ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಕೊಳೆಯುತ್ತಿರುವ ಮಾವಿನ ಹಣ್ಣು

Last Updated 16 ಜೂನ್ 2017, 5:07 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಹಣ್ಣು ಕೊಳೆತು ನಾರುತ್ತಿದೆ. ವಿಶೇಷವಾಗಿ ತೋತಾಪುರಿ ಮಾವಿನ ಕಾಯಿಗೆ ಹೆಚ್ಚು ಹಾನಿಯಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಕಾಯಿ ಬೆಲೆ ಕಡಿಮೆಯಾಗಿದೆ. ಅದರಲ್ಲೂ ಜ್ಯೂಸ್‌ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಮಾವಿನ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಈಗ ಟನ್‌ಗೆ ₹ 12 ಸಾವಿರದಂತೆ ಮಾರಾಟವಾಗುತ್ತಿದೆ. ಈ ಹಿಂದೆ ಇಷ್ಟು ಬೆಲೆಯೂ ಇರಲಿಲ್ಲ. ಬೆಲೆ ಕಡಿಮೆ ಇದ್ದಾಗ ಕಾಯಿ ಕೊಯ್ಲು ಮಾಡಲು ಇಷ್ಟಪಡದ ಬೆಳೆಗಾರರು, ಕಾದು ನೋಡುವ ತಂತ್ರವಾಗಿ ಕಾಯಿ ಕೀಳದೆ ಬಿಟ್ಟಿದ್ದಾರೆ. ಇದರಿಂದ ಕೊಳೆತು ನಾರುತ್ತಿದೆ.

ಮಾವಿನ ತೋಟದ ಅಂಚಿಗೆ ಹೋದರೆ ಕೊಳೆತ ಮಾವಿನ ವಾಸನೆ ಮೂಗಿಗೆ ಬಡಿಯುತ್ತದೆ. ಮರಗಳ ಕೆಳಗೆ ನೊಡಿದರೆ ಕೊಳೆತು ಉದುರಿದ ಮಾವಿನ ಕಾಯಿ ಕಾಣಿಸುತ್ತದೆ. ಊಜಿ ನೊಣದ ಹಾವಳಿ ಹೆಚ್ಚಿದ ಪರಿಣಾಮವಾಗಿ ಬಹಳಷ್ಟು ಕಾಯಿ ಕೊಳೆಯುತ್ತಿದೆ. ತೋತಾಪುರಿ ಮಾತ್ರವಲ್ಲದೆ. ದೀರ್ಘಾವಧಿ ತಳಿಗಳಾದ ನೀಲಂ, ನಾಟಿ ಮಾವೂ ಸಹ ಕೊಳೆಯುತ್ತಿದೆ.

ಅದು ಸಾಲದೆಂಬಂತೆ ಕಾಯಿಗೆ ಕಪ್ಪು ಮಚ್ಚೆ ರೋಗ ಹಾಗೂ ಕಾಯಿ ಒಡೆಯುವ ರೋಗ ಕಾಣಿಸಿಕೊಂಡಿದೆ. ಇದರಿಂದಲೂ ಕಾಯಿ ಕೊಳೆಯುತ್ತಿದೆ. ಈಗ ಮಾರುಕಟ್ಟೆಗೆ ಜ್ಯೂಸ್‌ ಕಂಪೆನಿಗಳ ಬಂದಿರುವುದರಿಂದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಉಂಟಾಗಿದೆ. ಇದು ಕಾಯಿ ಕೀಳಲು ಪ್ರೇರೇಪಿಸಿದೆ. ಆದರೆ ಬೆಲೆಯ ಏರಿಳಿತ ಸಾಮಾನ್ಯವಾಗಿದೆ. ಎಲ್ಲ ಕಡೆಗಳಲ್ಲಿ ಕಾಯಿ ಕೀಳುವ ಕೆಲಸ ನಡೆಯುತ್ತಿವೆ. ಇದರಿಂದಾಗಿ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ. ಮಾರುಕಟ್ಟೆಗೆ ಕಾಯಿ ಸಾಗಿಸಲು ಬಾಡಿಗೆ ಟ್ರ್ಯಾಕ್ಟರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

ಮಾರುಕಟ್ಟೆಗೆ ತೋತಾಪುರಿ ಮಾವಿನಕಾಯಿಯ ಆವಕದಲ್ಲಿ ಹೆಚ್ಚಳವಾಗಿದೆ. ಯಾವ ಮಂಡಿಯಲ್ಲಿ ನೋಡಿದರೂ, ಈ ತಳಿಯ ಮಾವು ಪ್ರಧಾನವಾಗಿ ಕಾಣಿಸುತ್ತದೆ. ಮಂಡಿಗಳಲ್ಲಿ ನೆರೆಯ ಆಂಧ್ರಪ್ರದೇಶದಿಂದ ಬಂದಿರುವ ಕೃಷಿ ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರಿಗೆ ಅಗತ್ಯವಾದ ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಹಣದ ಕೊರತೆ ಇದೆ. ಬರುವ ಆದಾಯದ ಬಹು ಪಾಲು ಹಣವನ್ನು, ಈ ಹಿಂದೆ ಮಾರುಕಟ್ಟೆ ಅಭಿವೃದ್ಧಿಗೆ ಪಡೆಯಲಾಗಿರುವ ಸಾಲದ ಮೇಲಿನ ಬಡ್ಡಿಗೆ ಸರಿಹೋಗುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷೆ ಶ್ಯಾಮಲಾ ಗೋಪಾಲರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

* * 

ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾರುಕಟ್ಟೆ ಜೊತೆಗೆ ಹಣ್ಣಿನ ರಸದ ಕೈಗಾರಿಕೆಗಳಿಗೆ ತೋತಾಪುರಿ ತಳಿ ಬೇಡಿಕೆ ಹೆಚ್ಚಾಗಿತ್ತು. ಈಗ ಕೇಳುವವರೇ ಇಲ್ಲದಂತಾಗಿದೆ
ನರಸಿಂಹಗೌಡ
ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT