ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಪಿ ಪಿಸ್ತೂಲ್ ಐಪಿಎಸ್ ಅಧಿಕಾರಿ ಸೂಟ್‌ಕೇಸ್‌ನಲ್ಲಿ ಪತ್ತೆ!

Last Updated 15 ಜೂನ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ಡಿಜಿಪಿ ಅಜಯ್‌ಕುಮಾರ್ ಸಿಂಗ್ ಅವರ ‘ಪಾಯಿಂಟ್ 9 ಎಂಎಂ’ ಸರ್ವಿಸ್ ಪಿಸ್ತೂಲ್‌ ನಾಪತ್ತೆಯಾದ ಪ್ರಕರಣಕ್ಕೆ ಎರಡು ದಶಕಗಳ ಬಳಿಕ ಅಂತಿಮ ತೆರೆ ಬಿದ್ದಿದೆ. ಸೋಜಿಗವೆಂದರೆ, ಅದು ನಿವೃತ್ತ ಐಪಿಎಸ್ ಅಧಿಕಾರಿ ದಿವಂಗತ ಎಸ್‌.ಭಾಸ್ಕರ್‌ರಾವ್ ಅವರ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ.

ಭಾಸ್ಕರ್‌ರಾವ್ ನಿಧನದ ನಂತರ ಕುಟುಂಬ ಸದಸ್ಯರು ಅವರ ಕೋಣೆಯನ್ನು ಸ್ವಚ್ಛಗೊಳಿಸುವಾಗ ಸೂಟ್‌ಕೇಸ್‌ನಲ್ಲಿ ಆ ಪಿಸ್ತೂಲ್ ಸಿಕ್ಕಿದೆ. ಅವರ ಕುಟುಂಬದವರು 2016ರ ಫೆಬ್ರುವರಿಯಲ್ಲೇ ಅದನ್ನು ಬೆಂಗಳೂರು ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರೂ, ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು ಇಷ್ಟು ದಿನ ‘ಪಿಸ್ತೂಲ್ ಸಿಕ್ಕಿಲ್ಲ’ ಎಂದೇ ಹೇಳುತ್ತಿದ್ದರು.


ಭಾಸ್ಕರ್ ರಾವ್

‘2015ರಲ್ಲಿ ಭಾಸ್ಕರ್‌ರಾವ್ ನಿಧನರಾದರು. ಅವರ ಮನೆಯಲ್ಲಿ ಪಾಯಿಂಟ್ 9ಎಂಎಂ ಪಿಸ್ತೂಲ್, ಒಂದು ಮ್ಯಾಗ್‌ಜಿನ್, ಪಾಯಿಂಟ್ 38 ಕ್ಯಾಲಿಬರ್‌ ಪಿಸ್ತೂಲ್‌ನ 19 ಜೀವಂತ ಗುಂಡುಗಳು ಸಿಕ್ಕವು. ಆದರೆ, ಇನ್ನೊಂದು ಮ್ಯಾಗಜಿನ್ ಹಾಗೂ 9ಎಂಎಂ ಪಿಸ್ತೂಲ್‌ನ ಮೂರು ಗುಂಡುಗಳು ಪತ್ತೆಯಾಗಲಿಲ್ಲ. ಅವು ಏನಾದವು ಎಂಬ ಬಗ್ಗೆ ನಮಗೂ ಮಾಹಿತಿ ಇಲ್ಲ’ ಎಂದು ನಗರ ಸಶಸ್ತ್ರ ಪಡೆಯ (ಸಿಎಆರ್) ಅಧಿಕಾರಿಯೊಬ್ಬರು ಹೇಳಿದರು.

1990ರಲ್ಲಿ ಪಡೆದಿದ್ದರು: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಎಲ್ಲ ಐಪಿಎಸ್ ಅಧಿಕಾರಿಗಳಿಗೂ ಸಿಎಆರ್‌ನಿಂದ ಸರ್ವೀಸ್ ಪಿಸ್ತೂಲ್ ನೀಡಲಾಗುತ್ತದೆ. ಅಂತೆಯೇ 1990ರಲ್ಲಿ ಗುಪ್ತಚರ ವಿಭಾಗದ ಡಿಐಜಿಯಾಗಿದ್ದ ಅಜಯ್‌ಕುಮಾರ್ ಸಿಂಗ್, ಸಿಎಆರ್‌ನಿಂದ ಪಿಸ್ತೂಲ್ ಪಡೆದುಕೊಂಡಿದ್ದರು. ಅದು ಶಸ್ತ್ರಾಗಾರದ ದಾಖಲಾತಿ ಪುಸ್ತಕದಲ್ಲೂ ನೋಂದಣಿ ಆಗಿತ್ತು.

2002ರಲ್ಲಿ ಅವರು ಬಡ್ತಿ ಪಡೆದು ಬೇರೆಡೆ ವರ್ಗವಾದರು. ಆಗ ಪಿಸ್ತೂಲನ್ನು ಮರಳಿಸುವಂತೆ ಶಸ್ತ್ರಾಗಾರದ ಅಧಿಕಾರಿಗಳು ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಅಜಯ್‌ಕುಮಾರ್ ಸಿಂಗ್, ‘ಪಿಸ್ತೂಲನ್ನು ರಿಪೇರಿ (ಸರ್ವಿಸ್) ಸಲುವಾಗಿ ಸಿಎಆರ್ ಸಿಬ್ಬಂದಿ ಪಡೆದಿದ್ದರು. ಅವರು ನನಗೆ ಮರಳಿಸಿಲ್ಲ’ ಎಂದಿದ್ದರು. ಇದೇ ವಿಚಾರವಾಗಿ ಅವರು ಕ್ರಮವಾಗಿ 2002, 2010 ಹಾಗೂ 2011ರಲ್ಲಿ ಅವರು ಸಿಎಆರ್ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಿದ್ದರು ಎನ್ನಲಾಗಿದೆ.

ಕಮಿಷನರ್‌ಗೆ ಪತ್ರ: 2009 ರಿಂದ  2011ರ ಅವಧಿಯಲ್ಲಿ ಅವರು ಡಿಜಿ–ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದರು. ಸೇವೆಯಿಂದ ನಿವೃತ್ತಿ ಹೊಂದು
ವುದಕ್ಕೂ ಕೆಲ ದಿನಗಳ  ಮುನ್ನ ಪಿಸ್ತೂಲ್ ನಾಪತ್ತೆ ವಿಷಯ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಆಗ ಅಜಯ್‌ಕುಮಾರ್ ಸಿಂಗ್ ಅವರು, ಇದೇ ವಿಷಯವಾಗಿ ಅಂದಿನ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದರು.

‘ನಾನು ಪಿಸ್ತೂಲನ್ನು ಸರ್ವಿಸ್‌ಗಾಗಿ ಸಿಎಆರ್‌ಗೆ ಕೊಟ್ಟಿದ್ದೆ. ಆದರೆ, ನಾನು ಮರಳಿಸಿಲ್ಲವೆಂದು ಅವರು ಹೇಳುತ್ತಿದ್ದಾರೆ. ಶಸ್ತ್ರಾಗಾರದ ನೋಂದಣಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಅವರು ನಿರ್ಲಕ್ಷ್ಯ ತೋರಿರುವ ಸಾಧ್ಯತೆ ಇದೆ. ಈಗ ನಿವೃತ್ತಿ ಅಂಚಿನಲ್ಲಿರುವ ನಾನು, ಕಾನೂನು ಹೋರಾಟ ಮಾಡಲು ಸಿದ್ಧನಿಲ್ಲ. ಹೀಗಾಗಿ, ಪಿಸ್ತೂಲಿನ ಮೌಲ್ಯವನ್ನು ನಾನೇ ಪಾವತಿಸುತ್ತೇನೆ’ ಎಂದು ತಮ್ಮ ಸಂಬಳದಿಂದ ₹ 10,132  ಕಟ್ಟಿದ್ದರು.

ಆ ನಂತರ ಕಮಿಷನರ್  ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 2011ರ ಜ.31ರಂದು ಅಜಯ್‌ಕುಮಾರ್ ಸಿಂಗ್ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಆ ನಂತರ ಪ್ರಕರಣ ಮರೆಯಾಗಿ ಹೋಗಿತ್ತು.

ಭಾಸ್ಕರ್‌ರಾವ್ ನಿಧನದ ನಂತರ ಅವರ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 9ಎಂಎಂ ಪಿಸ್ತೂಲ್‌ನ ಸರಣಿ ಸಂಖ್ಯೆಯನ್ನು (T–350373) ಪರಿಶೀಲಿಸಿದಾಗ, ಅದು ಅಜಯ್‌ಕುಮಾರ್ ಅವರ ನಾಪತ್ತೆಯಾಗಿದ್ದ ಪಿಸ್ತೂಲ್ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಜಯ್‌ಕುಮಾರ್ ಸಿಂಗ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಉತ್ತರ ಸಿಗಬೇಕಿತ್ತು: ‘ಪಿಸ್ತೂಲ್ ಹೇಗೆ ನಾಪತ್ತೆಯಾಯಿತು, ಅದು ಹೇಗೆ ಭಾಸ್ಕರ್ ರಾವ್ ಅವರ ಮನೆಯಲ್ಲಿ ಪತ್ತೆಯಾಯಿತು, ಪಿಸ್ತೂಲ್ ಸಿಕ್ಕಿರುವ ವಿಷಯವನ್ನು ಬೆಂಗಳೂರು ಪೊಲೀಸರು ಮುಚ್ಚಿಟ್ಟಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಈ ಬಗ್ಗೆ ಇಲಾಖಾ ತನಿಖೆ ನಡೆಸುವುದು ಸೂಕ್ತ. ಆದರೆ, ಭಾಸ್ಕರ್‌ರಾವ್ ನಿಧನರಾಗಿದ್ದಾರೆ. ಅಜಯ್‌ಕುಮಾರ್ ಸಿಂಗ್ ಸಹ ನಿವೃತ್ತರಾಗಿದ್ದಾರೆ. ಹೀಗಾಗಿ, ಪ್ರಕರಣವನ್ನು ಹೆಚ್ಚಿನ ತನಿಖೆಗೆ ವಹಿಸುವ
ಸಾಧ್ಯತೆ ಕಡಿಮೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸಿಕ್ಕಿಲ್ಲ ಎಂದಿದ್ದ ಅಧಿಕಾರಿಗಳು
ಸಹ ಸಿಬ್ಬಂದಿಯ ಪಿಸ್ತೂಲ್‌ ಕದ್ದಿದ್ದ ಆರೋಪದ ಮೇಲೆ ಇದೇ ಫೆಬ್ರುವರಿಯಲ್ಲಿ ಸಿಎಆರ್‌ ಹೆಡ್‌ಕಾನ್‌ಸ್ಟೆಬಲ್ ಪುರುಷೋತ್ತಮ್ ಎಂಬುವರನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಅಜಯ್‌ಕುಮಾರ್ ಸಿಂಗ್ ಅವರ ಪಿಸ್ತೂಲ್ ನಾಪತ್ತೆ ವಿಷಯ ಚರ್ಚೆಗೆ ಬಂದಿತ್ತು. ಅಂದು ಸಹ ಅಧಿಕಾರಿಗಳು, ‘ನಿವೃತ್ತ ಅಧಿಕಾರಿಯ ಪಿಸ್ತೂಲ್ ಸಿಕ್ಕಿಲ್ಲ’ ಎಂದೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT