ಸತ್ಯಕ್ಕೆ ಸಂಕೋಲೆ; ಸುಳ್ಳಿನ ಸಂಭ್ರಮ

7

ಸತ್ಯಕ್ಕೆ ಸಂಕೋಲೆ; ಸುಳ್ಳಿನ ಸಂಭ್ರಮ

Published:
Updated:
ಸತ್ಯಕ್ಕೆ ಸಂಕೋಲೆ; ಸುಳ್ಳಿನ ಸಂಭ್ರಮ

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲೇ ಅಹಮದಾಬಾದ್‌ನಲ್ಲಿ ಭಯಾನಕ ಜೀಕಾ ವೈರಸ್‌ರೋಗ ಮೂರು ಜನರಿಗೆ ತಗುಲಿತ್ತು; ಆದರೆ ಅದನ್ನು ಮುಚ್ಚಿಡಲಾಯಿತು ಎಂದು ವರದಿಯಾಗಿದೆ. ಇದೇ ರೀತಿ ಹಿಂದೆ ಚೀನಾದಲ್ಲಿ ಸಾರ್ಸ್ ರೋಗ ಕಂಡು ಬಂದಾಗ ಅದನ್ನು ಆ ದೇಶ ಮುಚ್ಚಿಟ್ಟ ಪರಿಣಾಮ ಜಗತ್ತಿನಾದ್ಯಾಂತ ಹರಡಲು ಅವಕಾಶ ಮಾಡಿಕೊಟ್ಟಿತ್ತು. ಜೀಕಾ ವೈರಸ್‌ ರೋಗವನ್ನು ಮುಚ್ಚಿಡಲು ಕಾರಣ ಗುಜರಾತ್‌ನಲ್ಲಿ ಅಂದು ನಡೆಯುತ್ತಿದ್ದ ಜಾಗತಿಕ ಬಂಡವಾಳ ಹೂಡಿಕೆಯ ಸಮಾವೇಶ ಎನ್ನಲಾಗುತ್ತಿದೆ. ಇಂಥ ಭಯಾನಕ ಕಾಯಿಲೆ ಕಂಡು ಬಂದಿದೆ – ಎಂದರೆ ನಮ್ಮ ಸಮಾವೇಶಕ್ಕೆ ಜನರು ಭಯಭೀತರಾಗಿ ಬರದೇ ಇರಬಹುದು ಎನ್ನುವ ಅಂದಾಜಿತ್ತು. ಅದು ರಾಜ್ಯದ ಮರ್ಯಾದೆಯ ಪ್ರಶ್ನೆ ಬೇರೆ! ಇತ್ತೀಚಿಗೆ ಈ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಯಿತು. ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದದ್ದು ಜೀಕಾ ತಗುಲಿದ ದಕ್ಷಿಣ ಅಮೆರಿಕ ಮತ್ತು ಅಮೆರಿಕಾ ದೇಶಗಳು. ಅಲ್ಲಿ ಕಟ್ಟೆಚ್ಚರ ವಹಿಸಿ ಅದನ್ನು ತಡೆಗಟ್ಟುವತ್ತ ಹೋರಾಟವನ್ನೂ ಮಾಡಲಾಯಿತು. ಆದರೆ ಅದು ಇಂದಿಗೂ ಮುಗಿಯದ ಕಥೆಯಾಗಿದೆ. ಆದರೆ ಇಂತಹ ಗಂಭೀರ ವಿಷಯಗಳ ಬಗ್ಗೆ ನಮ್ಮದು ಅಸಡ್ಡೆಯ ಮನೋಭಾವ. ನಮ್ಮ ಈ ಸ್ವಭಾವ ನಮ್ಮ ಜನರನ್ನು ಅಪಾಯಕ್ಕೆ ಸಿಲುಕಿಸಿದ್ದಲ್ಲದೇ, ಭಯಾನಕ ರೋಗ ಇತರರಿಗೂ ಹರಡುವಂತಾಯಿತು. ಮೊದಲೇ ಹಾನಿ ತಪ್ಪಿಸದಿದ್ದದ್ದು ನಮ್ಮ ಬೇಜವಾಬ್ದಾರಿಯ ಪರಮಾವಧಿಯೇ ಸರಿ. ಸೊಳ್ಳೆಯ ಸಾಮ್ರಾಜ್ಯವಾಗಿರುವ ನಮ್ಮ ದೇಶದಲ್ಲಿ ಜೀಕಾ ವೈರಸ್ ಹರಡುವ ಭೀತಿ ಇದ್ದೇ ಇದೆ. ಜೀಕಾ ತಗುಲಿದ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳ ತಲೆ ಉರಿಯೂತದಿಂದ ಆಕಾರ ಬದಲಾಗುವುದನ್ನು ಗಮನಿಸಬಹುದು. ಇದನ್ನು ‘ಮೈಕ್ರೋ–ಎನ್‌ಸೆಫೆಲೋಪತಿ’ ಎನ್ನುತ್ತಾರೆ. ಭ್ರೂಣದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಕಾಣುವ ದೋಷದ ಪರಿಣಾಮ ಅದು. ಇತ್ತೀಚೆಗೆ ಎಚ್ಚೆತ್ತುಕೊಂಡ ನಮ್ಮ ಸರ್ಕಾರ ದೇಶಾದ್ಯಂತ ಜೀಕಾ ವೈರಸ್‌ನ ಪತ್ತೆಗೆ ಮುಚ್ಚು ಮರೆಯಿಲ್ಲದೇ ಸಮರವನ್ನೇ ಸಾರಿದೆ.

ಇನ್ನೊಂದೆಡೆ – ಇಲ್ಲದ ಪ್ಲಾಸ್ಟಿಕ್ ಅಕ್ಕಿ–ಸಕ್ಕರೆ–ಹೂಕೋಸು–ಮೊಟ್ಟೆಗಳು ಜನರಲ್ಲಿ ಎಲ್ಲಿಲ್ಲದ ಭಯ ಹುಟ್ಟಿಸಿ ಸಾಮೂಹಿಕ ಸನ್ನಿಗೆ ಕಾರಣವಾಗಿದೆ. ಮೊಟ್ಟೆ ಸಾಗಿಸುತ್ತಿದ್ದ ವಾಹನಗಳನ್ನು ಜನರು ಅಡ್ಡಗಟ್ಟಿ ನಾಶ ಮಾಡಿದ್ದಾರೆ. ನಿತ್ಯ ಬಳಸುವ ಅಕ್ಕಿಯ ಮೇಲೆ ಶಂಕೆ ಬಂದು ಅದು ಪ್ಲಾಸ್ಟಿಕ್‌ನಂತೆ ಕಾಣಿಸಲಾರಂಭಿಸಿದೆ.

ಅನೇಕರು ‘ಇದು ಪ್ಲಾಸ್ಟಿಕ್ಕೇ’ ಎಂದು ನಂಬಿ ದೃಶ್ಯಮಾಧ್ಯಮದಲ್ಲಿ ಅವರ ‘ಸಂಶೋಧನೆ’ಯನ್ನೂ ಭಯವನ್ನೂ ಪ್ರಕಟಿಸುತ್ತಿದ್ದಾರೆ. ಅಂಥವರಿಗೆ ಸತ್ಯಾಂಶವನ್ನು ವಿವರಿಸಿ ಹೇಳಿದಾಗ ಫೇಸ್‌ಬುಕ್‌ನಲ್ಲಿ ಇದೆಯಲ್ಲ; ವಾಟ್ಸಾಪ್‌ನಲ್ಲಿ ಬಂತಲ್ಲ; ಯೂಟ್ಯೂಬ್‌ನಲ್ಲಿ ಇದೆಯಲ್ಲ; ಟೀವಿಯವರು ತೋರಿಸಿದರಲ್ಲ; ಪತ್ರಿಕೆಯಲ್ಲಿ ನೋಡಿದೆವಲ್ಲ’ – ಎನ್ನುತ್ತಾರೆ. ‘ನೀವು ನೋಡಿಲ್ಲವಾ?’ ಎಂದೂ ಪ್ರಶ್ನಿಸುತ್ತಾರೆ. ‘ಬೇಕಾದರೆ ಅವನ್ನು ಫಾರ್‌ವರ್ಡ್ ಮಾಡುತ್ತೇನೆ’ ಎನ್ನುತ್ತಾರೆ. ಪ್ಲಾಸ್ಟಿಕ್ ಆಹಾರ ಎಂಬ ಭ್ರಾಂತಿ ಇಷ್ಟು ಸುಲಭವಾಗಿ ಹರಡಿ ಜನರು ಅದನ್ನು ಸತ್ಯ ಎಂದು ನಂಬಿದ್ದು ಒಂದು ಅಧ್ಯಯನಕ್ಕೆ ಸೂಕ್ತ ವಿಷಯವಾಗಿದೆ. ಹಿಂದೆ ಹೀಗೆಯೇ ಸುದ್ದಿಯಾಗಿದ್ದ ‘ಗಣೇಶ ಹಾಲು ಕುಡಿದ’ – ಕೂಡ ಇದೇ ಸಾಲಿಗೆ ಸೇರುತ್ತದೆ. ವಸ್ತುತಃ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆ ಅಥವಾ ಹೂಕೋಸುಗಳು ಇಲ್ಲವೇ ಇಲ್ಲ; ಅವನ್ನು ಪತ್ತೆ ಮಾಡುವುದು ಎಂದರೆ ಇಲ್ಲದ ಕರಿಬೆಕ್ಕನ್ನು ಕತ್ತಲೆ ಕೋಣೆಯಲ್ಲಿ ಹುಡುಕುವಂತೆಯೇ ಸರಿ. (ಅವು ಆಟದ ಸಾಮಾನುಗಳಂತೆ ಇರಬಹುದು; ಆಹಾರವಾಗಿ ಅಲ್ಲ!) ಪ್ಲಾಸ್ಟಿಕ್‌ನಿಂದ ಅಕ್ಕಿಯನ್ನು ತಯಾರಿಸುವುದು ಎಂದರೆ ಅದು ಮನೆಯನ್ನು ಸುಟ್ಟು ಇಲಿಯನ್ನು ಓಡಿಸಿದಷ್ಟೇ ದುಬಾರಿಯಾದ ವಿದ್ಯಮಾನವಾಗುತ್ತದೆ. ನಕಲಿ ವ್ಯಾಪಾರವನ್ನು ಸಹ ಯಾರೂ ನಷ್ಟ ಮಾಡಿಕೊಳ್ಳಲು ನಡೆಸುವುದಿಲ್ಲವಷ್ಟೆ! ನಕಲಿಯನ್ನು ಮಾಡಿದರೆ ಅದು ಅಸಲಿಯಂತೆಯೇ ಇರಬೇಕು; ಮತ್ತು ಅದು ಅಸಲಿಯಂತೆಯೇ ವರ್ತಿಸಬೇಕು, ವ್ಯವಹಾರಕ್ಕೆ ಬರಬೇಕು. ಈಗಿನ ಪ್ಲಾಸ್ಟಿಕ್ ಆಹಾರದ ಸುದ್ದಿಗಳನ್ನು ಗಮನಿಸಿದರೆ, ಅದಾಗಲೇ ನಮ್ಮ ಹೊಟ್ಟೆ ಅಜೀರ್ಣಗೊಂಡ ಪ್ಲಾಸ್ಟಿಕ್ ಹಂಡೆಯಾಗಬೇಕಿತ್ತು ಅಥವಾ ಪ್ಲಾಸ್ಟಿಕ್ ಪೈಪ್ ಹೊರಬರಬೇಕಿತ್ತು! ಆಹಾರದಿಂದ ಪ್ರಕೃತಿಯಲ್ಲಿ ಕರಗಬಲ್ಲಂತಹ ಪ್ಲಾಸ್ಟಿಕನ್ನು ತಯಾರಿಸುತ್ತಿದ್ದಾರೆ; ಆದರೆ ಪ್ಲಾಸ್ಟಿಕ್‌ನಿಂದ ಆಹಾರವನ್ನಲ್ಲ.  ಪ್ಲಾಸ್ಟಿಕ್‌ನಿಂದ ಆಹಾರವನ್ನು ತಯಾರಿಸಿದರೆ ಅದು ಸುದ್ದಿಯಾಗುವಂಥ ವಿಷಯವೇ. ಪ್ಲಾಸ್ಟಿಕ್‌ನಿಂದ ಮೊಟ್ಟೆ ತಯಾರಿಸಬಲ್ಲವನಿಗೆ ನೊಬೆಲ್ ಬಹುಮಾನವನ್ನು ಕೊಡಲೇ ಬೇಕು! ಅದು ದೃಶ್ಯ ಮಾಧ್ಯಮಗಳಲ್ಲಿ ತೋರಿಸುವಂತೆ ಎರಡು ಬಕೆಟ್‌ಗಳನ್ನು ಮುಂದಿಟ್ಟುಕೊಂಡು ತಯಾರಿಸುವಷ್ಟು  ಸುಲಭವಂತೂ ಆಗಿರಲಾರದು. ಅತ್ಯಾಧುನಿಕ 3–ಡಿ ಪ್ರಿಂಟಿಂಗ್ ತಂತ್ರಜ್ಞಾನಕ್ಕೂ ಮೊಟ್ಟೆಯನ್ನು ಮಾಡುವುದು ಸವಾಲೇ. ಮೊಟ್ಟೆಯ ಆಕಾರ, ರಚನೆ ಮತ್ತು ವಿನ್ಯಾಸಗಳನ್ನು ಅನುಕರಿಸುವುದು ಅಸಾಧ್ಯವಾದ ಸವಾಲು. ‘It is indeed an architectural marvel and aesthetic sight for sore eyes’. ನಿತ್ಯಬಳಕೆಯ ವಸ್ತುಗಳಲ್ಲಿ ನಾವು ಇಂತಹ ಬೆರಗನ್ನು ಕಾಣೆವು.

ನಾವು ಸುಳ್ಳನ್ನು ಇಷ್ಟು ಸುಲಭವಾಗಿ ನಂಬುವುದಾದರೂ ಏಕೆ? ಅಪಾಯದ ಸೂಚನೆಯನ್ನು ಕಂಡಾಗ, ಅದನ್ನು ವಿಶ್ಲೇಷಿಸುವ–ವಿವೇಚಿಸುವ ಬದಲು, ನಂಬಿ ಹರಡುವುದು ನಾವು ವಿಕಸನದಲ್ಲಿ ಕಲಿತ ಪಾಠವೇ? ಕಾಡಿನಲ್ಲಿ ಪ್ರಾಣಿಯೊಂದು ತನಗೆ ಎದುರಾದ ಅಪಾಯವನ್ನು ಗ್ರಹಿಸಿ ಅದು ಶಬ್ದ ಮಾಡಿದರೆ, ಅದನ್ನು ಕೇಳುವ ಮಿಕ್ಕೆಲ್ಲ ಪ್ರಾಣಿಗಳು ಎಚ್ಚೆತ್ತುಕೊಂಡು ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ. ಅದು ಅವುಗಳಿಗೆ ಸ್ವಾಭಾವಿಕ ಗುಣ. ಅವುಗಳಿಗೆ ವಾಟ್ಸಾಪ್ –ಫೇಸ್‌ಬುಕ್‌ಗಳು ಇಲ್ಲ. ನಾವು ಸಂವಹನದಲ್ಲಿ ತಾಂತ್ರಿಕ ಕ್ರಾಂತಿಯನ್ನೇ ಮಾಡಿದ್ದೇವೆ. ಆದರೆ ಅದನ್ನು ಅಷ್ಟೇ ಜಾಣತನದಿಂದ ಲಾಭಕ್ಕಾಗಿ, ದುರುದ್ದೇಶದಿಂದ, ಇತರರನ್ನು ಹಾದಿ ತಪ್ಪಿಸಲು ಹೆಚ್ಚು ಹೆಚ್ಚು ಬಳಸುತ್ತಿದೇವೆ ಎಂದರೆ ತಪ್ಪಾಗಲಾರದು. Explanation is for exclusion ಎನ್ನುವುದುಂಟು. In the process we have become lame duck and easy prey.

ಮಾರ್ಕ್ ಟ್ವೈನ್ ಹೇಳಿದಂತೆ ‘ಸತ್ಯವು ಸಾಕ್ಸ್ ಹಾಕಿಕೊಳ್ಳುವುದರೊಳಗೆ, ಸುಳ್ಳು ಜಗತ್ತನ್ನು ಮೂರು ಸುತ್ತು ಹೊಡೆದಿರುತ್ತದೆ.’ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜನರು ತಮ್ಮ ತಮ್ಮ ಕರಟದೊಳಗೆ ಕದಲದೇ ಮೈಮರೆತು ಕುಳಿತಿರುತ್ತಾರೆ. ಜಗತ್ತೇ ನಮ್ಮ ಕೈಬೆರಳಿನಲ್ಲಿ ಎನ್ನುವುದು ಸರಿ. ಆದರೆ ಹುಡುಕಾಟದ ದಾರಿ ಗೊತ್ತಿಲ್ಲದೇ ಇದ್ದಾಗ ತಮ್ಮನ್ನು ತಾವೇ ಕಳೆದುಕೊಳ್ಳುವ ಅಪಾಯವೂ ಅಗಾಧ. ಅಲ್ಲದೇ, ಈಗಿನ ಕಾಲವನ್ನು ‘ಸುಳ್ಳು ಸುದ್ದಿಯ ಕಾಲ’, ‘ಸತ್ಯೋತ್ತರ ಕಾಲ’ ಎನ್ನುವುದೂ ಉಂಟು.

***

‘ಸತ್ಯವು ಸಾಕ್ಸ್ ಹಾಕಿಕೊಳ್ಳುವುದರೊಳಗೆ, ಸುಳ್ಳು ಜಗತ್ತನ್ನು ಮೂರು ಸುತ್ತು ಹೊಡೆದಿರುತ್ತದೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜನರು ತಮ್ಮ ತಮ್ಮ ಕರಟದೊಳಗೆ ಕದಲದೇ ಮೈಮರೆತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry