ಕೃಷಿಲೋಕದ ಸಂಕಷ್ಟಕ್ಕೆ ಸಾಲ ಮನ್ನಾ ಉತ್ತರವಲ್ಲ

7

ಕೃಷಿಲೋಕದ ಸಂಕಷ್ಟಕ್ಕೆ ಸಾಲ ಮನ್ನಾ ಉತ್ತರವಲ್ಲ

Published:
Updated:
ಕೃಷಿಲೋಕದ ಸಂಕಷ್ಟಕ್ಕೆ ಸಾಲ ಮನ್ನಾ ಉತ್ತರವಲ್ಲ

ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ರಾಷ್ಟ್ರದಾದ್ಯಂತ ಕೇಳಿಬರುತ್ತಿದೆ.  ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರವೂ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅನೇಕ ಬಾರಿ ಹೇಳಿದ್ದಾರೆ. ಆದರೆ  ಕೃಷಿ ಸಾಲ ಮನ್ನಾದಿಂದ ಉಂಟಾಗುವ ಹೊರೆ ಭರಿಸುವುದಕ್ಕಾಗಿ ರಾಜ್ಯಗಳಿಗೆ ಯಾವುದೇ ರೀತಿಯ ನೆರವು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ಈಗ ಕಡ್ಡಿ ಮುರಿದಂತೆ ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಈ ದೃಢ ನಿಲುವು ಸರಿ. ಇದೇ ಸಂದರ್ಭದಲ್ಲಿ  ಬಿಜೆಪಿ ನೇತೃತ್ವದ  ಮಹಾರಾಷ್ಟ್ರ ಸರ್ಕಾರ, ರೈತರ ಆಕ್ರೋಶಕ್ಕೆ ಮಣಿದು ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದೆ. ಆದರೆ ಕೃಷಿ ಸಾಲ ಮನ್ನಾ ಯೋಜನೆಯಿಂದ ಶ್ರೀಮಂತ ರೈತರನ್ನು ಹೊರಗಿಡುವ ಸಾಧ್ಯತೆಯ ಸುಳಿವನ್ನೂ ನೀಡಲಾಗಿದೆ. ಸಾಲ ಮನ್ನಾದ ಮಾನದಂಡಗಳನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ಕೂಡ ಅದು ರಚಿಸಿದೆ. ಸರ್ಕಾರ ಮನ್ನಾ ಮಾಡಬೇಕಿರುವ ಸಾಲದ ಮೊತ್ತ ಸುಮಾರು ₹30 ಸಾವಿರ ಕೋಟಿ. 

ಈಗಾಗಲೇ ಮಹಾರಾಷ್ಟ್ರ ಸರ್ಕಾರದ  ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಸಾಲ ಮುಂದಿನ ಮಾರ್ಚ್‌ ವೇಳೆಗೆ  ₹ 4 ಲಕ್ಷ ಕೋಟಿ ತಲುಪಲಿದೆ ಎನ್ನಲಾಗಿದ್ದು, ₹ 31 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಾದ ಸಂಕಷ್ಟ ಸ್ಥಿತಿ ಇದೆ. ಇದಕ್ಕೂ ಮೊದಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರ, ರೈತರ ₹36,359 ಕೋಟಿಯಷ್ಟು ಸಾಲ ಮನ್ನಾ ಮಾಡುವ ಮೂಲಕ ಕೃಷಿ ಸಾಲ ಮನ್ನಾ ಪ್ರವೃತ್ತಿಗೆ ನಾಂದಿ ಹಾಡಿತ್ತು. 

ಇದರಿಂದ ಸಾಲ ಮನ್ನಾ ಬೇಡಿಕೆ ಇತರ ರಾಜ್ಯಗಳಲ್ಲೂ ತೀವ್ರತೆ ಪಡೆದುಕೊಳ್ಳಲು ಕಾರಣವಾಗಿದೆ ಎಂಬುದನ್ನಂತೂ ಅಲ್ಲಗಳೆಯುವಂತಿಲ್ಲ. ಮಧ್ಯಪ್ರದೇಶದಲ್ಲಿ ಪೂರ್ಣ ಪ್ರಮಾಣದ ಸಾಲ ಮನ್ನಾ ಘೋಷಿಸಿರದಿದ್ದರೂ ಹಲವು ರೀತಿಯ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕೃಷಿ ಸಾಲ ಮನ್ನಾ ಮಾಡುವುದರಿಂದ ಹಣಕಾಸು  ವ್ಯವಸ್ಥೆ ಎದುರಿಸಬೇಕಾದ ಬಿಕ್ಕಟ್ಟು ಹಾಗೂ ಹಣದುಬ್ಬರದ ಅಪಾಯಗಳ ಬಗ್ಗೆ ಇತ್ತೀಚೆಗೆ   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.

1990ರಲ್ಲಿ ಕೇಂದ್ರದ ವಿ.ಪಿ. ಸಿಂಗ್ ನೇತೃತ್ವದ ಜನತಾದಳ ಸರ್ಕಾರ ರಾಷ್ಟ್ರವ್ಯಾಪಿ ರೈತರ ಸಾಲ ಮನ್ನಾ ಮಾಡಿತ್ತು. ನಂತರ 2008ರಲ್ಲಿ ಕೇಂದ್ರದ ಯುಪಿಎ ಸರ್ಕಾರ ₹60 ಸಾವಿರ ಕೋಟಿಯಷ್ಟು ಭಾರಿ ಮೊತ್ತದ ಕೃಷಿ ಸಾಲವನ್ನು  ರದ್ದುಮಾಡಿತ್ತು. ಆದರೇನು? ರೈತರ ಸಮಸ್ಯೆಗಳು ಪರಿಹಾರವಾಗಲಿಲ್ಲ. ಹೀಗಾಗಿ ಕೃಷಿ ಸಾಲ ಮನ್ನಾ ಮಾಡುವುದು ವ್ಯರ್ಥ ಕಸರತ್ತು. ರೈತ ಪರ ಕಾಳಜಿಗಿಂತ ವೋಟ್‌ಬ್ಯಾಂಕ್ ರಾಜಕಾರಣವೇ ಇಲ್ಲಿ ಮೇಲುಗೈ ಸಾಧಿಸಿರುತ್ತದೆ.

ಹಲವು ಸಂದರ್ಭಗಳಲ್ಲಿ ಕೃಷಿಯೇತರ ಕಾರಣಗಳಿಗಾಗಿ ಸಾಲ ತೆಗೆದುಕೊಂಡು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನೂ  ಅಧ್ಯಯನಗಳು ಬೆಳಕಿಗೆ ತಂದಿವೆ. ಹೀಗಾಗಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟನ್ನು ಬರೀ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಇನ್ನಾದರೂ ನಿಲ್ಲಿಸಬೇಕು.  ‘ಮೀನು ನೀಡುವುದಲ್ಲ, ಮೀನು ಹಿಡಿಯುವುದನ್ನು ಕಲಿಸಿ’ ಎಂಬ ಗಾದೆಮಾತಿದೆ.  ಇದಕ್ಕೆ ಪೂರಕವಾಗುವ ರೀತಿಯಲ್ಲಿ ಕೃಷಿಯನ್ನು ಲಾಭದಾಯಕವಾಗಿಸುವ ನೀತಿಗಳನ್ನು ಸರ್ಕಾರ ರೂಪಿಸಬೇಕು.

ವಿಶ್ವಸಂಸ್ಥೆಯ ಇತ್ತೀಚಿನ ಮುನ್ನೋಟದ ಪ್ರಕಾರ, ಭಾರತದಲ್ಲಿ ನಗರೀಕರಣ ಪ್ರಕ್ರಿಯೆ ಚಾಲನೆಯಲ್ಲಿದ್ದರೂ 2050ರ ಇಸವಿಯಲ್ಲೂ 80 ಕೋಟಿ ಜನರು ಗ್ರಾಮಗಳಲ್ಲೇ ಬದುಕುತ್ತಿರುತ್ತಾರೆ.  ಈ ವಾಸ್ತವಕ್ಕೆ ನಾವು ಕಣ್ಣುಮುಚ್ಚಿಕೊಳ್ಳಲಾಗದು. ಹೀಗಾಗಿ ಆರ್ಥಿಕವಾಗಿ ಹಾಗೂ ಪರಿಸರದ ದೃಷ್ಟಿಯಿಂದ ಸುಸ್ಥಿರವಾದ ಬೆಳೆ ಪದ್ಧತಿಗೆ  ಪರಿವರ್ತನೆ ಹೊಂದಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ ಬೆಳೆದ ನಮ್ಮ  ರೈತರು ಅವನ್ನು ಬೀದಿಗೆ ಚೆಲ್ಲುವಂತಾಗಬಾರದು. ದಾಸ್ತಾನು, ಸಂಸ್ಕರಣೆ ಹಾಗೂ ಮಾರಾಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ  ಕೃಷಿ ಮೂಲ ಸೌಕರ್ಯಗಳನ್ನು ಸೃಷ್ಟಿಸುವುದು ಸರ್ಕಾರಗಳ ಕರ್ತವ್ಯವಾಗಬೇಕು. ಕೃಷಿ  ಆಮದು ನೀತಿಯಲ್ಲೂ ಬದಲಾವಣೆ ಬೇಕು, ಕೃಷಿ ಉತ್ಪನ್ನ ಆಮದು ಶುಲ್ಕ ಹೆಚ್ಚಾಗಬೇಕು. ವ್ಯವಸ್ಥೆಯಲ್ಲಿ ಸ್ವರೂಪಾತ್ಮಕ ಬದಲಾವಣೆಗಳನ್ನು ತಂದು ಕೃಷಿಗೆ ಹೊಸ ಸ್ಪರ್ಶ ತರುವುದು ಇಂದಿನ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry