₹2.20 ಕೋಟಿ ಹೋಟೆಲ್‌ ಬಿಲ್‌ ಬಾಕಿ

7

₹2.20 ಕೋಟಿ ಹೋಟೆಲ್‌ ಬಿಲ್‌ ಬಾಕಿ

Published:
Updated:
₹2.20 ಕೋಟಿ ಹೋಟೆಲ್‌ ಬಿಲ್‌ ಬಾಕಿ

ಬೆಳಗಾವಿ: ಕಳೆದ ವರ್ಷ ಇಲ್ಲಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ವಾಸ್ತವ್ಯ ಹೂಡಿದ್ದ ವಿವಿಧ ಹೋಟೆಲ್‌ಗಳ ಅಂದಾಜು ₹ 2.20 ಕೋಟಿ ಬಿಲ್‌ ಈವರೆಗೂ ಸಂದಾಯ ಮಾಡದಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ಹಕ್ಕಿನಡಿ (ಆರ್‌ಟಿಐ) ಪಡೆದುಕೊಂಡ ಈ ಮಾಹಿತಿಯನ್ನು ಕಾರ್ಯಕರ್ತ ಭೀಮಪ್ಪ ಜಿ. ಗಡಾದ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

2016ರ ನವೆಂಬರ್‌ 21ರಿಂದ ಡಿಸೆಂಬರ್‌ 3ರ ವರೆಗೆ ಅಧಿವೇಶನ ನಡೆದಿತ್ತು. ಈ ಅವಧಿಯಲ್ಲಿ ತಂಗಲು ನಗರದ ವಿವಿಧ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇವುಗಳಲ್ಲಿ ಕೆಲವು ಹೋಟೆಲ್‌ಗಳ ಹಣ ಪಾವತಿಸಲಾಗಿದೆ. ಇನ್ನುಳಿದವುಗಳಿಗೆ ಪಾವತಿಸಬೇಕಾಗಿದೆ.

10 ಕೋಟಿಗೆ ಕೋರಿಕೆ: ‘ಅಧಿವೇಶನದ ಸಿದ್ಧತೆಗೆ ₹10 ಕೋಟಿ ಅನುದಾನದ ಅವಶ್ಯಕತೆಯಿದೆ. ಮುಖ್ಯವಾಗಿ ಶಾಸಕರು– ಅಧಿಕಾರಿಗಳ ಊಟ, ವಸತಿ ಹಾಗೂ ಅವರಿಗೆ ವಾಹನ ವ್ಯವಸ್ಥೆ ಮಾಡಲು ಹಣದ ಅವಶ್ಯಕತೆ ಇದೆ’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ ಕೇವಲ ₹3 ಕೋಟಿ ಬಿಡುಗಡೆ ಮಾಡಿತ್ತು.

ಪೊಲೀಸ್‌ ಇಲಾಖೆಗೆ ₹1ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಗೆ ₹1 ಕೋಟಿ ಹಣವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿತ್ತು. ಪೊಲೀಸ್‌ ಇಲಾಖೆಯು ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದರೆ, ಲೋಕೋಪಯೋಗಿ ಇಲಾಖೆಯು ರಸ್ತೆಗಳ ಅಭಿವೃದ್ಧಿ ಹಾಗೂ ಇತರ ವ್ಯವಸ್ಥೆಗಳ ಹೊಣೆ ಹೊತ್ತುಕೊಂಡಿತ್ತು.

ಊಟ, ವಸತಿ ಹಾಗೂ ಸಂಚಾರದ ವ್ಯವಸ್ಥೆಯನ್ನು ಜಿಲ್ಲಾಡಳಿತ ಹೊತ್ತುಕೊಂಡಿತ್ತು. ಇದಕ್ಕಾಗಿ ₹5.19 ಕೋಟಿ ವೆಚ್ಚ ಮಾಡಿತು. ಸರ್ಕಾರ ಬಿಡುಗಡೆ ಮಾಡಿದ ₹3 ಕೋಟಿ ಅನುದಾನದಲ್ಲಿ ಇದುವರೆಗೆ ₹2.98 ಕೋಟಿ ಹಣವನ್ನು ಕೆಲವು ಹೋಟೆಲ್‌ಗಳ ಹಾಗೂ ಟ್ರಾವೆಲ್ಸ್‌ ಕಂಪೆನಿಗಳಿಗೆ ಪಾವತಿ ಮಾಡಲಾಗಿದೆ.

ಇನ್ನುಳಿದ ₹2.20 ಕೋಟಿ ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳು ವಿಧಾನಸಭೆ ಕಾರ್ಯದರ್ಶಿಯವರಿಗೆ ಫೆ. 27ರಂದು ಪತ್ರ ಬರೆದು ನೆನಪಿಸಿದ್ದಾರೆ. ಆದರೂ ಇದುವರೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಭೀಮಪ್ಪ ಹೇಳಿದರು.

ಸಚಿವಾಲಯ ಮಾಹಿತಿ ನೀಡುತ್ತಿಲ್ಲ: ಸುವರ್ಣ ವಿಧಾನಸೌಧದ ನಿರ್ವಹಣೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಿಧಾನಸಭೆ ಸಚಿವಾಲಯ ಮಾಡಿತ್ತು. ಇದರ ವೆಚ್ಚಗಳ ಬಗ್ಗೆ ಅದು ಮಾಹಿತಿ ನೀಡುತ್ತಿಲ್ಲ. ಹಿಂದಿನ ವರ್ಷಗಳಲ್ಲಿ, ಅಧಿವೇಶನ ಮುಗಿದ 30 ದಿನಗಳೊಳಗೆ ಎಲ್ಲ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ವಿಧಾನಸಭೆ ಸಚಿವಾಲಯವು ಅಧಿವೇಶನದ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಮಾಹಿತಿ ನೀಡುತ್ತಿಲ್ಲ. ಪಾರದರ್ಶಕ ಕಾಯ್ದೆಯಿಂದ ತನಗೆ ವಿನಾಯಿತಿಯಿದೆ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸ್ವಾರಸ್ಯಕರ ಸಂಗತಿಗಳು...

* ವೆಚ್ಚದ ಮೇಲೆ ಕಡಿವಾಣ ಹಾಕಲು ಅಧಿವೇಶನದ ವೇಳೆ ಮಧ್ಯಾಹ್ನದ ಊಟವನ್ನು ವಿಧಾನ ಮಂಡಲದಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಾಹಾರ ಹಾಗೂ         ರಾತ್ರಿ ಊಟದ ವ್ಯವಸ್ಥೆಯನ್ನು ವಾಸ್ತವ್ಯ ಹೂಡಿರುವ ಹೋಟೆಲ್‌ನಲ್ಲಿ ಮಾಡಲಾಗಿತ್ತು. ಸಚಿವ ಟಿ.ಬಿ. ಜಯಚಂದ್ರ ಅವರು ಉಪಾಹಾರ ಹಾಗೂ ರಾತ್ರಿ ಊಟಕ್ಕಾಗಿ               ₹47,033 ವೆಚ್ಚ ಮಾಡಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು 13 ದಿನಗಳ ಕಾಲ ಹೋಟೆಲ್‌ನಲ್ಲಿ ತಂಗಿದ್ದರೂ ಅವರ ಊಟದ ವೆಚ್ಚ ಕೇವಲ ₹50 ಆಗಿರುವುದು ಆಶ್ಚರ್ಯ         ಮೂಡಿಸಿದೆ (ಈ ಹೋಟೆಲ್‌ನಲ್ಲಿ ಟೀ– ಕಾಫಿಗೆ ₹80 ದರ)

* ಅತ್ಯಂತ ಕಡಿಮೆ ವೆಚ್ಚ ಮಾಡಿದವರ ಪಟ್ಟಿಯಲ್ಲಿ ಸಚಿವ ರಮಾನಾಥ ರೈ (₹458), ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ ( ₹ 560), ಶಾಸಕ ಅಶೋಕ ಪಟ್ಟಣ             (₹617), ಸಚಿವ ಎಂ.ಬಿ. ಪಾಟೀಲ (₹729) ಇದ್ದಾರೆ.

* ಅಧಿವೇಶನ ಆರಂಭವಾದ ಮೊದಲ ದಿನದ ರಾತ್ರಿ ಎಚ್‌.ಡಿ. ಕುಮಾರಸ್ವಾಮಿ ಊಟದ ವೆಚ್ಚ ₹3,352. ಐವಾನ್‌ ಡಿಸೋಜಾ ರಾತ್ರಿ ಊಟದ ವೆಚ್ಚ ₹3,105

* ಎಂ.ವೆಂಕಟೇಶ ಕೇವಲ 8 ದಿನಗಳವರೆಗೆ ಮಾತ್ರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

* * 

ಚಳಿಗಾಲದ ಅಧಿವೇಶನಕ್ಕಾಗಿ ಮಾಡಿರುವ ವೆಚ್ಚಗಳ ಬಗ್ಗೆ ಬೆಳಗಾವಿ ಜಿಲ್ಲಾಡಳಿತ ಪೂರ್ಣ ಮಾಹಿತಿ ನೀಡಿದೆ. ಆದರೆ, ವಿಧಾನಸಭೆ ಸಚಿವಾಲಯ ವೆಚ್ಚದ ಮಾಹಿತಿ ನೀಡುತ್ತಿಲ್ಲ

ಭೀಮಪ್ಪ ಜಿ.ಗಡಾದ

ಮಾಹಿತಿ ಹಕ್ಕು ಕಾರ್ಯಕರ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry