ರಾಷ್ಟ್ರಪತಿ ಚುನಾವಣೆ: ಯೋಗ್ಯ ಅಭ್ಯರ್ಥಿಯೇ ಆಯ್ಕೆಯಾಗಲಿ

7

ರಾಷ್ಟ್ರಪತಿ ಚುನಾವಣೆ: ಯೋಗ್ಯ ಅಭ್ಯರ್ಥಿಯೇ ಆಯ್ಕೆಯಾಗಲಿ

Published:
Updated:
ರಾಷ್ಟ್ರಪತಿ ಚುನಾವಣೆ: ಯೋಗ್ಯ ಅಭ್ಯರ್ಥಿಯೇ ಆಯ್ಕೆಯಾಗಲಿ

ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸುವುದರೊಂದಿಗೆ ದೇಶದ 14ನೇ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ರಾಷ್ಟ್ರಪತಿ ಯಾರಾಗಬಹುದು? ಕಣದಲ್ಲಿ ಯಾರು ಯಾರು ಇರಬಹುದು? ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದ ಪ್ರಶ್ನೆ.   ಈ ಕುತೂಹಲ ತಣಿಯಲು ಇನ್ನೂ ಕೆಲವು ದಿನ ಕಾಯಬೇಕು.

ಏಕೆಂದರೆ, ತಾವು ಎರಡನೇ ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಹಾಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ತನ್ನ ಅಭ್ಯರ್ಥಿ ಯಾರು ಎಂಬ ಬಗ್ಗೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಇದುವರೆಗೂ ಸುಳಿವು ಬಿಟ್ಟುಕೊಟ್ಟಿಲ್ಲ. ವಿರೋಧ ಪಕ್ಷಗಳು ಕೂಡ ಇನ್ನೂ ಚರ್ಚೆ, ಮಾತುಕತೆಯ ಹಂತದಲ್ಲಿಯೇ ಇವೆ.

ಎಲ್ಲ ಪಕ್ಷಗಳು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತವೆ ಎಂದು ನಿರೀಕ್ಷಿಸುವಂತೆಯೂ ಇಲ್ಲ. ಏಕೆಂದರೆ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆಯೇ ನಡೆಯದೆ ಅವಿರೋಧ ಆಯ್ಕೆಯಾಗಿದ್ದು 1977ರಲ್ಲಿ ಮಾತ್ರ. ಅಂತಹ ಅಪರೂಪದ ಕೀರ್ತಿಗೆ ಪಾತ್ರರಾದವರು ದಿವಂಗತ ನೀಲಂ ಸಂಜೀವ ರೆಡ್ಡಿ  ಒಬ್ಬರೇ. ಅದೊಂದು ಸಲ ಬಿಟ್ಟರೆ ಬೇರೆಲ್ಲ ಸಂದರ್ಭದಲ್ಲೂ ಚುನಾವಣೆಗಳು ನಡೆದಿವೆ. ಅದೇ ಪರಿಪಾಠ ಈ ಸಲವೂ ಮುಂದುವರಿಯುವ ಸೂಚನೆಗಳು ಕಂಡು ಬರುತ್ತಿವೆ.

ಚುನಾವಣೆ ಎನ್ನುವುದು ಜನತಂತ್ರದ ಜೀವಂತಿಕೆಯ ಲಕ್ಷಣ. ಆದರೆ ಅದೇ ರೀತಿ ರಾಷ್ಟ್ರಪತಿ ಸ್ಥಾನ ಕೂಡ. ಅಧಿಕಾರವೆಲ್ಲ ಪ್ರಧಾನಿಯ ಕೈಯಲ್ಲೇ ಇರುವುದರಿಂದ ರಾಷ್ಟ್ರಪತಿ ಹುದ್ದೆ ಆಲಂಕಾರಿಕವೇ ಇರಬಹುದು.  ಆದರೆ ಅದು ದೇಶದ ಪರಮೋಚ್ಚ ಸಂವಿಧಾನಾತ್ಮಕ ಹುದ್ದೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ನಂತರ  ಸರ್ಕಾರ ರಚನೆ ವೇಳೆಗೆ ಅತ್ಯಂತ ನಿರ್ಣಾಯಕ ಮತ್ತು ಕಷ್ಟಕರವಾದ ತೀರ್ಮಾನ ತೆಗೆದುಕೊಳ್ಳುವ ಹೊಣೆ ರಾಷ್ಟ್ರಪತಿ ಹುದ್ದೆಯಲ್ಲಿ ಇದ್ದವರ ಮೇಲೆ ಬಿದ್ದದ್ದನ್ನು ನೋಡಿದ್ದೇವೆ.

ಆ ಹುದ್ದೆಯಲ್ಲಿ ಇದ್ದವರು ಕೂಡ ಆಗ ತಮ್ಮ  ರಾಜಕೀಯ ಒಲವು ನಿಲುವುಗಳು, ತಮ್ಮನ್ನು ಆಯ್ಕೆ ಮಾಡಿದ ಪಕ್ಷದ ಮೇಲಿನ ನಿಷ್ಠೆಯನ್ನು ಮೀರಿ ನಿಂತಿದ್ದಾರೆ.  ತುಂಬ ನಾಜೂಕಿನ  ಸನ್ನಿವೇಶಗಳನ್ನು ಸಂವಿಧಾನದ ಆಶಯಗಳಿಗೆ ಚ್ಯುತಿ ಬರದಂತೆ ನಿಭಾಯಿಸಿದ್ದಾರೆ. ತಮಗಿರುವ ವಿವೇಚನಾಧಿಕಾರ ಬಳಸುವಾಗಲೂ ತಮ್ಮ  ಹುದ್ದೆಯ ಘನತೆ, ಗೌರವವನ್ನು ಕಾಪಾಡಿದ್ದಾರೆ. ವಿನಾಕಾರಣ ಸಂಘರ್ಷದ ಹಾದಿ ತುಳಿಯದೇ, ಅಗತ್ಯ ಬಿದ್ದಾಗ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

ಎಷ್ಟೋ ಸಲ ‘ರಬ್ಬರ್‌ ಸ್ಟಾಂಪ್‌’ ಎನ್ನುವ ಅಪವಾದಗಳು ಬಂದರೂ ತಮ್ಮ ಅಧಿಕಾರದ ಲಕ್ಷ್ಮಣ ರೇಖೆ ದಾಟಿಲ್ಲ.  ಅದೇ ಪರಂಪರೆ ಮುಂದುವರಿಸುವ, ಸಂವಿಧಾನವನ್ನು ಎತ್ತಿ ಹಿಡಿಯುವ, ರಾಜಕಾರಣದ ಸೋಂಕು ರಾಷ್ಟ್ರಪತಿ ಭವನಕ್ಕೆ ತಾಗದಂತೆ ದೂರ ಇಡುವ   ವ್ಯಕ್ತಿಯೇ ಹೊಸ ರಾಷ್ಟ್ರಪತಿ ಆಗಬೇಕು. ಏಕೆಂದರೆ ಆ ಸ್ಥಾನ ಇಡೀ ದೇಶದ ಸಂಕೇತ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೂಡ ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸುಮಾರು 18 ಸಾವಿರ ಮತಗಳ ಕೊರತೆಯಿದೆ. ಆದರೆ  ಒಂದೆರಡು ಪ್ರಾದೇಶಿಕ ಪಕ್ಷಗಳ ಬೆಂಬಲವೂ ಅದಕ್ಕೆ  ಸಿಕ್ಕಿರುವುದರಿಂದ, ಪ್ರತಿಪಕ್ಷಗಳಿಗೆ ಹೋಲಿಸಿದರೆ ಅದು ಸಾಕಷ್ಟು ಮುಂದಿದೆ.

ಅಧಿಕಾರ ನಡೆಸುತ್ತಿರುವ ಪಕ್ಷವಾದ ಕಾರಣ ಒಮ್ಮತ ಮೂಡಿಸುವ ಮತ್ತು ಆ ಹುದ್ದೆಯ ಗಾಂಭೀರ್ಯವನ್ನು ಕಾಪಾಡುವಂಥ ಅಭ್ಯರ್ಥಿಯನ್ನು ಹುಡುಕುವ ಹೊಣೆ ಅದರ ಮೇಲೇ ಹೆಚ್ಚಿದೆ. ಅದಕ್ಕೆ ಪೂರಕವಾಗಿ ಬಿಜೆಪಿ ರಚಿಸಿರುವ ಮೂವರು ಹಿರಿಯ ಸಚಿವರ ಸಮಿತಿಯು ವಿರೋಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡುತ್ತಿದೆ. ಇದರ ಫಲಶ್ರುತಿ ಏನೇ ಇರಲಿ, ಯಾರೇ ಅಭ್ಯರ್ಥಿ ಆಗಲಿ ಇದುವರೆಗಿನ ಸತ್‌ಪರಂಪರೆಗಳಿಗೆ ಎಳ್ಳಷ್ಟೂ ಧಕ್ಕೆ ಆಗಬಾರದು.

ಇಂತಹ ವಿಷಯಗಳಲ್ಲಿ ಎಲ್ಲರೂ ರಾಜಕೀಯವನ್ನು ಬದಿಗಿಟ್ಟು ವಿಶಾಲ ಮನಸ್ಸಿನಿಂದ ದೇಶಕ್ಕೆ ಒಳಿತಾಗುವ ತೀರ್ಮಾನಕ್ಕೆ ಬರಬೇಕು. ರಾಷ್ಟ್ರಪತಿ ಚುನಾವಣೆಯ ಪಾವಿತ್ರ್ಯ ಕಾಪಾಡುವುದು ಮತ್ತು ಹುದ್ದೆಯ ಗೌರವ ಹೆಚ್ಚಿಸುವುದು ಎಲ್ಲರ ಕರ್ತವ್ಯ. ಏಕೆಂದರೆ ನಮ್ಮ ಜನತಂತ್ರದ ಹಿತ ಅದರಲ್ಲಿ ಅಡಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry