ರಸ್ತೆ ಅಭಿವೃದ್ಧಿಗೆ ಅಡ್ಡಿಯಾದ ಕಾರ್ಪೊರೇಟರ್?

7

ರಸ್ತೆ ಅಭಿವೃದ್ಧಿಗೆ ಅಡ್ಡಿಯಾದ ಕಾರ್ಪೊರೇಟರ್?

Published:
Updated:
ರಸ್ತೆ ಅಭಿವೃದ್ಧಿಗೆ ಅಡ್ಡಿಯಾದ ಕಾರ್ಪೊರೇಟರ್?

ಹುಬ್ಬಳ್ಳಿ: ಇಲ್ಲಿನ 36ನೇ ವಾರ್ಡ್‌ನ ರಾಮಕೃಷ್ಣ ನಗರದ ಮುಖ್ಯ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಕಾರ್ಪೊರೇಟರ್‌ ಅಡ್ಡಿಯಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ವಿದ್ಯಾನಗರದಿಂದ ವಿಮಾನ­ನಿಲ್ದಾಣ­ವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ  ಬಾಲಮಾರುತಿ ಮಂದಿರದ ಸಮೀಪ ಸುಮಾರು 40 ಮೀಟರ್‌ ರಸ್ತೆ ಕಾಮಗಾರಿ ಆರೇಳು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ಇದರಿಂದಾಗಿ ಈ ಭಾಗದ ನಿವಾಸಿಗಳು ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ದೂಳು, ಮಳೆಗಾಲ­ದಲ್ಲಿ ಕೆಸರಿನಿಂದ ಕೂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ತೀವ್ರ ಸಮಸ್ಯೆಯಾಗಿದೆ. ಆಸುಪಾಸಿನ ಮನೆ­ಗಳಿಗೆ ದೂಳಿನಿಂದ ಕಿರಿಕಿರಿಯಾಗಿದೆ. ಅಲ್ಲದೇ, ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ತೊಂದರೆಯಾಗಿದೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಲಿಕೆ ಸದಸ್ಯರಿಗೆ, ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀ­ಯರು. ‘ನೀವು ನನಗೆ ವೋಟ್‌ ಹಾಕಿಲ್ಲ, ರಸ್ತೆ ಏಕೆ ಮಾಡಿಸಬೇಕು’ ಎಂದು ಕಾರ್ಪೊರೇಟರ್‌ ಉತ್ತರಿಸುತ್ತಾರೆ ಎಂದು ಆರೋಪಿಸಿದ್ದಾರೆ.

‘ಜನಪ್ರತಿನಿಧಿಯೇ ಈ ರೀತಿ ಮಾತನಾಡಿದರೆ ನಮ್ಮ ಗೋಳು ಕೇಳುವವರಾರು’ ಎಂದು  ಪ್ರಶ್ನಿಸುತ್ತಾರೆ. ‘ಆದಷ್ಟು ಶೀಘ್ರ ಈ ರಸ್ತೆಯನ್ನು ನಿರ್ಮಿಸಲು ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದ್ಯತೆ ನೀಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

* * 

ವಾರ್ಡ್ ನಂ 36 ರಸ್ತೆ  ದುರಸ್ತಿ ನನ್ನ ಗಮನಕ್ಕೆ ಬಂದಿಲ್ಲ. ಪಾಲಿಕೆ ಕಾರ್ಪೊರೇಟರ್ ವ್ಯಾಪ್ತಿ­ಯಲ್ಲಿ ಬರುವ ಕೆಲಸಗಳನ್ನು ಅವರೇ ಮಾಡಿಸುತ್ತಾರೆ

ಸಿದ್ಧಲಿಂಗಯ್ಯ ಹಿರೇಮಠ

ಆಯುಕ್ತ , ಮಹಾನಗರ ಪಾಲಿಕೆ

* * 

ಮಳೆಗಾಲ ಮುಗಿದ ಬಳಿಕ ಈ ರಸ್ತೆ ದುರಸ್ತಿ ಮಾಡಿಸಲಾಗುವುದು. ಜನ ನನಗೆ ಮತ ಹಾಕಲಿ, ಬಿಡಲಿ ಕಾರ್ಪೊರೇಟರ್ ಆಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ

ಸಂತೋಷ ಹಿರೇಕೆರೂರು

ಸದಸ್ಯ, ವಾರ್ಡ್ ನಂ 36

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry