ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪಾಟೀಲ ಕಾಂಗ್ರೆಸ್‌ಗೆ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್. ಪಾಟೀಲ ಬೆಂಬಲಿಗರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್‌ಗೆ ಸೇರಿದರು.
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಪಾಟೀಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕಾಂಗ್ರೆಸ್ ಸೇರುವ ಇಚ್ಛೆಯನ್ನು ಪಾಟೀಲರು ತಾವಾಗಿಯೇ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಅವರು ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ’ ಎಂದರು.

‘ಜನತಾ ಪಕ್ಷ ಮೊದಲಿನ ರೀತಿ ಈಗ ಉಳಿದಿಲ್ಲ. ಜನತಾ ದಳ ಒಂದು ಕುಟುಂಬದ ಪಕ್ಷವಾಗಿದೆ ಅಷ್ಟೆ. ಪಾಟೀಲರು ಬಿಜೆಪಿ ಸೇರುವ ವ್ಯಕ್ತಿಯೂ ಅಲ್ಲ. ಕಾಂಗ್ರೆಸ್‌ ಸೇರದೆ ಪಾಟೀಲರಿಗೆ ಬೇರೆ ಆಯ್ಕೆ ಇರಲಿಲ್ಲ’ ಎಂದೂ ಸಮರ್ಥಿಸಿಕೊಂಡರು.

‘ಕಾಂಗ್ರೆಸ್ ಸೇರಿದ್ದು ಖುಷಿ ತಂದಿದೆ. ಬಸವಣ್ಣನ ಅನುಯಾಯಿಗಳು ಯಾರೂ ಬಿಜೆಪಿ ಸೇರಬಾರದು.  ಬಸವಣ್ಣನ ತತ್ವಕ್ಕೆ ವಿರೋಧವಾದ ಪಕ್ಷವದು. ಬಿಜೆಪಿ ಹೆಸರಿನಲ್ಲಿ ಆರ್‌ಎಸ್‌ಎಸ್‌ ಆಡಳಿತ ಮಾಡುತ್ತಿದೆ’ ಎಂದು ಬಿ.ಆರ್‌. ಪಾಟೀಲ ಪ್ರತಿಕ್ರಿಯಿಸಿದರು.

‘ಹೋಟೆಲ್, ಗೂಡಂಗಡಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಸಾರಾಯಿ ಸಿಗುತ್ತಿದೆ. ಅದರಿಂದ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದನ್ನು ನಿಯಂತ್ರಿಸಲು ಕಾನೂನು ತೊಡಕಿದೆಯೇ ಎಂಬುದು ಗೊತ್ತಿಲ್ಲ. ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಸಾರಾಯಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಅವರು ಭವಿಷ್ಯ ನುಡಿದರು. 

‘ಬಿಜೆಪಿಯಿಂದ ಪ್ರಜಾಪ್ರಭುತ್ವ ನಾಶವಾಗಲಿದೆ. ಹೀಗಾಗಿ ಯಾರೂ ಆ ಪಕ್ಷವನ್ನು ಬೆಂಬಲಿಸಬಾರದು’ ಎಂದೂ ವಿನಂತಿಸಿದರು.
‌ಜನತಾಪರಿವಾರದಲ್ಲಿದ್ದ ಪಾಟೀಲರು, ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ ಅವರನ್ನು  ಬೆಂಬಲಿಸಿದ್ದರು. ಆದರೆ, ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ಭಾಗಿಯಾಗದೆ ಕೆಜೆಪಿಯಲ್ಲೇ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT