ಕೇರಳ: ಆಜಾನ್‌ಗೆ ಧ್ವನಿವರ್ಧಕ ಬಳಸದಿರಲು ಮಲಪ್ಪುರಂನ 17 ಮಸೀದಿಗಳ ನಿರ್ಧಾರ

7

ಕೇರಳ: ಆಜಾನ್‌ಗೆ ಧ್ವನಿವರ್ಧಕ ಬಳಸದಿರಲು ಮಲಪ್ಪುರಂನ 17 ಮಸೀದಿಗಳ ನಿರ್ಧಾರ

Published:
Updated:
ಕೇರಳ: ಆಜಾನ್‌ಗೆ ಧ್ವನಿವರ್ಧಕ ಬಳಸದಿರಲು ಮಲಪ್ಪುರಂನ 17 ಮಸೀದಿಗಳ ನಿರ್ಧಾರ

ತಿರುವನಂತಪುರ: ಶಬ್ದಮಾಲಿನ್ಯ ತಡೆಗೆ ಮುಂದಾಗಿರುವ ಕೇರಳದ ಮಲಪ್ಪುರಂ ಜಿಲ್ಲೆಯ ‘ವಾಲಿಯಾ ಜುಮಾ ಮಸ್ಜಿದ್’ ದಿನಕ್ಕೆ ಒಂದೇ ಬಾರಿ ಧ್ವನಿವರ್ಧಕದಲ್ಲಿ ಆಜಾನ್ (ಪ್ರಾರ್ಥನೆಯ ಕರೆ/ಬಾಂಗ್) ಹೇಳಲು ನಿರ್ಧರಿಸಿದೆ. ಜತೆಗೆ, ಆಜಾನ್‌ಗೆ ಧ್ವನಿವರ್ಧಕ ಬಳಸದಂತೆ ಜಿಲ್ಲೆಯ 17 ಮಸೀದಿಗಳ ಜತೆ ಒಪ್ಪಂದ ಮಾಡಿಕೊಂಡಿದೆ.

ಮಲಪ್ಪುರಂನ ವಜಕ್ಕಾಡ್ ಪ್ರದೇಶದ ಅತಿ ದೊಡ್ಡ ಮಸೀದಿ ಎಂದು ಪರಿಗಣಿಸಲಾಗಿರುವ ‘ವಾಲಿಯಾ ಜುಮಾ ಮಸ್ಜಿದ್’ ಸಮೀಪದ 17 ಮಸೀದಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಂತೆ, ವಾಲಿಯಾ ಮಸೀದಿಯಲ್ಲಿ ದಿನಕ್ಕೆ ಒಂದು ಬಾರಿ ಧ್ವನಿವರ್ಧಕದ ಮೂಲಕ ಆಜಾನ್ ಹೇಳಲಾಗುತ್ತದೆ. ಇತರ 17 ಮಸೀದಿಗಳು ಧ್ವನಿವರ್ಧಕದ ಸಹಾಯವಿಲ್ಲದೆ ಆಜಾನ್ ಅನ್ನು ಪುನರಾವರ್ತಿಸಲಿವೆ. ಉಳಿದಂತೆ ಎಲ್ಲ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನಷ್ಟೇ ಮಾಡಲು ನಿರ್ಧರಿಸಲಾಗಿದೆ.

‘ವಜಕ್ಕಾಡ್‌ ಜಂಕ್ಷನ್‌ನ ಸುತ್ತಮುತ್ತವೇ 7 ಮಸೀದಿಗಳಿವೆ. ಇಲ್ಲಿಂದ ಕೆಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಟ್ಟು 10 ಮಸೀದಿಗಳಿವೆ. ವಿವಿಧ ಸಮಯಗಳಲ್ಲಿ ಈ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಹೇಳುವುದರಿಂದ ಶಿಕ್ಷಣ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ವಜಕ್ಕಾಡ್ ಮಸೀದಿಗಳ ಸಮಿತಿಯ ಅಧ್ಯಕ್ಷ ಟಿ.ಪಿ. ಅಬ್ದುಲ್ ಅಜೀಜ್ ಹೇಳಿದ್ದಾರೆ.

ಧ್ವನಿವರ್ಧಕಗಳಲ್ಲಿ ಆಜಾನ್ ಹೇಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಸೀದಿಗಳ ಸಮಿತಿಯ ಸದಸ್ಯರ ಸಭೆ ನಡೆಸಲಾಯಿತು. ಹೆಚ್ಚಿನವರು ಶಬ್ದಮಾಲಿನ್ಯ ತಡೆಯುವ ಬಗ್ಗೆ ಒಲವು ವ್ಯಕ್ತ‍ಪಡಿಸಿದರು. ಹಲವು ಸುತ್ತಿನ ಮಾತುಕತೆಗಳ ನಂತರ ಧ್ವನಿವರ್ಧಕದಲ್ಲಿ ಒಂದೇ ಬಾರಿ ಆಜಾನ್ ಹೇಳುವ ನಿರ್ಧಾರಕ್ಕೆ ಬರಲಾಯಿತು ಎಂದು ಅಜೀಜ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ ವರದಿ ಮಾಡಿದೆ.

ಈ ನಿರ್ಧಾರಕ್ಕೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ದಿನಕ್ಕೆ ಒಂದೇ ಬಾರಿ ಧ್ವನಿವರ್ಧಕದ ಮೂಲಕ ಆಜಾನ್ ಹೇಳುವ ಒಪ್ಪಂದ ಮಾಡುವ ಮೂಲಕ ‘ವಾಲಿಯಾ ಜುಮಾ ಮಸ್ಜಿದ್’ ಮಾದರಿಯಾಗಿದೆ. ಧ್ವನಿವರ್ಧಕಗಳ ಬಳಕೆ ಕಡಿಮೆ ಮಾಡುವ ಪ್ರಕ್ರಿಯೆ ದೀರ್ಘ ಸಮಯ ತೆಗೆದುಕೊಳ್ಳಲಿದೆ. ರಾಜಕೀಯ ಪಕ್ಷಗಳೂ ಇದನ್ನು ಅನುಸರಿಸಲಿ ಎಂದು ಸ್ಥಳೀಯ ವ್ಯಾಪರಿಯೊಬ್ಬರು ಅಭಿಪ್ರಾಯಪಟ್ಟಿದ್ದಾಗಿ ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry