ಕೊಳೆಗೇರಿಯಲ್ಲಿ ಯುವ ವೈದ್ಯರು

7

ಕೊಳೆಗೇರಿಯಲ್ಲಿ ಯುವ ವೈದ್ಯರು

Published:
Updated:
ಕೊಳೆಗೇರಿಯಲ್ಲಿ ಯುವ ವೈದ್ಯರು

‘ನಾಲ್ಕು ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ನಮ್ಮ ಹತ್ತಿರ ಹಣವಿಲ್ಲದಿರಬಹುದು ಆದರೆ ವಿದ್ಯೆ ಇದೆ. ನಮಗೆ ಗೊತ್ತಿರುವ ಒಂದಿಷ್ಟು ವಿಷಯಗಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸುತ್ತೇವೆ’ ಹೀಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ‘ಹೆಲ್ತ್‌ ಆನ್‌ ವ್ಹೀಲ್ಸ್‌’ ತಂಡದ ಸದಸ್ಯರು.

ಬಸವೇಶ್ವರನಗರದ ಸರ್ಕಾರಿ ಹೋಮಿಯೊಪಥಿ ಆಸ್ಪತ್ರೆ ಹಾಗೂ ಕಾಲೇಜಿನ 40 ವಿದ್ಯಾರ್ಥಿಗಳು ನಗರದ ಕೊಳೆಗೇರಿಗಳಲ್ಲಿ ಆರೋಗ್ಯ ಕಾಳಜಿ ಮಾಡುವ ಉದ್ದೇಶದಿಂದ ಕಟ್ಟಿದ ತಂಡವಿದು. ಇದು, ಕೋಲಾರ ಮೂಲದ  ಡಾ.ಸತೀಶ್‌ ಅವರ ಕನಸಿನ ಯೋಜನೆ.

ಎಂಬಿಎ ಪದವಿ ಮುಗಿಸಿ ಕುಟುಂಬದ ವ್ಯವಹಾರವನ್ನು ನೋಡಿಕೊಂಡಿದ್ದ  ಸತೀಶ್‌ ಸಮಾಜಸೇವೆ ಮಾಡುವ ಉದ್ದೇಶದಿಂದಲೇ ವೈದ್ಯಕೀಯ ಪದವಿ ಓದಿದವರು. ಅಲ್ಲದೆ ವಿದ್ಯಾರ್ಥಿಯಾಗಿದ್ದಾಗಲೇ ಕೊಳೆಗೇರಿಗಳಿಗೆ ಭೇಟಿ ನೀಡಿ ಸ್ವಚ್ಛತೆ, ಆರೋಗ್ಯದ ಕಾಳಜಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆರಂಭದಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿದಾಗ ಸಂಪೂರ್ಣ ವೆಚ್ಚ, ವಾಹನ, ಔಷಧಿ,  ತಂಡದ ಸದಸ್ಯರ ಊಟೋಪಚಾರದ ವೆಚ್ಚವನ್ನೂ ಸತೀಶ್‌ ಅವರೇ ಭರಿಸಿದ್ದರು.

‘ಕೊಳೆಗೇರಿಗಳಲ್ಲಿ ಬದುಕುತ್ತಿರುವ ಜನರಿಗೆ ಮೊದಲನೆಯದಾಗಿ ಬೇಕಿರುವುದು ಸಲಹೆ, ಆರೋಗ್ಯದ ಅರಿವು. ನಂತರ ಮದ್ದು’ ಎನ್ನುತ್ತಾರೆ, ‘ಹೆಲ್ತ್‌ ಆನ್‌ ವ್ಹೀಲ್ಸ್‌’ ತಂಡದ ಸದಸ್ಯೆ, ಕಮಲಾನಗರದ ಡಾ. ಪಲ್ಲವಿ ಆರ್‌.ಎನ್.

(ಆನಂದಪುರ ಕೊಳೆಗೇರಿಯಲ್ಲಿ ಮಹಿಳೆಯ ತಪಾಸಣೆ ಮಾಡುತ್ತಿರುವ ವೈದ್ಯೆ ಸುಮನಾ)

ಆರೋಗ್ಯದ ಅರಿವು ಇಲ್ಲದ ಹಲವರಿಗೆ ತಮಗಾಗುವ ಸಮಸ್ಯೆಗಳ ಅರಿವೇ ಇರುವುದಿಲ್ಲ. ಜ್ವರ, ಮೈಕೈ ನೋವು ಎಂದಾದರೆ ಯಾವುದೋ ಮಾತ್ರೆ ಸೇವಿಸಿ ಸುಮ್ಮನಾಗುತ್ತಾರೆ. ಬರೀ ಅನ್ನ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ. ಇದನ್ನು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ವಿವರಿಸುತ್ತಾರೆ.

ಯುವ ವೈದ್ಯರ ಈ ತಂಡ ಐದಾರು ಗುಂಪು ಮಾಡಿಕೊಂಡು ಪ್ರತಿ ಭಾನುವಾರ ವಿವಿಧ ಕೊಳೆಗೇರಿಗೆ ಭೇಟಿ ನೀಡುತ್ತಾರೆ. ಕೆಲ ಕೊಳೆಗೇರಿಗಳನ್ನು ದತ್ತು ತೆಗೆದುಕೊಂಡು ನಿರಂತರವಾಗಿ ಅಲ್ಲಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಂಡು, ಉಚಿತವಾಗಿ ಔಷಧಿ ವಿತರಿಸುತ್ತಾರೆ.

‘ಕೊಳೆಗೇರಿಗಳ ಜನರು ಹಲವು ಚಟಗಳಿಗೆ ದಾಸರಾಗಿದ್ದಾರೆ. ಕುಡಿತ, ಧೂಮಪಾನದಿಂದ ದೇಹದ ಮೇಲೆ ಉಂಟಾಗುವ ಪರಿಣಾಮವನ್ನು ಸರಳ ಭಾಷೆಯಲ್ಲಿ ಹೇಳುತ್ತೇವೆ. ಆ ಚಟದಿಂದ ಹೊರಬರಲು ಸಹಾಯ ಮಾಡುತ್ತೇವೆ’ ಎನ್ನುತ್ತಾರೆ ಡಾ.ಸತೀಶ್.

‘ನಮ್ಮ ತಂದೆತಾಯಿ ಉಚಿತ ಶಿಬಿರ ಮಾಡುತ್ತೇನೆ ಎಂದಾಗ ಸಹಾಯ ಮಾಡಲು ಮುಂದಾದರು, ಜೊತೆಗೆ ಹಲವು ಗೆಳೆಯರು ಊಟ ನೋಡಿಕೊಂಡರು. ಓಡಾಡಲು ವಾಹನ ನೀಡಿದರು. ಹೀಗೆ ಹಲವರ ಸಹಾಯದಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ’ ಎನ್ನುತ್ತಾರೆ ಸತೀಶ್.

ಮಾಹಿತಿಗೆ: 93412 28306

**

ನಮ್ಮ ಈ ಕೆಲಸದಿಂದ ಸಾವಿರಾರು ಜನರ ಬದುಕು ಸುಧಾರಿಸಲು ಸಾಧ್ಯವಿಲ್ಲ. ಆದರೆ ಹತ್ತು ಜನರ ಆರೋಗ್ಯವನ್ನಾದರೂ ಸುಧಾರಿಸಿದ ನೆಮ್ಮದಿ

ನಮಗೆ ಇದೆ

–ಡಾ. ಸತೀಶ್, ಸಂಸ್ಥಾಪಕ

***

ರೋಗ ಬರದಂತೆ ಕಾಳಜಿವಹಿಸಬೇಕು. ಪೌಷ್ಟಿಕ ಆಹಾರ, ಮಕ್ಕಳ ಬೆಳವಣಿಗೆಗೆ ಸ್ವಚ್ಛವಾದ ಪರಿಸರ ಕಲ್ಪಿಸಬೇಕು ಎಂಬುದನ್ನು ಬಿಡಿಸಿ ಹೇಳಿಕೊಡುತ್ತೇವೆ, ಜೊತೆಗೆ ಕೌಟುಂಬಿಕ ಸಲಹೆಗಳನ್ನು ನೀಡುತ್ತೇವೆ

–ಡಾ. ಪಲ್ಲವಿ, ಸ್ವಯಂಸೇವಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry