ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ: ಮತ್ತೆ ಗಲಭೆ ಇಬ್ಬರಿಗೆ ಚೂರಿ ಇರಿತ

Last Updated 13 ಜೂನ್ 2017, 20:00 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ನಿಷೇಧಾಜ್ಞೆ ನಡುವೆಯೇ ಮಂಗಳವಾರ ಮತ್ತೆ ಹಿಂಸಾಚಾರ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಎರಡು ಗುಂಪುಗಳ ನಡುವೆ ಸಂಜೆ ನಡೆದ ಘರ್ಷಣೆಯಲ್ಲಿ ಚೂರಿ ಇರಿತ ಮತ್ತು ಹಲ್ಲೆಯಿಂದ ಮೂವರು ಗಾಯಗೊಂಡಿದ್ದಾರೆ.

ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ, ರವಿ ಭಂಡಾರಿ ಮತ್ತು ಕಲ್ಲಡ್ಕ ನಿವಾಸಿ ಖಲೀಲ್‌ ಘಟನೆಯಲ್ಲಿ ಗಾಯಗೊಂಡವರು. ಘರ್ಷಣೆಯ ನಂತರ ನಡೆದ ಕಲ್ಲು ತೂರಾಟದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರಕ್ಷಿತ್‌ ಗೌಡ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಕಲ್ಲಡ್ಕದಲ್ಲಿ ಮುಖಾಮುಖಿಯಾದ ರತ್ನಾಕರ ಶೆಟ್ಟಿ ಮತ್ತು ಖಲೀಲ್‌ ಪರಸ್ಪರರನ್ನು ದುರುಗುಟ್ಟಿ ನೋಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಇಬ್ಬರ ನಡುವೆ ಆರಂಭವಾದ ಜಗಳ ಘರ್ಷಣೆಗೆ ತಿರುಗಿದೆ. ನಂತರ ಎರಡು ಗುಂಪುಗಳು ಪರಸ್ಪರ ಕಾದಾಟಕ್ಕೆ ಇಳಿದಿದ್ದು, ರತ್ನಾಕರ ಶೆಟ್ಟಿ ಮತ್ತು ಖಲೀಲ್‌ ಚೂರಿ ಇರಿತದಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಎರಡೂ ಗುಂಪುಗಳು ಪರಸ್ಪರರ ವಿರುದ್ಧ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಂಗಡಿ ಮುಂಗಟ್ಟು ಬಂದ್‌: ಘರ್ಷಣೆ ಬಳಿಕ ಎರಡೂ ಗುಂಪುಗಳು ಕಲ್ಲು ತೂರಾಟಕ್ಕೆ ಇಳಿದವು. ವಾಣಿಜ್ಯ ಸಂಕೀರ್ಣಗಳು, ಅಂಗಡಿಗಳಿಗೆ ನುಗ್ಗಿ ದಾಂದಲೆ ನಡೆಸಿದರು. ವಾಹನಗಳ ಮೇಲೂ ಕಲ್ಲೆಸೆದರು. ಹಲವು ಕಟ್ಟಡಗಳು,  ಅಂಗಡಿಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಇದರಿಂದ ಹೆದರಿದ ವರ್ತಕರು  ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದರು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಆಗ ದುಷ್ಕರ್ಮಿಗಳು ಪೊಲೀಸರ ಮೇಲೂ ಕಲ್ಲು ತೂರಿದರು. ಸಬ್‌ ಇನ್‌ಸ್ಪೆಕ್ಟರ್‌ ರಕ್ಷಿತ್‌ ಅವರ ತಲೆಗೆ ಕಲ್ಲೇಟು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT