ಇರಾನಿ ಗ್ಯಾಂಗ್‌ನ ಇಬ್ಬರ ಸೆರೆ

7
ಧಾರವಾಡದಿಂದ ಐಷಾರಾಮಿ ಬಸ್‌ನಲ್ಲಿ ಬರುತ್ತಿದ್ದ ಆರೋಪಿಗಳು

ಇರಾನಿ ಗ್ಯಾಂಗ್‌ನ ಇಬ್ಬರ ಸೆರೆ

Published:
Updated:
ಇರಾನಿ ಗ್ಯಾಂಗ್‌ನ ಇಬ್ಬರ ಸೆರೆ

ಬೆಂಗಳೂರು: ಹದಿನೈದು ದಿನಕ್ಕೊಮ್ಮೆ ನಗರಕ್ಕೆ ಬಂದು ಒಂಟಿ ಮಹಿಳೆಯರ ಸರ ಕಳವು ಮಾಡಿ  ಪರಾರಿಯಾಗುತ್ತಿದ್ದ ಇರಾನಿ ಗ್ಯಾಂಗ್‌ನ ಇಬ್ಬರು ಆರೋಪಿಗಳು ಜಾಲಹಳ್ಳಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.

ಧಾರವಾಡ ಟೋಲ್‌ನಾಕಾ ಬಳಿಯ ಜನ್ನತ್‌ ನಗರದ ಶಹೆನ್‌ಷಾ ಅಲಿಯಾಸ್‌್ ಲಾಲೂ (28) ಹಾಗೂ ಮೊಹಮ್ಮದ್‌ ಅಲಿಯಾಸ್‌ ಕುಟ್ಟಿ (32) ಬಂಧಿತರು. ಅವರಿಂದ 502 ಗ್ರಾಂನ 15 ಚಿನ್ನದ ಸರಗಳು ಹಾಗೂ ಪಲ್ಸರ್‌ ಬೈಕ್‌ ಜಪ್ತಿ ಮಾಡಲಾಗಿದೆ.

‘ಆರೋಪಿಗಳು ಬಾಗಲಗುಂಟೆ, ಸಂಜಯನಗರ, ಸುಬ್ರಹ್ಮಣ್ಯನಗರ, ಆರ್‌.ಟಿ.ನಗರ, ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿಪುರ ಲೇಔಟ್‌ ಹಾಗೂ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಸರ ಕಳವು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಜಾಲಹಳ್ಳಿ ಪೊಲೀಸರು ತಿಳಿಸಿದರು.

‘ಐಷಾರಾಮಿ ಬಸ್‌ಗಳಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಪ್ರಮುಖ ಪ್ರದೇಶಗಳ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದರು.’

‘ಕೃತ್ಯದ ಬಳಿಕ ಬೈಕನ್ನು ರೈಲ್ವೆ ನಿಲ್ದಾಣ ಅಥವಾ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿ ಪುನಃ ಬಸ್ಸಿನಲ್ಲಿ ಧಾರವಾಡಕ್ಕೆ ಮರಳುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಪೊಲೀಸರಿಗೆ ಗುರುತು ಸಿಗಬಾರದು ಎಂದು ಆರೋಪಿಗಳು, ಪ್ರತಿ ಬಾರಿಯೂ ಬೇರೆ ಬೇರೆ ಬೈಕ್‌ಗಳನ್ನು ಕದ್ದು ಕೃತ್ಯ ಎಸಗುತ್ತಿದ್ದರು. ಮೊಬೈಲ್‌ ಸಹ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು’ ಎಂದು ಹೇಳಿದರು.

ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದರು: ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು, ಅನುಮಾನಾಸ್ಪದ ಬೈಕ್‌ಗಳ ಸವಾರರನ್ನು ವಿಚಾರಣೆಗೆ ಒಳಪಡಿಸಿದರೂ ಕಳ್ಳರು ಪತ್ತೆಯಾಗಿರಲಿಲ್ಲ. ಹೀಗಾಗಿ ಬಸ್‌ ಹಾಗೂ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿ ದ್ದರು.

‘ಖಾಸಗಿ ಬಸ್ಸಿನಲ್ಲಿ ಬಂದಿದ್ದ ಆರೋಪಿಗಳು, ರೈಲು ನಿಲ್ದಾಣ ಬಳಿ ಬೈಕ್‌ ಕದ್ದುಕೊಂಡು ಹೋಗಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ಆಗ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದೆವು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಆರೋಪಿಗಳು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಪ್ರಕರಣಗಳು ದಾಖಲಾಗಿವೆ’ ಎಂದು ವಿವರಿಸಿದರು.

ಪೊಲೀಸರಿಗೆ ಬೆದರಿಕೆ: ಆರೋಪಿಗಳು ತಪ್ಪೊಪ್ಪಿಕೊಂಡ ಬಳಿಕ 10 ದಿನ ಕಸ್ಟಡಿಗೆ ಪಡೆದಿದ್ದ ಪೊಲೀಸರು, ಕದ್ದ ಸರಗಳ ಜಪ್ತಿಗಾಗಿ ಅವರನ್ನು ಧಾರವಾಡಕ್ಕೆ ಕರೆದೊಯ್ದಿದ್ದರು.

‘ಜನ್ನತ್‌ನಗರದಲ್ಲಿ ಇರಾನಿ ಸಮುದಾಯದ ನೂರಾರು ಜನರಿದ್ದಾರೆ. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಗಳ ಮನೆಗೆ ಹೋಗಿದ್ದೆವು. ಆಗ ಅಲ್ಲಿಯ ಮಹಿಳೆಯರು ಗಲಾಟೆ ಮಾಡಿ ತಳ್ಳಾಡಿದರು. ಬೆದರಿಕೆ ಸಹ ಹಾಕಿದರು. ಅದರ ನಡುವೆಯೇ ಇಬ್ಬರ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಸರಗಳನ್ನು ಜಪ್ತಿ ಮಾಡಿಕೊಂಡು ಬಂದೆವು’ ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿ ಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry