ನಗರ ಬದುಕಿನ ಚಿಗುರು–ಒಗರು

7

ನಗರ ಬದುಕಿನ ಚಿಗುರು–ಒಗರು

Published:
Updated:
ನಗರ ಬದುಕಿನ ಚಿಗುರು–ಒಗರು

ನಿರ್ಮಾಪಕರು: ಮಂಜುಳಾ ಸೋಮಶೇಖರ್‌, ರವಿ ಎಂ.

ನಿರ್ದೇಶನ: ಮುರಳಿ ಗುರಪ್ಪ

ತಾರಾಗಣ: ಸೂರಜ್‌ ಗೌಡ, ಶ್ರೀನಗರ ಕಿಟ್ಟಿ, ಸಿದ್ದು, ಕಾವ್ಯಾ ಶೆಟ್ಟಿ

***

‘ಸಿಲಿಕಾನ್‌ ಸಿಟಿ’ ಅಪ್ಪಟ ಮಹಾನಗರದ ಕಥೆ. ಭಾರತದ ಯಾವ ಮಹಾನಗರದಲ್ಲಿ ಬೇಕಾದರೂ ನಡೆಯಬಲ್ಲಂಥದ್ದು. ಆದ್ದರಿಂದಲೇ ಮೂಲದಲ್ಲಿ (ತಮಿಳಿನ ‘ಮೆಟ್ರೊ’) ಚೆನ್ನೈನಲ್ಲಿ ನಡೆಯುವ ಕಥೆ, ಅಲ್ಲಿಗೆ ಹೊಂದಿಕೊಳ್ಳುವಷ್ಟೇ ಸಲೀಸಾಗಿ ‘ಸಿಲಿಕಾನ್‌ ಸಿಟಿ’ ಬೆಂಗಳೂರಿಗೂ ಹೊಂದಿಕೊಳ್ಳುತ್ತದೆ. ಅಪ್ಪಟ ಇಲ್ಲಿಯದೇ ಕಥೆ ಎನ್ನುವಷ್ಟು. ಈ ಆಯ್ಕೆಯ ಜಾಣತನಕ್ಕಾಗಿ ನಿರ್ದೇಶಕರು ಅಭಿನಂದನಾರ್ಹರು.

ನೆರವೇರದ ದುರಾಸೆಗಳನ್ನು ಅಡ್ಡಮಾರ್ಗದಲ್ಲಿ ಈಡೇರಿಸಿಕೊಳ್ಳಲು ಹೋಗುವ ಕೆಳಮಧ್ಯಮವರ್ಗದ ಹುಡುಗ ಕಾರ್ತಿಕ್‌ ಈ ಸಿನಿಮಾದ ಕೇಂದ್ರಬಿಂದು. ಮಮತೆಯ ಮಳೆಗರೆಯುವ ಅಮ್ಮ, ಪ್ರೀತಿಸುತ್ತಲೇ ವಿವೇಕದ ಎಚ್ಚರವನ್ನೂ ನೀಡುವ ಅಪ್ಪ, ಕಷ್ಟಪಟ್ಟು ದುಡಿದು ಸಂಸಾರ ತೂಗಿಸುವ ಅಣ್ಣ ಹೀಗೆ ನೆಮ್ಮದಿಗೆ ಬೇಕಾದ್ದೆಲ್ಲವೂ ಅವನ ಬದುಕಿನಲ್ಲಿದೆ. ಆದರೆ ಅವನಿಗೆ ವೈಭೋಗದ ಸೆಳೆತ. ಈ ಸೆಳೆತಕ್ಕೆ  ಇಂಬುಕೊಡುವ ಗೆಳತಿ. ತನ್ನ ಬದುಕಿನ ಎಲ್ಲ ‘ಇಲ್ಲ’ಗಳಿಗೂ ಹಣದ ಕೊರತೆಯೇ ಕಾರಣ ಎಂದು ಅವನಿಗೆ ಅನ್ನಿಸಿದ ಗಳಿಗೆಯಲ್ಲಿಯೇ, ಅದನ್ನು ಗಳಿಸಿಕೊಳ್ಳಲು ಇರುವ ಅಡ್ಡದಾರಿಗಳೂ ತೆರೆದುಕೊಳ್ಳುತ್ತವೆ.

ಮಧ್ಯಮವರ್ಗದ ಬದುಕು ಮತ್ತು ಮಹಾನಗರಗಳಲ್ಲಿ ವ್ಯಾಪಕವಾಗಿ ನಡೆಯುವ ಸರಗಳ್ಳತನದ ಜಾಲ ಎರಡನ್ನೂ ಹೆಣೆದು ಸಿನಿಮಾ ಕಟ್ಟಲಾಗಿದೆ. ಪ್ರಾಮಾಣಿಕವಾಗಿ ಬದುಕುವ ಅಣ್ಣ ಮತ್ತು ಹಣಕ್ಕಾಗಿ ಹೆತ್ತ ಅಮ್ಮನನ್ನೇ ಕೊಲ್ಲಲೂ ಹೇಸದ ತಮ್ಮ, ಇಬ್ಬರೂ ಮಹಾನಗರದ ಬದುಕಿನ ಎರಡು ಧ್ರುವಗಳಾಗಿ ಕಾಣುತ್ತಾರೆ. ವಿಪರ್ಯಾಸವೆಂದರೆ ಈ ಎರಡೂ ಧ್ರುವಗಳ ಮೂಲ ಒಂದೇ. ಆದರೆ ಬದುಕನ್ನು ಕಟ್ಟಿಕೊಳ್ಳಲು, ಆಮಿಷಗಳನ್ನು ಈಡೇರಿಸಿಕೊಳ್ಳಲು ಆಯ್ದುಕೊಳ್ಳುವ ದಾರಿಗಳು ಮಾತ್ರ ಪೂರ್ತಿ ಬೇರೆ ಬೇರೆ.

ಗೆಳತಿಯ ಆಸೆಯನ್ನು ಈಡೇರಿಸಲು ಸರಗಳ್ಳನಾಗುವ ಕಾರ್ತಿಕ್‌ ಕೊನೆಗೆ ಅವಳನ್ನೇ ನಿರಾಕರಿಸುವುದು, ತಾಯಿಯ ಕೊಲೆಯ ಗುಟ್ಟನ್ನು ಭೇದಿಸಲು ಹೊರಟ ಸಂಜಯ್‌ಗೆ ಸ್ವಂತ ತಮ್ಮನೇ ಎದುರಾಗುವುದು ಇಂಥ ಹಲವು ಸನ್ನಿವೇಶಗಳು ಅಪರಾಧದ ವೈಭವೀಕರಣದ ಆಚೆಗೂ ಅದರ ಹಿಂದಿನ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ.

ಗಟ್ಟಿಯಾದ ಚಿತ್ರಕಥೆ ಮತ್ತು ಪರಿಣಾಮಕಾರಿ ಹಿನ್ನೆಲೆ ಸಂಗೀತ ಈ ಸಿನಿಮಾದ ಮುಖ್ಯಶಕ್ತಿಗಳು. ಮೊದಲರ್ಧ ತುಸು ಹೆಚ್ಚೇ ಸುತ್ತಿ ಬಳಸಿದಂತೆನಿಸಿದರೂ ದ್ವಿತೀಯಾರ್ಧದ ಬಿಗಿತನ ಅದನ್ನು ಮರೆಸುತ್ತದೆ.

ಹಣದ ಬೆನ್ನುಹತ್ತಿ ತನ್ನ ವಿನಾಶವನ್ನು ತಾನೇ ತಂದುಕೊಳ್ಳುವ ಅಮಾಯಕ ಹುಡುಗನ ಪಾತ್ರದಲ್ಲಿ ಸೂರಜ್‌ ಗೌಡ ಅಚ್ಚರಿಪಡುವಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಅಮ್ಮನಿಂದ ತುತ್ತುಣಿಸಿಕೊಳ್ಳುವಾಗಲೂ, ಸರಗಳ್ಳರ ಲೋಕದಲ್ಲಿ ಅಟ್ಟಹಾಸಗೈಯುವಾಗಲೂ ಸೂರಜ್ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ. ಜವಾಬ್ದಾರಿಯುತ ಅಣ್ಣನಾಗಿ ಶ್ರೀನಗರ ಕಿಟ್ಟಿ ತಮ್ಮ ಪಾತ್ರವನ್ನು ಸಮರ್ಥವಾಗಿ ತೂಗಿಸಿದ್ದಾರೆ. ನಾಯಕನ ಸ್ನೇಹಿತನಾಗಿ ಚಿಕ್ಕಣ್ಣ ಸಿಕ್ಕ ಪುಟ್ಟ ಅವಕಾಶದಲ್ಲಿಯೇ ಅಲ್ಲಲ್ಲಿ ಹರಿತ ಸಂಭಾಷಣೆ ಮೂಲಕ ನಗು ಉಕ್ಕಿಸುತ್ತಾರೆ. ಖಳನಟನ ಪಾತ್ರದಲ್ಲಿ ಸಿದ್ದು ಗಮನಸೆಳೆಯುತ್ತಾರೆ.

ನಾಯಕಿ ಕಾವ್ಯಾ ಶೆಟ್ಟಿ ಮತ್ತು ಏಕ್ತಾ ರಾಥೋಡ್‌ ಇಬ್ಬರಿಗೂ ಹೆಚ್ಚಿನ ಕೆಲಸವಿಲ್ಲ. ಮೂಲವನ್ನು ನಕಲು ಮಾಡುವ ಕೆಲಸವನ್ನು ನಿರ್ದೇಶಕ ಮುರಳಿ ಗುರಪ್ಪ ಅಚ್ಚುಕಟ್ಟಾಗಿ ಮಾಡಿದ್ದಾರೆ. ಎಸ್‌. ಚಿನ್ನ ಅವರ ಹಿನ್ನೆಲೆ ಸಂಗೀತ ಮತ್ತು ಶ್ರೀನಿವಾಸ ಅವರ ಛಾಯಾಗ್ರಹಣ ಕಥೆಗೊಂದು ಸಮರ್ಥ ಭಿತ್ತಿ ಒದಗಿಸಿಕೊಟ್ಟಿದೆ. ಅನೂಪ್ ಸೀಳಿನ್‌ ಸಂಯೋಜನೆಯ ಹಾಡುಗಳು ಸಿನಿಮಾಕ್ಕೆ ಹೆಚ್ಚಿನದೇನನ್ನೂ ನೀಡಿಲ್ಲ.

ಇಂದಿನ ಮಹಾನಗರದ ಬದುಕನ್ನು ಶಕ್ತವಾಗಿ ಕಟ್ಟಿಕೊಡುವ ಸಿನಿಮಾಗಳು ಕನ್ನಡದಲ್ಲಿ ತೀರಾ ಎನ್ನುವಷ್ಟು ಅಪರೂಪ. ‘ಸಿಲಿಕಾನ್‌ ಸಿಟಿ’ ಈ ಕೊರತೆಯನ್ನು ಸ್ವಲ್ಪ ಅತಿಶಯದ ಧಾಟಿಯಲ್ಲಿ ತುಂಬುವ ಪ್ರಯತ್ನ ಎನ್ನಬಹುದು. ಆದರೆ ಇಂಥದ್ದೊಂದು ಪ್ರಯತ್ನಕ್ಕೆ ಒದಗಿಬಂದಿದ್ದು ರಿಮೇಕ್‌ ಸಿನಿಮಾ ಎನ್ನುವುದು ಮಾತ್ರ ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry