ಕಿಡ್ನ್ಯಾಪ್ ಕಥೆಗೆ ಪ್ರೇಮದ ಒಗ್ಗರಣೆ

7

ಕಿಡ್ನ್ಯಾಪ್ ಕಥೆಗೆ ಪ್ರೇಮದ ಒಗ್ಗರಣೆ

Published:
Updated:
ಕಿಡ್ನ್ಯಾಪ್ ಕಥೆಗೆ ಪ್ರೇಮದ ಒಗ್ಗರಣೆ

‘ಇದು ಬೇರೆಯದೇ ಪ್ರಕಾರದ ಸಿನಿಮಾ’

ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಆಪರೇಷನ್‌ ಅಲಮೇಲಮ್ಮ’ದ ಕುರಿತು ಹೀಗೆ ಒಂದು ವಾಕ್ಯದಲ್ಲಿ ಹೇಳಿದ ಸಿಂಪಲ್‌ ಸುನಿ, ನಂತರ ವಿವರಣೆಗಿಳಿದರು.

‘ನನ್ನ ತಲೆಯಲ್ಲಿ ಒಂದು ಥ್ರಿಲ್ಲರ್‌ ಕಥೆಯ ಎಳೆ ಇತ್ತು. ಅದಕ್ಕೆ ಒಂದಿಷ್ಟು ಹ್ಯೂಮರ್‌ ಅಂಶಗಳನ್ನು ಸೇರಿಸಿದೆ. ಇದೊಂದು ನೈಜ ಘಟನೆ ಆಧರಿಸಿದ ಸಿನಿಮಾ. ಒಂದು ಕಿಡ್ನಾಪ್ ಸುತ್ತ ಕಥೆ ಹೆಣೆಯಲಾಗಿದೆ. ಒಬ್ಬ ಅಮಾಯಕ ಕಿಡ್ನ್ಯಾಪ್‌ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡರೆ ಪೊಲೀಸರು ಅವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದೇ ಕಥೆಯ ಎಳೆ’ ಹೀಗೆ ಅವರು ಬೇರೆ ಬೇರೆ ರೀತಿಯಲ್ಲಿ ಸಿನಿಮಾದ ಕಥನದ ಎಳೆಯನ್ನು ಬಿಚ್ಚಿಡುತ್ತಾ ಹೋದರು.

‘ಕಥೆಯನ್ನು ಬಿಟ್ಟುಕೊಡಲಾರೆ ಎಂಬ ಹಟ ಅವರಲ್ಲಿರಲಿಲ್ಲ. ಇದು ಯಾವ ರೀತಿಯ ಸಿನಿಮಾ ಎಂದು ನೋಡುಗರಿಗೆ ಮೊದಲೇ ತಿಳಿದಿದ್ದರೆ ಅದಕ್ಕೆ ತಕ್ಕ ಹಾಗೆ ಅವರ ನಿರೀಕ್ಷೆಗಳೂ ಬೆಳೆಯುತ್ತವೆ’ಎಂಬುದು ಅವರ ಆಲೋಚನೆ. ಅಲ್ಲಿ ಬಿಡುಗಡೆ ಮಾಡಿದ ಟ್ರೇಲರ್‌ ಕೂಡ ಅವರ ನಂಬಿಕೆಯನ್ನು ಪುಷ್ಟೀಕರಿಸುವ ಹಾಗೆಯೇ ಇತ್ತು.

ಕ್ಯಾರೆಕ್ಟರ್‌ ಟೀಸರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ಆಪರೇಷನ್‌ ಅಲಮೇಲಮ್ಮ’, ಈಗ ಟ್ರೇಲರ್‌ ಬಿಡುಗಡೆ ಮಾಡಿದೆ.

(ರಿಷಿ, ಜ್ಯೂಡಾ ಸ್ಯಾಂಡಿ, ಸಿಂಪಲ್‌ ಸುನಿ)

ಚಿತ್ರದಲ್ಲಿ ಅನನ್ಯಾ ಟೀಚರ್‌ ಆಗಿ ನಟಿಸಿರುವ ಶ್ರದ್ಧಾ ಶ್ರೀನಾಥ್‌, ‘ಯು ಟರ್ನ್‌ನ ಟೀಸರ್‌ನಲ್ಲಿ ನನ್ನನು ನೋಡಿದ ಸುನಿ ಈ ಚಿತ್ರಕ್ಕೆ ಅವಕಾಶ ಕೊಟ್ಟರು. ಇದೊಂದು ಕಿಡ್ನ್ಯಾಪ್‌ ಥ್ರಿಲ್ಲರ್‌. ಆದರೆ ಪ್ರೀತಿ, ಆ್ಯಕ್ಷನ್‌, ಸಸ್ಪೆನ್ಸ್‌, ಹಾಸ್ಯ ಎಲ್ಲವೂ ಇದರಲ್ಲಿದೆ. ನಾನು ತುಂಬ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ವಿವರಿಸಿದರು.

ಕಿರುತೆರೆ ನಟ ರಿಷಿ ಈ ಚಿತ್ರದ ಮೂಲಕ ನಾಯಕ ನಟರಾಗಿ ಪರಿಚಿತರಾಗುತ್ತಿದ್ದಾರೆ.

‘ಮೊದಲು ಕ್ಯಾರೆಕ್ಟರ್‌ ಟೀಸರ್‌, ಈಗ ಟ್ರೇಲರ್‌ ಹೀಗೆ ಹಂತ ಹಂತವಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿದ್ದೇವೆ’ ಎಂದ ಅವರು ‘ಹೈಸ್ಕೂಲು ಕೂಡ ಓದಿರದ, ಯಾವುದೇ ಕೆಲಸ ಹೇಳಿದ್ರೂ ಮಾಡುವ ಜಾಲಿ ಹುಡುಗನ ಪಾತ್ರ ನನ್ನದು. ಅಂಥವನು ಟೀಚರ್‌ ಒಬ್ಬಳ ಪ್ರೇಮದಲ್ಲಿ ಬಿದ್ದರೆ ಏನಾಗುತ್ತದೆ ಎನ್ನುವುದೇ ಈ ಸಿನಿಮಾ’ ಎಂದು ತಮ್ಮ ಪಾತ್ರದೊಟ್ಟಿಗೆ ಸಿನಿಮಾ ಎಳೆಯನ್ನೂ ಅವರು ಬಿಚ್ಚಿಟ್ಟರು. ಚಿತ್ರದಲ್ಲಿ ಇರುವ ಎರಡು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಹೊಸೆದಿದ್ದಾರೆ. ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ ಈ ಚಿತ್ರಕ್ಕೆ ಮುಂಬೈ ಮೂಲದ ಉದ್ಯಮ ಅಮರೇಶ್‌ ಸೂರ್ಯವಂಶಿ ಹಣ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry