ಮತ್ತೆ ಆರಂಭವಾದ ಕಾಮಗಾರಿ

7
ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಹೆಣ್ಣೂರು ಮೇಲ್ಸೇತುವೆ ನಿರ್ಮಾಣ ಕೆಲಸ

ಮತ್ತೆ ಆರಂಭವಾದ ಕಾಮಗಾರಿ

Published:
Updated:
ಮತ್ತೆ ಆರಂಭವಾದ ಕಾಮಗಾರಿ

ಬೆಂಗಳೂರು: ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಹೆಣ್ಣೂರು ಮೇಲ್ಸೇತುವೆ ಕಾಮಗಾರಿ ಜೂನ್‌ 13ರಿಂದ ಪುನರಾರಂಭಗೊಂಡಿದೆ.  ಈ ಕಾಮಗಾರಿ ಐದೂವರೆ ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ.

ಮೇಲ್ಸೇತುವೆಯ ರ‍್ಯಾಂಪ್ ಗಳ ನಿರ್ಮಾಣಕ್ಕೆ ಅಗತ್ಯವಾದ 39 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳುವಲ್ಲಿ ಉಂಟಾಗಿದ್ದ ಗೊಂದಲ, ರಸ್ತೆ ಬದಿಯಲ್ಲಿದ್ದ ವೀರಾಂಜನೇಯ ದೇವಸ್ಥಾನದ ಸ್ಥಳಾಂತರ ಮತ್ತು ಇಲ್ಲಿ ಹಾದುಹೋಗಿರುವ ಹೈಟೆನ್ಷನ್‌ ವಿದ್ಯುತ್ ಮಾರ್ಗ ಎತ್ತರಿಸುವ ಕೆಲಸಗಳಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಎಲ್ಲ ಸಮಸ್ಯೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಗೆಹರಿಸಿಕೊಂಡಿದೆ.

ಬಾಕಿ ಉಳಿದಿರುವ ಕೆಲಸ: 600 ಮೀ. ಉದ್ದದ ಈ ಸೇತುವೆಯ ರ‍್ಯಾಂಪ್ ಹಾಗೂ ರಸ್ತೆ ವಿಭಜಕ ನಿರ್ಮಾಣ,  ರಸ್ತೆಯ ಡಾಂಬರೀಕರಣ, ವಿದ್ಯುತ್‌ ದೀಪಗಳ ಅಳವಡಿಕೆ ಮತ್ತು ಸುಣ್ಣ–ಬಣ್ಣ ಬಳಿಯುವ ಕೆಲಸಗಳು ಇನ್ನೂ ಆಗಬೇಕಿದೆ.

‘ಬೃಹತ್‌ ಯೋಜನೆಗಳ ಕಾಮಗಾರಿ ಆರಂಭಿಸುವ ಮುನ್ನವೇ ಭೂಸ್ವಾಧೀನ ಮಾಡಬೇಕು.  ಅಗತ್ಯ ಅನುದಾನವನ್ನು ಮೀಸಲಿಡಬೇಕು. ಆಗ ಕಾಮಗಾರಿಗಳು  ಗಡುವಿನೊಳಗೆ ಮುಗಿಯುತ್ತವೆ. ಇಲ್ಲದಿದ್ದರೆ, ಜನರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ನಗರ ಸಾರಿಗೆ ತಜ್ಞ ಎಂ.ಎನ್‌. ಶ್ರೀಹರಿ.

‘ಸಂಚಾರ ದಟ್ಟಣೆಗೆ ಮುಕ್ತಿ ಕಲ್ಪಿಸಿ’: ‘ಇಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 5.30 ರಿಂದ ರಾತ್ರಿ 8.30 ರವರೆಗೆ  ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸೇತುವೆ ಜನಬಳಕೆಗೆ ಮುಕ್ತವಾದಾಗಲೇ ಈ ಸಮಸ್ಯೆಯಿಂದ  ಮುಕ್ತಿ ಸಿಗಲಿದೆ’ ಎನ್ನುತ್ತಾರೆ ಆಟೊ ಚಾಲಕ ಸತೀಶ್‌.

ಮೇಲ್ಸೇತುವೆಯ ಕೆಳಗೆ ಕಾಚರಕನಹಳ್ಳಿಯಿಂದ ಹೆಣ್ಣೂರು ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಿದೆ. ಈ ಮಾರ್ಗ ಬದಿಯ ಟೀಚರ್‌್ಸ ಅಕಾಡೆಮಿ ಕಾಲೇಜು ಹಾಗೂ ಹತ್ತಾರು ವಾಣಿಜ್ಯ  ಮಳಿಗೆಗಳಿವೆ. ಇಲ್ಲಿ ಜನರು ರಸ್ತೆಯಲ್ಲಿಯೇ  ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಬಿಎಂಟಿಸಿಯ ಡಿಪೊ (ಘಟಕ–10) ಇದೆ. ಬೆಳಗಿನ ಪಾಳಿ ಮುಗಿದ ಬಳಿಕ ಬಿಎಂಟಿಸಿ ಬಸ್‌ಗಳನ್ನು ಮಧ್ಯಾಹ್ನ 3ರವರೆಗೆ ಸೇತುವೆಯ ಕೆಳಭಾಗದಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನಗಳ ಸರಾಗ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

‘ಸಂಚಾರ ದಟ್ಟಣೆ ತಗ್ಗಿಸಲು ಉಕ್ಕಿನ ಸೇತುವೆ ಕಟ್ಟುತ್ತೇವೆ, ನಗರದ ನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ ಎತ್ತರಿಸಿದ ಮಾರ್ಗ ನಿರ್ಮಿಸುತ್ತೇವೆ, ಸುರಂಗ ಮಾರ್ಗ ಕೊರೆಯುತ್ತೇವೆಂದು   ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಹೇಳುತ್ತಾರೆ.  ಅವರೇ ಪ್ರತಿನಿಧಿಸುವ (ಸರ್ವಜ್ಞ ನಗರ) ವಿಧಾನ ಸಭಾಕ್ಷೇತ್ರದಲ್ಲಿನ ಈ ಸೇತುವೆಯ ಕಾಮಗಾರಿಯನ್ನು ಮೊದಲು ಪೂರ್ಣಗೊಳಿಸಲಿ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್‌ ಹೇಳಿದರು.

ಹುಸಿಯಾದ ಭರವಸೆಗಳು: ಬಿಡಿಎ ಸೇತುವೆ ಕಾಮಗಾರಿಯನ್ನು 2011 ರಲ್ಲಿ ಆರಂಭಿಸಿತ್ತು. ಬಳಿಕ ಹಲವಾರು ಕಾರಣಗಳಿಂದ ಕೆಲಸ ಅರ್ಧಕ್ಕೆ ನಿಂತಿತ್ತು. 2016ರ ಜೂನ್‌ 28 ರಂದು ಕೆ.ಜೆ.ಜಾರ್ಜ್‌ ಅವರು ಕಾಮಗಾರಿಗೆ ಮರುಚಾಲನೆ ನೀಡಿ, ‘2016ರ ನವೆಂಬರ್‌ ಅಂತ್ಯಕ್ಕೆ ಕಾಮಗಾರಿ ಮುಗಿಸುತ್ತೇವೆ’ ಎಂದು ಭರವಸೆ ನೀಡಿದ್ದರು.

‘ಮೇಲ್ಸೇತುವೆ ಇರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಆಗಬಾರದೆಂದು ರ್‌್ಯಾಂಪ್‌ನ ಕಾಂಕ್ರೀಟ್‌ ರಚನೆಗಳನ್ನು ಬೇರೆ ಕಡೆ ನಿರ್ಮಿಸಿ, ತಂದು ಜೋಡಿಸುತ್ತೇವೆ. 2017ರ ಮಾರ್ಚ್‌ ತಿಂಗಳಿನಲ್ಲಿ ಮೇಲ್ಸೇತುವೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ’ ಎಂದು ಈ ಹಿಂದಿನ ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ  2016ರ ಜುಲೈನಲ್ಲಿ ಭರವಸೆ ನೀಡಿದ್ದರು.

***

‘ಮೂರು ತಿಂಗಳಿನಲ್ಲಿ ಪೂರ್ಣ’

‘ಮೇಲ್ಸೇತುವೆ ಕಾಮಗಾರಿಗೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಜೂನ್‌ 13 ರಿಂದ ಕಾಮಗಾರಿಯನ್ನು ಪುನರಾರಂಭ ಮಾಡಿದ್ದೇವೆ. ಮೂರು ತಿಂಗಳುಗಳ ಒಳಗಾಗಿ ಕಾಮಗಾರಿ ಮುಗಿಸಿ, ಸೇತುವೆಯನ್ನು ಜನಬಳಕೆಗೆ ಮುಕ್ತಗೊಳಿಸುತ್ತೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್‌.ನಾಯಕ್‌  ತಿಳಿಸಿದರು.

ಹೆಣ್ಣೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry