ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವಚನಕಾರರ ಸಂಶೋಧನೆ ಅಗತ್ಯ

Last Updated 14 ಜೂನ್ 2017, 9:42 IST
ಅಕ್ಷರ ಗಾತ್ರ

ಚಾಮರಾಜನಗರ: ‘ದಲಿತ ವಚನಕಾರರು ಸರಳ ಸಾಹಿತ್ಯದ ಮೂಲಕ ಜೀವನದ ಅನುಭವಗಳನ್ನು ಜನ ಸಾಮಾನ್ಯರಿಗೆ ತಿಳಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆಯಬೇಕು’ ಎಂದು ಮೈಸೂರಿನ ಸಿದ್ಧಾರ್ಥನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ. ಪುರುಷೊತ್ತಮ್ ಹೇಳಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ ವಚನಕಾರರು ಅಕ್ಷರ ಜ್ಞಾನ ಪಡೆದು ಸಾಹಿತ್ಯ ರಚಿಸುವ ಮೂಲಕ ಎಲ್ಲ ಸಮುದಾಯದವರು ಒಂದೇ ಎಂದು ಸಾರಿದರು. ಪೂರ್ವ ಹಳಗನ್ನಡ ಹಾಗೂ ಹಳಗನ್ನಡ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ವಚನಕಾರರು ಆಡುಭಾಷೆಯಲ್ಲಿಯೇ ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದರು ಎಂದರು.

‘ಉರಿಲಿಂಗಿ ಪೆದ್ದಿ ಅವರ 363 ವಚನಗಳು ಲಭ್ಯವಾಗಿದೆ. ಈ ಎಲ್ಲ ವಚನಗಳು ಉತ್ಕೃಷ್ಟ ಭಾಷೆಯಲ್ಲಿ ರಚನೆಯಾಗಿದೆ ಎಂದ ಅವರು, ದಲಿತ ವಚನಕಾರರಷ್ಟೇ ಅಲ್ಲ. ವಚನಗಾರ್ತಿಯರೂ ಇದ್ದಾರೆ. ಅವರು ರಚಿಸಿದ ವಚನಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ಮತ್ತಷ್ಟು ವಿವರಗಳು ಲಭ್ಯವಾಗುವ ಸಾಧ್ಯತೆಗಳಿವೆ’ ಎಂದು ತಿಳಿಸಿದರು.

12ನೇ ಶತಮಾನದ ಅಖಂಡ ವಚನ ಸಂಸ್ಕೃತಿಯಲ್ಲಿ ಯಾವುದೇ ಬೇಧವಿರಲಿಲ್ಲ. ಎಲ್ಲ ಸಮುದಾಯದವರು ಒಂದೇ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡುತ್ತಿದ್ದರು. ಆದರೆ, ಪ್ರಸ್ತುತ ಅಂತಹ ವಾತವಾರಣ ಇಲ್ಲದಿರುವುದು ಶೋಚನೀಯವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಬಸವಣ್ಣ ಅವರಿಗೂ ಮುನ್ನ ಮಾದಾರ ಚನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಸೇರಿ ಇತರರು ವಚನಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದರು. ಅವರಿಗೆ ಬಸವಣ್ಣ ವೇದಿಕೆ ಕಲ್ಪಿಸಿ ಎಲ್ಲ ಜಾತಿಯವರೂ ಒಂದೇ ಎಂಬ ಸಂದೇಶ ಸಾರಿದರು ಎಂದರು.

ವಚನಕಾರರ ಕೃತಿಗಳಲ್ಲಿ ಜ್ಞಾನವಿದೆ. ಸಮಸ್ಯೆಗಳಿಗೆ ಪರಿಹಾರವಿದೆ. ಪ್ರಶ್ನೆಗಳಿಗೆ ಉತ್ತರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಮೌಲ್ಯಗಳು ಅಡಗಿವೆ. ಇವುಗಳನ್ನು ಪ್ರತಿಯೊಬ್ಬರು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ‘ನಮ್ಮ ಹೆಮ್ಮೆಯ ವಚನಕಾರರು’ ಮಡಿಕೆ ಪತ್ರ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಂತಿ. ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಸವಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಎ.ಜೆ.ರೂಪಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ.ನಾಗವೇಣಿ ಹಾಜರಿದ್ದರು.

* * 

ವಚನಕಾರರ ಜಯಂತಿಯನ್ನು ಸಮುದಾಯಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲ ವರ್ಗದವರು ಒಗ್ಗೂಡಿ ಅವರ ಜಯಂತಿ ಆಚರಿಸಬೇಕು
ಡಾ.ಡಿ. ಪುರುಷೊತ್ತಮ್
ಸಹಾಯಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT