ಆಗಸದಲ್ಲಿ ಆಟೋ ದಾರಿ!

7

ಆಗಸದಲ್ಲಿ ಆಟೋ ದಾರಿ!

Published:
Updated:
ಆಗಸದಲ್ಲಿ ಆಟೋ ದಾರಿ!

ಆಟೋಗಳು ಹೊಗೆಯೆಬ್ಬಿಸಿಕೊಂಡು ರಸ್ತೆಯ ಮೇಲೆ ಓಡಾಡುವುದನ್ನು ನೋಡಿದ್ದೀರಿ. ಆದರೆ ಅವೇ ಆಕಾಶದಲ್ಲಿ ಹಾರಾಡುವಂತಾದರೆ? ಅದೂ ಒಂದಲ್ಲ, ಒಟ್ಟೊಟ್ಟಿಗೇ ಮೂರು ಮೂರು ಆಟೋಗಳು! ಅದರ ಮೇಲೆ ಸಾಹಸ ಮಾಡುತ್ತಿರುವ ಹೆಬ್ಬಂಡೆಯಂಥ ಕಡುಗಪ್ಪು ಗಂಡು.

ಇದೇನು ಯಾವುದೋ ಸಿನಿಮಾ ದೃಶ್ಯ ಇದ್ದ ಹಾಗಿದೆಯಲ್ಲ ಎಂದು ಅಚ್ಚರಿಪಡಬೇಡಿ. ನಿಮ್ಮ ಅನುಮಾನ ನಿಜ. ಅದು ದುನಿಯಾ ವಿಜಯ್‌ ಮತ್ತು ಮಾನ್ವಿತಾ ನಟಿಸುತ್ತಿರುವ ‘ಕನಕ’ ಚಿತ್ರದ ಚಿತ್ರೀಕರಣ ಸಂದರ್ಭ.

ಇತ್ತೀಚೆಗೆ ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಇಂಥದ್ದೊಂದು ರೋಚಕ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಆರ್. ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಈ ಚಿತ್ರದಲ್ಲಿ ವಿಜಿ ಆಟೋ ಚಾಲಕನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿಯೇ ಈ ಸಾಹಸ ದೃಶ್ಯದಲ್ಲಿಯೂ ನೆಲ–ಮುಗಿಲುಗಳಲ್ಲಿ ಆಟೋಗಳೇ ವಿಜೃಂಭಿಸುತ್ತಿದ್ದವು. ಸಾಹಸ ನಿರ್ದೇಶಕ ವಿನೋದ್, ಈ ರಿಸ್ಕಿ ಸ್ಟಂಟ್‌ನ ಹಿಂದಿನ ರೂವಾರಿ.

ಚಿತ್ರೀಕರಣದ ನಡುವೆಯೇ ಬಿಡುವು ಮಾಡಿಕೊಂಡು ಚಿತ್ರತಂಡ ಪತ್ರಕರ್ತರ ಜತೆ ಮಾತನಾಡಿತು. ‘ಆರ್. ಚಂದ್ರು ಸಿನಿಮಾ ಬಗ್ಗೆ ಸಾಕಷ್ಟು ಪ್ಯಾಷನ್ ಇರುವಂತಹ ನಿರ್ದೇಶಕ’ ಎಂದು ಮಾತಿಗಾರಂಭಿಸಿದ ವಿಜಯ್‌, ‘ಈ ದೃಶ್ಯದ ಚಿತ್ರೀಕರಣ ತುಂಬಾ ಅದ್ದೂರಿಯಾಗಿ ನಡೆಯುತ್ತಿದೆ. ನನ್ನ ಗೆಳೆಯ ವಿನೋದ್ ಈ ಸಾಹಸ ಮಾಡಿಸುತ್ತಿರುವುದು ನನಗೆ ಖುಷಿ ನೀಡಿದೆ’ ಎಂದರು.

(ದುನಿಯಾ ವಿಜಯ್‌, ಆರ್‌. ಚಂದ್ರು)

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ‘ಕೆಂಡಸಂಪಿಗೆ’ ಮಾನ್ವಿತಾ ಈಗಾಗಲೇ ಒಬ್ಬಳು ನಾಯಕಿಯಾಗಿ ಆಯ್ಕೆಯಾಗಿದ್ದು, ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕಿಯ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಚಿತ್ರೀಕರಣದ ಅನುಭವವನ್ನು ಖುಷಿಯಿಂದಲೇ ಹಂಚಿಕೊಳ್ಳುವ ಮಾನ್ವಿತಾ, ‘ಸಿನಿಮಾಗಳಲ್ಲಿ ವಿಜಯ್‌ ಅವರ ಮುಗ್ಧತೆ ನನಗೆ ತುಂಬ ಇಷ್ಟ. ಹಾಗೆಯೇ ಈ ಸಿನಿಮಾದ ಮೂಲಕ ಸತ್ಯ ಹೆಗಡೆ ಜತೆ ಕೆಲಸ ಮಾಡುತ್ತಿರುವುದು ಇನ್ನಷ್ಟು ಖುಷಿ ನೀಡಿದೆ’ ಎಂದರು.

ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಉತ್ತರ ಕರ್ನಾಟಕದಲ್ಲಿ ಕೆಲ ಸನ್ನಿವೇಶಗಳ ಚಿತ್ರೀಕರಣ ನಡೆಯಬೇಕಿದೆ. ಕೆ.ಪಿ. ನಂಜುಂಡಿ ಮುಖ್ಯ ಖಳನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ಇನ್ನೊಂದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry