‘ಗುತ್ತಿಗೆ ಕಾರ್ಮಿಕರ ಗುಲಾಮಗಿರಿ ಕೊನೆಗಾಣಲಿ’

7

‘ಗುತ್ತಿಗೆ ಕಾರ್ಮಿಕರ ಗುಲಾಮಗಿರಿ ಕೊನೆಗಾಣಲಿ’

Published:
Updated:
‘ಗುತ್ತಿಗೆ ಕಾರ್ಮಿಕರ ಗುಲಾಮಗಿರಿ ಕೊನೆಗಾಣಲಿ’

ರಾಮನಗರ: ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಸೇವೆ ಕಾಯಂಗೆ ಆಗ್ರಹಿಸಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು. ನಗರದ ನಗರಸಭೆ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಗುತ್ತಿಗೆ ಪೌರಕಾರ್ಮಿಕರ ಸಫಾಯಿ ಕರ್ಮಚಾರಿ ಮಹಾ ಸಂಘದ ನೇತೃತ್ವದಲ್ಲಿ ಧರಣಿ ಕುಳಿತ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಕಾಂಗ್ರೆಸ್‌ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಲ್ಲಿ ವಿಫಲವಾಗಿದೆ. 2017ರ ಮಾರ್ಚ್ ಒಳಗೆ ಸೇವೆ ಕಾಯಂ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಆದರೆ ಈವರೆಗೂ ಕಾಯಂ ಆಗಿಲ್ಲ’ ಎಂದು ದೂರಿದರು. ‘ಧರಣಿ ಸಂದರ್ಭ ಈ ಮೊದಲೇ ಸರ್ಕಾರಕ್ಕೆ ತಿಳಿಸಿದ್ದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ದೂರಿದರು.

‘ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 40 ಸಾವಿರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರಾಮನಗರದಲ್ಲಿ  92, ಚನ್ನಪಟ್ಟಣದಲ್ಲಿ 45, ಮಾಗಡಿಯಲ್ಲಿ 63, ಬಿಡದಿ 63 ಸೇರಿ ಒಟ್ಟು 353 ಗುತ್ತಿಗೆ ಪೌರ ಕಾರ್ಮಿಕರು ಇದ್ದಾರೆ. ಇವರಿಗೆ ಯಾವುದೇ ಸಾಮಾಜಿಕ, ಆರೋಗ್ಯ ಭದ್ರತೆ ಕಲ್ಪಿಸಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ಸರ್ಕಾರವು ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದರು. ಸಂಘದ ಗೌರವ ಅಧ್ಯಕ್ಷ ರಾಜು, ಅಧ್ಯಕ್ಷ ದೇವೇಂದ್ರ, ಉಪಾಧ್ಯಕ್ಷ ಮೋಹನ್ , ಕಾರ್ಯದರ್ಶಿ ಚಂದ್ರಶೇಖರ್ , ಜಂಟಿ ಕಾರ್ಯದರ್ಶಿ ವೆಂಕಟರಮಣ ಇತರರು ಇದ್ದರು.

ಕೈಗೆ ಸಿಗದ ವೇತನ

ಮಾಗಡಿ: ಸೇವೆ ಕಾಯಂ ಮಾಡದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಡಾ.ಬಾಬು ಜಗಜೀವನ್ ರಾಮ್‌ ಸಫಾಯಿ ಕರ್ಮಚಾರಿ ಮತ್ತು ಗುತ್ತಿಗೆ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಂಜುನಾಥ್‌ ಅವರು ತಿಳಿಸಿದರು.

ಪುರಸಭೆಯ ಕಚೇರಿಯ ಮುಂದೆ ಸೋಮವಾರ ಬೆಳಿಗ್ಗೆ ಡಾ.ಬಾಬು ಜಗಜೀವನ್ ರಾಮ್‌ ಸಫಾಯಿ ಕರ್ಮಚಾರಿ ಮತ್ತು ಗುತ್ತಿಗೆ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಹೊರಗುತ್ತಿಗೆ ಕಾರ್ಮಿಕ ಒಕ್ಕೂಟದ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಿತ್ಯ ಮುಂಜಾನೆ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಲ್ಲಿ ಹೊಲಸನ್ನು ಶುಚಿಗೊಳಿಸುವ ಸಫಾಯಿ ಕರ್ಮಚಾರಿ ಮತ್ತು ಗುತ್ತಿಗೆ ಪೌರಕಾರ್ಮಿ ಕರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು. 

‘3ತಿಂಗಳಿಗೊಮ್ಮೆ ವೇತನದಲ್ಲಿ ಕಡಿತಗೊಳಿಸಿ ನೀಡುತ್ತಿದ್ದಾರೆ. ಹೊಲ ಸನ್ನು ಎತ್ತಲು ಬೇಕಾದ ಕೈಗವುಸು, ಬೂಟು, ಸಮವಸ್ತ್ರ ನೀಡುತ್ತಿಲ್ಲ’ ಎಂದು ಹೇಳಿದರು.

ಬರಿಕೈಯಲ್ಲಿ ಒಳಚರಂಡಿಯ ಮ್ಯಾನ್‌ ಹೋಲ್‌ಗೆ ಇಳಿದು ಸ್ವಚ್ಛಗೊಳಿಸ ಬೇಕಿದೆ. ಸೌಜನ್ಯಕ್ಕಾದರೂ ಪುರಸಭೆಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ನಮ್ಮ ಕಡೆ ಗಮನಿಸಿಲ್ಲ. 37 ಜನ ಗುತ್ತಿಗೆ ಪೌರಕಾರ್ಮಿಕರು,  ವಾಟರ್‌ ಮನ್‌ಗಳು, 8 ಜನ ಟ್ರಾಕ್ಟರ್‌ ಇತರೆ ವಾಹನಗಳ ಗುತ್ತಿಗೆ ಕಾರ್ಮಿಕರಿದ್ದೇವೆ.

ಆರೋಗ್ಯ ವಿಮೆ, ಭವಿಷ್ಯ ನಿಧಿ ನೀಡುತ್ತಿಲ್ಲ. ಸರ್ಕಾರ ತಮ್ಮನ್ನು ಕಾಯಂಗೊಳಿಸುವಂತೆ ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಬಸವರಾಜು, ಗುತ್ತಿಗೆ ಕಾರ್ಮಿಕರಾದ ಕುಮಾರ್‌, ಜಯಕುಮಾರ್‌, ಇನಾಯತ್‌, ಜ್ಞಾನಮೂರ್ತಿ, ಸುರೇಶ್‌, ವೆಂಕಟೇಶ್‌, ಕವಿತ, ಪುಷ್ಪಾ ವಿಜಿ, ವಿ.ಸರೋಜ. ಪೂಮಲ್ಲಿ, ಸಿ.ಮಂಜುನಾಥ್‌, ದೊಡ್ಡಯ್ಯ, ರೇವಣ್ಣ, ಶ್ರೀನಿವಾಸ, ಗಿರೀಶ್‌, ರಾಮಚಂದ್ರರಾವ್‌, ನರಸಿಂಹಯ್ಯ, ಮಂಜುನಾಥ್‌. ಬಿ.ಎಸ್‌. ಮಾತನಾಡಿದರು.

ಪದ್ಧತಿ ರದ್ದು ಮಾಡಲು ಒತ್ತಾಯ

ಚನ್ನಪಟ್ಟಣ: ಗುತ್ತಿಗೆ ಆಧಾರಿತ ಪದ್ಧತಿಯನ್ನು ರದ್ದು ಮಾಡುವಂತೆ ಒತ್ತಾಯಿಸಿ ಗುತ್ತಿಗೆ ಪೌರಕಾರ್ಮಿಕರು ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‘ಸುಮಾರು 15 ವರ್ಷಗಳಿಂದ ನಾವು ಕಾರ್ಯನಿರ್ವಹಿಸುತ್ತಿದ್ದರೂ ನಮಗೆ ಸಿಗಬೇಕಾದ ಸಂವಿಧಾನಬದ್ಧ ಸವಲತ್ತುಗಳು ಸಿಗುತ್ತಿಲ್ಲ, ನಮಗೆ ಕೆಲಸದ ಭದ್ರತೆಯಿಲ್ಲ, ಜೀವನೋಪಾಯಕ್ಕಾಗಿ ಸ್ವಚ್ಛತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಇಷ್ಟಿದ್ದರೂ ನಮ್ಮ ಸೇವೆಯನ್ನು ಕಾಯಂ ಮಾಡಿಲ್ಲ. ಸರ್ಕಾರ ನಮ್ಮನ್ನು ಗುತ್ತಿಗೆದಾರರ ಬಳಿ ಜೀತಕ್ಕೆ ಇರಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾರ್ಮಿಕ ಕಾಯ್ದೆಯ ಗುತ್ತಿಗೆ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ಪ್ರಕಾರ ಪ್ರತಿದಿನ ಮಾಡುವ ಕೆಲಸವನ್ನು ಗುತ್ತಿಗೆ ನೀಡಬಾರದು, ಆದರೆ ಸರ್ಕಾರ ಅದನ್ನು ಪರಿಗಣಿಸದೆ ಸಂವಿಧಾನ ವಿರುದ್ಧವಾಗಿ ಗುತ್ತಿಗೆ ಪದ್ಧತಿಯನ್ನು ಜಾರಿಗೊಳಿಸಿರುವುದು ಖಂಡನೀಯ. ಕೂಡಲೇ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸುವುದಾಗಿ ತಿಳಿಸಿತ್ತು, ಗುತ್ತಿಗೆ ನೌಕರರನ್ನು ಕಾಯಂ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಆರೋಪಿಸಿದರು.

ರಾಜ್ಯದಾದ್ಯಂತ ಎಲ್ಲ ಗುತ್ತಿಗೆ ಪೌರಕಾರ್ಮಿಕರು ಸ್ವಚ್ಚತೆ ಸ್ಥಗಿತಗೊಳಿಸಿ  ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು. ಗುತ್ತಿಗೆ ಪೌರಕಾರ್ಮಿಕರ ಸಫಾಯಿ ಕರ್ಮಚಾರಿ ಮಹಾಸಂಘದ ದೇವೇಂದ್ರ, ಸಿ.ಮಂಜು, ಶ್ರೀನಿವಾಸ್, ರಘು, ಓದೇಶ್ ಮತ್ತಿತರರು ಪಾಲ್ಗೊಂಡಿದ್ದರು.

* * 

15 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಗುತ್ತಿಗೆದಾರ ಕೊಡುವ ಕನಿಷ್ಠ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ

ಸಿ.ಮಂಜುನಾಥ್‌, ಅಧ್ಯಕ್ಷ,

ಸಫಾಯಿ ಕರ್ಮಚಾರಿ ಮತ್ತು ಗುತ್ತಿಗೆ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry