ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ.ಜಿಯಿಂದ ಸದನದ ಹಕ್ಕು ಮೊಟಕು’

ವಾಸಿಸುವವನೆ ನೆಲದೊಡೆಯ ಮಸೂದೆ ವಿವಾದ
Last Updated 15 ಜೂನ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಸಿಸುವವರಿಗೆ ಮನೆಯ ಒಡೆತನ ಮಸೂದೆಗೆ ರಾಷ್ಟ್ರಪತಿ ಅವರ ಅನುಮೋದನೆ ಪಡೆಯಬೇಕು ಎಂಬ ಅಭಿಪ್ರಾಯ ನೀಡಿರುವ ಅಡ್ವೊಕೇಟ್ ಜನರಲ್‌ ಅವರು ಸದನದ ಹಕ್ಕು ಮೊಟಕು ಮಾಡಿದ್ದಾರೆ’ ಎಂದು ಬಿಎಸ್‌ಆರ್‌ ಕಾಂಗ್ರೆಸ್‌ನ ಪಿ.ರಾಜೀವ್ ಆರೋಪಿಸಿದರು.

ಇಲಾಖಾವಾರು ಬೇಡಿಕೆಗಳ ಮೇಲೆ ಗುರುವಾರ ಮಾತನಾಡಿದ ಅವರು, ‘ರಾಷ್ಟ್ರಪತಿ ಒಪ್ಪಿಗೆ ಪಡೆದು ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೆ ತರಲಾಗಿದೆ. ಅದಕ್ಕೆ ತಂದ ಸಣ್ಣ ಪುಟ್ಟ ತಿದ್ದುಪಡಿಯನ್ನು ಮತ್ತೆ ರಾಷ್ಟ್ರಪತಿಗೆ ಕಳುಹಿಸುವ ಅವಶ್ಯಕತೆ ಇರಲಿಲ್ಲ. ಸಂಸದೀಯ ಇಲಾಖೆಯ ಕಾರ್ಯದರ್ಶಿ ಹಾಗೂ ಅಡ್ವೊಕೇಟ್  ಜನರಲ್‌ ಅವರು ಈ ಸದನಕ್ಕೆ ಅವಮಾನ ಮಾಡಿದ್ದಾರೆ. ಇದರಿಂದಾಗಿ ಭೂ ಮಾಫಿಯಾದ ಒತ್ತಡಕ್ಕೆ ಸರ್ಕಾರ ಮಣಿದಂತಾಗಿದೆ’ ಎಂದು ಆಕ್ರೋಶದಿಂದ ಹೇಳಿದರು.

‘ನೂರಾರು ವರ್ಷಗಳಿಂದ ಸರ್ಕಾರಿ ಅಥವಾ ಖಾಸಗಿ ಮಾಲೀಕತ್ವದ ಬೀಳು ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವ ಮಹತ್ವದ ಮಸೂದೆಯನ್ನು ಸದನ ಅಂಗೀಕರಿಸಿದೆ. ರಾಷ್ಟ್ರಪತಿಗಳಿಗೆ ಕಳುಹಿಸಿದ್ದರಿಂದಾಗಿ ತಾಂಡಾ, ಮಜಿರೆ, ಹಟ್ಟಿ, ಹಾಡಿ, ಕ್ಯಾಂಪ್‌, ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ಸಿಗುವುದೇ ಅನುಮಾನವಾಗಿದೆ’ ಎಂದು ಹೇಳಿದರು.

‘ಈ ಎಲ್ಲ ಸಮುದಾಯಗಳು ವಾಸಿಸುತ್ತಿರುವ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.


ಕಾಗೋಡು ತಿಮ್ಮಪ್ಪ

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ‘ಕೆಲವು ಮಹತ್ವದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಬೇಕಾಗುತ್ತದೆ. ಹಾಗಂತ ಇದನ್ನು ನನ್ನ ಇಲಾಖೆ ಕಳುಹಿಸಿಲ್ಲ. ಸಂಸದೀಯ ಇಲಾಖೆ ಕಳುಹಿಸಿದೆ. ಈ ಸಂಬಂಧ ಸದ್ಯವೇ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮಸೂದೆಗೆ ಅನುಮೋದನೆ ಪಡೆಯುತ್ತೇನೆ. ಕಾಯ್ದೆ ಜಾರಿಗೊಳಿಸುವುದು ನನ್ನ ಜವಾಬ್ದಾರಿ’ ಎಂದು ಅವರು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT