ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಪ್ರಜಾಪ್ರಭುತ್ವದ ಹೈಜಾಕ್‌

ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಗುಡುಗು
Last Updated 15 ಜೂನ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು:  ‘ರಾಜ್ಯದ ಭೂಮಿ ಹಾಗೂ ವಸತಿ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತರು ಸ್ವಾತಂತ್ರ್ಯ ಉದ್ಯಾನದ ಬಳಿ ಸೇರಿ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಮಾತನಾಡಿ, ‘ಗೌರವದಿಂದ ಜೀವಿಸಲು ಸಿಗಬೇಕಾದ ಸಂವಿಧಾನಾತ್ಮಕ ಹಕ್ಕು ಬಡಜನರಿಗೆ ಸಿಗುತ್ತಿಲ್ಲ. ಜನರಿಂದ ಆಯ್ಕೆಯಾದ ಶಾಸಕರು, ಅವರ ಹಿತ ಕಾಯದೇ ಭೂ ಮಾಫಿಯಾದವರ ಪರ ನಿಲ್ಲುತ್ತಿದ್ದಾರೆ. ಇಡೀ ರಾಜ್ಯ ಸರ್ಕಾರವೇ ಪ್ರಜಾಪ್ರಭುತ್ವವನ್ನು ಹೈಜಾಕ್‌ ಮಾಡಿದೆ’ ಎಂದು ಗುಡುಗಿದರು.

‘ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯವನ್ನು ಅನುಷ್ಠಾನ ತರುವುದಕ್ಕಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದೇವೆ. ಆದರೆ, ಅವರು ಮಾಡುತ್ತಿರುವುದೇ ಬೇರೆ. ಅಂದು ಬ್ರಿಟಿಷರ ವಿರುದ್ಧ ಹೋರಾಡಿ ಹೊರಹಾಕಿದ್ದೆವು. ಈಗ ಸರ್ಕಾರದ ವಿರುದ್ಧ ಹೋರಾಡಿ ಹೊರಹಾಕಲು ಎರಡನೇ ಸ್ವಾತಂತ್ರ್ಯ ಹೋರಾಟ ಅಗತ್ಯವಿದೆ’ ಎಂದು ಹೇಳಿದರು. 

‘ಇಂದಿನ ಪರಿಸ್ಥಿತಿಯಲ್ಲಿ ಆರ್ಥಿಕ, ಹಾಗೂ ಸಾಮಾಜಿಕವಾಗಿ ಸಮಾನತೆ ಬರದಿದ್ದರೆ ಮುಂಬರುವ ದಿನಗಳಲ್ಲಿ ರಾಜಕೀಯ ಹಕ್ಕಿಗೆ ಕಂಟಕ ಬರಲಿದೆ. ಹೀಗಾಗಿ ಸರ್ಕಾರವು ವಸತಿ ವಂಚಿತರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಂದಾಯ ಸಚಿವರಿಗೆ ಪ್ರಾಣಾಪಾಯ?: ಲೇಖಕಿ ಡಾ. ವಿಜಯಾ ಮಾತನಾಡಿ, ‘ಈ ಹಿಂದೆ ನಡೆದಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅದನ್ನು ಇದುವರೆಗೂ ಈಡೇರಿಸಿಲ್ಲ’ ಎಂದರು.

‘ರಾಜ್ಯ ಸರ್ಕಾರದಲ್ಲಿ ಗೋಲ್‌ಮಾಲ್‌ಗಳು ನಡೆಯುತ್ತಿವೆ. ಹಲವು ಶಾಸಕರು ಭೂ ಮಾಫಿಯಾದಲ್ಲಿದ್ದಾರೆ. ಅಂಥವರಿಂದ ತಿಮ್ಮಪ್ಪ ಅವರಿಗೂ ಪ್ರಾಣಾಪಾಯ ಇರಬಹುದು. ಅದಕ್ಕೆ ಅವರು ಭೂ ಮತ್ತು ವಸತಿ ಸಮಸ್ಯೆ ಈಡೇರಿಸಲು ಹಿಂಜರಿಯುತ್ತಿದ್ದಾರೆ’ ಎಂದು ದೂರಿದರು.

ಕಳೆದ ಪ್ರತಿಭಟನೆ ವೇಳೆ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದ ಸಚಿವ ಕಾಗೋಡು ತಿಮ್ಮಪ್ಪ ಅವರ ಭಾಷಣದ ವಿಡಿಯೊವನ್ನು ಪ್ರದರ್ಶಿಸಲಾಯಿತು. ಅದನ್ನು ವೀಕ್ಷಿಸಿದ ಪ್ರತಿಭಟನಾಕಾರರು, ‘ಕೊಟ್ಟ ಮಾತು ತಪ್ಪದಿರಿ, ಜನತೆಗೆ ದ್ರೋಹ ಮಾಡದಿರಿ’ ಎಂಬ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಇದ್ದರು. ಇದೇ ವೇಳೆ ರಾಜ್ಯದ ಎಲ್ಲ ಶಾಸಕರಿಗೆ ಮನವಿ ಪತ್ರ ಕಳುಹಿಸಲಾಯಿತು.

***
ಬೇಡಿಕೆಗಳು

* ಭೂಮಿ ಮತ್ತು ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು  ಉನ್ನತ ಅಧಿಕಾರಿಗಳ ಸಮಿತಿ ರಚಿಸಬೇಕು. ಹೋರಾಟಗಾರರನ್ನು ಅದರ ಸದಸ್ಯರನ್ನಾಗಿ ನೇಮಕ ಮಾಡಬೇಕು
* ಬಡಜನರ ಭೂಮಿ– ವಸತಿ ಸಂಬಂಧಿತ ಪ್ರಕರಣಗಳನ್ನು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು
* ಹಕ್ಕಿಗಾಗಿ ಹೋರಾಟ ಮಾಡಿದವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT