ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಸಿದ್ಧವಾದರೂ ಬಸ್‌ ಸಂಚಾರ ಮರೀಚಿಕೆ

ಈಗಲೂ ಕಂಪ್ಲಿ ಮಾರ್ಗವಾಗಿ ಸಂಚರಿಸುತ್ತಿರುವ ಹೊಸಪೇಟೆ–ಗಂಗಾವತಿ ಬಸ್ಸುಗಳು
Last Updated 15 ಜೂನ್ 2017, 9:41 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ–ಆನೆಗುಂದಿ ನಡುವೆ ಸಂಪರ್ಕ ಬೆಸೆಯುವ ತಾಲ್ಲೂಕಿನ ಬುಕ್ಕಸಾಗರ ಸಮೀಪ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ದ್ದರೂ ಇಲ್ಲಿಯವರೆಗೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳು ಅದರ ಮೇಲಿನಿಂದ ಸಂಚರಿಸುತ್ತಿಲ್ಲ. ಬದಲಾಗಿ ಅನ್ಯ ಮಾರ್ಗದಿಂದ ಸಂಚರಿಸುತ್ತಿರುವ ಕಾರಣ ಪ್ರಯಾಣಿಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಅಷ್ಟೇ ಅಲ್ಲ, ಸಮಯ ಕೂಡ ವ್ಯರ್ಥವಾಗುತ್ತಿದೆ.

ಸೇತುವೆ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಉದ್ಘಾಟನೆಯಾಗದಿದ್ದರೂ ಹೊಸಪೇಟೆ–ಗಂಗಾವತಿ ಮಧ್ಯೆ ವಾಹನಗಳು ಏಪ್ರಿಲ್‌ನಿಂದಲೇ ಸೇತುವೆ ಮೂಲಕ ಸಂಚರಿಸುತ್ತಿವೆ. ಆದರೆ, ಸಾರಿಗೆ ಸಂಸ್ಥೆಯ ಬಸ್ಸುಗಳು ಮಾತ್ರ ಈಗಲೂ ಸಂಚರಿಸುತ್ತಿಲ್ಲ.

ಸೇತುವೆ ನಿರ್ಮಾಣಗೊಂಡ ಬಳಿಕ ಕಂಪ್ಲಿ ಮಾರ್ಗವಾಗಿ ಪ್ರಯಾಣಿಸುವುದು ತಪ್ಪುತ್ತದೆ. ಬಸ್ಸಿನ ಟಿಕೆಟ್‌ಗೆ ಅಧಿಕ ಹಣ ಪಾವತಿಸುವ ಅಗತ್ಯ ಇರುವುದಿಲ್ಲ. ಜತೆಗೇ ಸಮಯವೂ ಉಳಿತಾಯವಾಗುತ್ತದೆ ಎಂದು ಜನ ಭಾವಿಸಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.

ಕಂಪ್ಲಿ ಮಾರ್ಗವಾಗಿ ಹೋದರೆ ಹೊಸಪೇಟೆ– ಗಂಗಾವತಿ ನಡುವಿನ ಒಟ್ಟು 41 ಕಿ.ಮೀ ಅಂತರವನ್ನು ಕ್ರಮಿ ಸಲು ಸುಮಾರು 45ರಿಂದ 55 ನಿಮಿಷ ಬೇಕಾಗುತ್ತದೆ. ಸೇತುವೆ ನಿರ್ಮಾಣದಿಂದ ಎರಡೂ ಪಟ್ಟಣಗಳ ನಡುವಿನ ಅಂತರ 30 ಕಿ.ಮೀ.ಗೆ ತಗ್ಗಿದೆ. ಜತೆಗೇ ಪ್ರಯಾಣದ ಅವಧಿ 20ರಿಂದ 25 ನಿಮಿಷಗಳಷ್ಟು ಕಡಿಮೆಯಾಗಿದೆ. ಆದರೆ, ಬಸ್ಸುಗಳಲ್ಲಿ ಸಂಚರಿಸುವವರು ಇದರಿಂದ ವಂಚಿತರಾಗುತ್ತಿದ್ದಾರೆ.

‘ನಾನು ಗಂಗಾವತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿತ್ಯ ಹೊಸಪೇಟೆ ಯಿಂದ ಅಲ್ಲಿಗೆ ಹೋಗಿ ಬರುತ್ತೇನೆ. ಸೇತುವೆ ನಿರ್ಮಾಣ ಆಗಿರುವುದರಿಂದ ಕಂಪ್ಲಿ ಸುತ್ತು ಹಾಕಿ ಹೋಗುವುದು ಇನ್ನೂ ಮುಂದೆ ತಪ್ಪಲಿದೆ ಅಂದು ಕೊಂಡಿದ್ದೆ. ಆದರೆ, ನನ್ನ ನಿರೀಕ್ಷೆ ಸುಳ್ಳಾಗಿದೆ’ ಎನ್ನುತ್ತಾರೆ ಭಾರತೀಯ ಸ್ಟೇಟ್‌ ಬ್ಯಾಂಕಿನಲ್ಲಿ ಹಣಕಾಸು ವಿಷಯ ದ ಕೌನ್ಸಿಲರ್‌ ಆಗಿರುವ ಪ್ರಭುದೇವ.

‘ಸಾರಿಗೆ ಸಂಸ್ಥೆಯವರು ಉದ್ದೇಶ ಪೂರ್ವಕವಾಗಿಯೇ ಬಸ್ಸುಗಳನ್ನು ಓಡಿ ಸುತ್ತಿಲ್ಲವೋ ಅಥವಾ ಸೇತುವೆ ಮೇಲಿ ನಿಂದ ಸಂಚರಿಸಿದರೆ ನಮಗೆ ಸಮಸ್ಯೆ ಯಾಗುತ್ತದೆ ಎಂದು ಭಾವಿಸಿ ಕಂಪ್ಲಿ ಭಾಗದ ಜನ ಲಾಬಿ ಮಾಡಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರಿ ಗಂತೂ ಇದರಿಂದ ತೊಂದರೆಯಾಗು ತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಕಡೆ ಗಮನರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು’ ಎಂದು ಒತ್ತಾಯಿಸಿದರು.

‘ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು ದಿನನಿತ್ಯ ಹೊಸಪೇಟೆ–ಗಂಗಾವತಿ ಮಧ್ಯೆ ಓಡಾಡು ತ್ತೇನೆ. ಮೊದಲಿನಿಂದಲೂ ಬಸ್ಸಿನಲ್ಲಿ ಓಡಾಡುತ್ತಿದ್ದೆ. ಸೇತುವೆ ನಿರ್ಮಾಣವಾದ ನಂತರ ಬಸ್ಸುಗಳು ಅದರ ಮೂಲಕವೇ ಹೋಗುತ್ತವೆ. ಸಮಯ ಉಳಿತಾಯವಾಗುತ್ತದೆ ಅಂದುಕೊಂಡಿದ್ದೆ. ಆದರೆ, ಆ ರೀತಿ ಆಗಿಲ್ಲ. ಹಾಗಾಗಿ ಒಂದೂವರೆ ತಿಂಗಳಿಂದ ನನ್ನ ಸ್ವಂತ ವಾಹನದಲ್ಲಿ ಓಡಾಡುತ್ತಿದ್ದೇನೆ. ಇದರಿಂದ ಸಮಯ ಹಾಗೂ ಹಣವೂ ಉಳಿತಾಯವಾಗು ತ್ತಿದೆ’ ಎಂದು ಬಸವೇಶ್ವರ ಬಡಾವಣೆಯ ರಾಜು ತಿಳಿಸಿದರು.

ಈ ಕುರಿತು ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮ್ಮದ್‌ ಫಯಾಜ್‌ ಅವರನ್ನು ಪ್ರಶ್ನಿಸಿದಾಗ, ‘ಸೇತುವೆ ವಾಹನಗಳ ಓಡಾಟಕ್ಕೆ ಸಿದ್ಧ ಗೊಂಡಿದೆ ಎಂದು ಸರ್ಕಾರದಿಂದ ಇದುವರೆಗೆ ಅಧಿಕೃತವಾಗಿ ಯಾವುದೇ ಪತ್ರ ಬಂದಿಲ್ಲ. ಈ ವಿಷಯವಾಗಿ ಲೋಕೋಪಯೋಗಿ ಇಲಾಖೆಯವರನ್ನು (ಪಿ.ಡಬ್ಲ್ಯೂ.ಡಿ) ಸಂಪರ್ಕಿಸಲಾಗಿದೆ. ಆದರೆ, ಅವರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ’ ಎಂದು ತಿಳಿಸಿದರು.

‘ಸೇತುವೆ ಮೂಲಕ ಈಗಾಗಲೇ ಬೇರೆ ವಾಹನಗಳು ಸಂಚರಿಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ, ಬೇರೆ ವಿಭಾಗದ ಕೆಲವು ತಡೆರಹಿತ ಬಸ್ಸುಗಳು ರಾತ್ರಿ ವೇಳೆ ಓಡಾಡುತ್ತಿರು ವುದು ಗೊತ್ತಾಗಿದೆ. ಆದರೆ, ಅಧಿಕೃತ ವಾಗಿ ನಮಗೆ ತಿಳಿಸುವವರೆಗೆ ನಮ್ಮ ವಿಭಾಗದ ಬಸ್ಸುಗಳನ್ನು ಓಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸೇತುವೆ ಇನ್ನೂ ಉದ್ಘಾಟನೆ ಯಾಗಿಲ್ಲ. ಆದರೂ ವಾಹನಗಳು ಸಂಚರಿಸುತ್ತಿವೆ. ಇತರ ವಾಹನಗಳಂತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಓಡಾಡ ಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಿ.ಡಬ್ಲ್ಯೂ.ಡಿ. ಅಧಿಕಾರಿ.

*
ಸೇತುವೆ ಅಧಿಕೃತವಾಗಿ ಉದ್ಘಾಟನೆಯಾದ ನಂತರ ಸಂಸ್ಥೆಗೆ ಸೇರಿದ ಬಸ್ಸುಗಳನ್ನು ಓಡಿಸಲಾಗುವುದು. ಇದರಲ್ಲಿ ಯಾರ ಲಾಬಿಯೂ ಇಲ್ಲ.
–ಮಹಮ್ಮದ್‌ ಫಯಾಜ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಹೊಸಪೇಟೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT