ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ತುಳುಕುತ್ತಿರುವ ಮಕ್ಕಳ ಆಸ್ಪತ್ರೆ

Last Updated 16 ಜೂನ್ 2017, 6:07 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಡೆಂಗಿ, ವೈರಾಣು ಜ್ವರ, ಶ್ವಾಸಕೋಶ ಸೋಂಕು ಉಲ್ಬಣಿಸಿರುವುದರಿಂದ ಇಲ್ಲಿನ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ತುರ್ತು ನಿಗಾ ಘಟಕದಲ್ಲಿ ಒಂದೇ ಹಾಸಿಗೆಯಲ್ಲಿ 2–3 ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡುವ ಅನಿವಾರ್ಯ ಎದುರಾಗಿದೆ. ನಿತ್ಯ 35 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ನ್ಯೂಮೋನಿಯಾ ಹಾಗೂ ವಿವಿಧ ಸೋಂಕುಗಳ ಸಮಸ್ಯೆಯಿಂದ ಮೂರೂವರೆ ತಿಂಗಳಿನಲ್ಲಿ 49 ಮಕ್ಕಳು ಸಾವನ್ನಪ್ಪಿವೆ. ಮಾರ್ಚ್‌ನಲ್ಲಿ 19, ಏಪ್ರಿಲ್‌ನಲ್ಲಿ 6, ಮೇನಲ್ಲಿ 16 ಹಾಗೂ ಈ ತಿಂಗಳಲ್ಲಿ ಇದುವರೆಗೆ 8 ಮಕ್ಕಳು ಮೃತಪಟ್ಟಿವೆ. ಆದರೆ, ಡೆಂಗಿಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ವೈದ್ಯರ ಸ್ಪಷ್ಟನೆ.

‘ಸಾಮಾನ್ಯವಾಗಿ 15ರಿಂದ 20 ರೋಗಿಗಳು ಆಸ್ಪತ್ರೆ ದಾಖಲಾಗುತ್ತಾರೆ. ಆದರೆ, ಈಚೆಗೆ ವೈರಾಣು ಜ್ವರದಿಂದ ದಾಖಲಾಗುವ ಸಂಖ್ಯೆ ಹೆಚ್ಚಿದೆ. ಡೆಂಗಿ ಜ್ವರ ಹಾಗೂ ಇತರ ಕಾಯಿಲೆಗಳಿಂದಲೂ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೆರೆಯ ಜಿಲ್ಲೆಗಳಿಂದಲೂ ಬರುತ್ತಿದ್ದಾರೆ. ಹೀಗಾಗಿ, ಬೆಡ್‌ ಕೊರತೆ ಉಂಟಾಗಿದೆ’ ಎಂದು ಆಸ್ಪತ್ರೆ ವೈದ್ಯ ರಾಜೇಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡೆಂಗಿಗೆ ಸಂಬಂಧಿಸಿದಂತೆ ಪ್ರಾರಂಭಿಕ ಹಂತದ ರಕ್ತ ಪರೀಕ್ಷೆಯನ್ನು ಇಲ್ಲಿಯೇ ಮಾಡುತ್ತಿದ್ದೇವೆ. ಎಲಿಸಾ ಪರೀಕ್ಷೆಗೆಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ಸಾಮಾನ್ಯ ಜ್ವರಗಳಿಗೆ ನೀಡುವ ಚಿಕಿತ್ಸೆಯನ್ನೇ ಡೆಂಗಿ ಜ್ವರಕ್ಕೂ ನೀಡುತ್ತೇವೆ. ಅದಕ್ಕೆಂದು ಪ್ರತ್ಯೇಕ ಚಿಕಿತ್ಸೆ ಇಲ್ಲ’ ಎಂದರು.

ಆಸ್ಪತ್ರೆಯಲ್ಲಿ ಒಟ್ಟು 120 ಬೆಡ್‌ಗಳಿವೆ. ಅದರಲ್ಲಿ 30 ಬೆಡ್‌ಗಳು ನವಜಾತ ಶಿಶುಗಳಿಗೆ ಮೀಸಲಾಗಿವೆ. ಇನ್ನುಳಿದ 90 ಬೆಡ್‌ಗಳು ಭರ್ತಿಯಾಗಿವೆ. ಅದರಲ್ಲಿ ತುರ್ತು ನಿಗಾ ಘಟಕದಲ್ಲಿರುವ 20 ಬೆಡ್‌ಗಳೂ ಸೇರಿವೆ. ಒಂದೇ ಬೆಡ್‌ನಲ್ಲಿ 2–3 ಮಕ್ಕಳನ್ನು ಮಲಗಿಸುತ್ತಿರುವುದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಆಸ್ಪತ್ರೆಯಲ್ಲಿ ಸುಮಾರು 120 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಮಗಿರುವುದು ಒಂದೇ ಮಗು. ಆದರೆ, ಇಲ್ಲಿ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿಲ್ಲ. ಡೆಂಗಿ ಜ್ವರ ಇದೆ ಎಂದು ಗೊತ್ತಿದ್ದರೂ ಒಂದೇ ಬೆಡ್‌ನಲ್ಲಿ ಎರಡು ಮಕ್ಕಳನ್ನು ಮಲಗಿಸಿದ್ದಾರೆ. ತುಂಬಾ ಭಯ ವಾಗುತ್ತಿದೆ’ ಎಂದು ಚಾಮರಾಜನಗರ ತಾಲ್ಲೂಕಿನ ಸಾವಿತ್ರಮ್ಮ ಆತಂಕ ವ್ಯಕ್ತಪಡಿಸಿದರು.

ಪರೀಕ್ಷೆ ವಿಳಂಬ; ಜನರಲ್ಲಿ ಆತಂಕ
ಮೈಸೂರು: ಡೆಂಗಿ ಲಕ್ಷಣ ಹೊಂದಿ ರುವ ರೋಗಿಯ ರಕ್ತದ ಮಾದರಿ ಯನ್ನು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪರೀಕ್ಷೆಗಾಗಿ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿ ಸಬೇಕು. ಎಲಿಸಾ ಪರೀಕ್ಷೆಗೆ ಒಳ ಪಡಿ ಸಿದ ಬಳಿಕವಷ್ಟೇ ಡೆಂಗಿ ದೃಢ ಪಡಿಸಿ ಕೊಳ್ಳ ಬೇಕೆಂಬ ಸೂಚನೆ ಇದೆ.

ಎಲಿಸಾ ಪರೀಕ್ಷೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ರುವ ಪ್ರಯೋಗಾಲಯದಲ್ಲಿ ಮಾತ್ರ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧೆ ಡೆಯಿಂದ ಪರೀಕ್ಷೆಗೆ ಮಾದರಿ ಕಳುಹಿ ಸುತ್ತಿದ್ದು ವಿಳಂಬವಾಗುತ್ತಿದೆ. ಇದು ರೋಗಿಗಳು, ಅವರ ಕುಟುಂಬದವ ರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

‘ರಕ್ತ ಮಾದರಿ ಪಡೆದು ನಾಲ್ಕೈದು ದಿನಗಳ ಮೇಲೆ ವರದಿ ನೀಡುತ್ತಿದ್ದಾರೆ. ಇದರಿಂದ ಭಯ ಉಂಟಾಗುತ್ತಿದೆ’ ಎಂದು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರು ತಿಳಿಸಿದರು.

‘ಡೆಂಗಿಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ. ವೈರಾಣು ಜ್ವರಕ್ಕೆ ನೀಡುವ ಚಿಕಿತ್ಸೆಯನ್ನು ಈ ಕಾಯಿಲೆಗೂ ನೀಡಲಾಗುತ್ತದೆ. ರಕ್ತದ ಪರೀಕ್ಷೆ ಪಾಸಿಟಿವ್‌ ಬಂದಾಕ್ಷಣ ಅದಕ್ಕೆ ಪ್ರತ್ಯೇಕ ಚಿಕಿತ್ಸೆ ಇರುವುದಿಲ್ಲ’ ಎಂದು ಜಿಲ್ಲಾ ವೈದ್ಯಾಧಿಕಾರಿ ಬಿ.ಬಸವರಾಜು ತಿಳಿಸಿದರು.

* * 

ಡೆಂಗಿಯಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಮಿದುಳು ಸೋಂಕು, ನ್ಯುಮೋನಿಯ ಹಾಗೂ ಇತರ ಸಮಸ್ಯೆಯಿಂದ ಸಾವನ್ನಪ್ಪಿರಬಹುದು
ಡಾ.ಬಿ.ಬಸವರಾಜು
ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT