, ಕಾಶೀನಾಥ ದೂರಿದರು.
*
ಅರಣ್ಯ ದಾಳಿಯ ದೂರು ಗಮನಿಸಿದ್ದೇನೆ. ಕಾವಲು ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಿದ್ದೇನೆ. ಮರಕ್ಕೆ ಕೊಡಲಿ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇನೆ.
ಎ.ಬಿ. ಪಾಟೀಲ,
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT